ಬೆಂಗಳೂರು: ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಇಡೀ ದೇಶದ ಗಮನವನ್ನು ಸೆಳೆದಿರುವ ಕೇಂದ್ರ. ದೇಶದ ಎರಡನೇ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆಯಾಗಿ, ನೂರಾರು ಪ್ರಾಣಿ, ಸಸ್ಯ ಪ್ರಬೇಧಗಳಿಗೆ ಆಸರೆಯಾಗಿರುವ ಇದರೊಳಗಿನ ಪಯಣವೇ ಒಂದು ರೋಚಕ ಅನುಭವ. ಇಲ್ಲಿನ ಸಫಾರಿ ಎಂದರೆ ಅದರು ಪ್ರಾಣಿ, ಪಕ್ಷಿ ಮತ್ತು ಜೀವವೈವಿಧ್ಯದ ಮಹಾ ದರ್ಶನ. ಹಾಗಿದ್ದರೆ ಏನೀ ಉದ್ಯಾನದ ವಿಶೇಷ?
1. ಅತ್ಯಂತ ವಿಶಾಲವಾದ ಉದ್ಯಾನ
ಮೈಸೂರು ಸಾಮ್ರಾಜ್ಯದ ಮಹಾರಾಜರಿಗೆ ಅತ್ಯಂತ ಪ್ರಿಯವಾದ ಪ್ರದೇಶವಿದು. ಹಿಂದೆ ಬೇಟೆಯಾಡುತ್ತಿದ್ದ ಪ್ರದೇಶವನ್ನು ಜೀವವೈವಿಧ್ಯದ ತಾಣವಾಗಿ 1931ರಲ್ಲೇ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1931ರಲ್ಲಿ 90 ಕಿ.ಮೀ. (35 ಚ.ಮೈಲು)ನ ಅಭಯಾರಣ್ಯವನ್ನು ನಿರ್ಮಿಸಿದ ಮಹಾರಾಜರು ಅದಕ್ಕೆ ವೇಣುಗೋಪಾಲ ವನ್ಯಜೀವಿ ಉದ್ಯಾನ ಎಂದು ಹೆಸರಿಟ್ಟರು. ಮುಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವು 1973ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ ಮೀಸಲು ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿತು. ಈಗ ಉದ್ಯಾನವು 874 ಚದರ ಕಿಲೋಮೀಟರ್ (337 ಚದರಮೈಲಿ) ಪ್ರದೇಶವನ್ನು ವ್ಯಾಪಿಸಿದೆ.
2. ನಾಲ್ಕು ಉದ್ಯಾನಗಳ ಸಂಪರ್ಕ
ಬಂಡೀಪುರ ರಾಷ್ಟ್ರೀಯ ಉದ್ಯಾನವು ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನ 643 ಚದರ ಕಿಮೀ, ಮುದುಮಲೈ ರಾಷ್ಟ್ರೀಯ ಉದ್ಯಾನವನ 320 ಚದರ ಕಿ.ಮೀ., ವಯನಾಡಿನ ವನ್ಯ ಜೀವಿ ಅಭಯಾರಣ್ಯ 344 ಚದರ ಕಿಮೀ ಹಾಗೂ ನೀಲಗಿರಿ ಮೀಸಲು ಅರಣ್ಯದೊಂದಿಗೆ ಸಂಪರ್ಕವನ್ನು ಹೊಂದಿದ್ದು ಇವೆಲ್ಲವೂ ಒಟ್ಟು ಸೇರಿದರೆ 2,183 ಚದರ ಕಿಮೀ ವಿಸ್ತೀರ್ಣವಾಗುತ್ತದೆ. ಇದು ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ ಮತ್ತು ದಕ್ಷಿಣ ಏಷ್ಯಾದ ಕಾಡು ಆನೆಗಳ ದೊಡ್ಡ ವಾಸಸ್ಥಾನವಾಗಿದೆ.
3. ಏನೇನಿದೆ ಬಂಡೀಪುರದಲ್ಲಿ? ಎಷ್ಟು ಹುಲಿಗಳಿವೆ?
ಬಂಡೀಪುರ ವನ್ಯಜೀವಿ ಉದ್ಯಾನವನ ದೇಶದ ಎರಡನೇ ಅತಿದೊಡ್ಡ ಹುಲಿಗಳ ಸಂರಕ್ಷಣಾ ನೆಲೆ. 1973ರಲ್ಲಿ ಇದನ್ನು ಟೈಗರ್ ರಿಸರ್ವ್ ಎಂದು ಘೋಷಿಸಿದಾಗ ಇಲ್ಲಿ 12 ಹುಲಿಗಳಿದ್ದವು. ಕಳೆದ ಗಣತಿಯ ಪ್ರಕಾರ ಇಲ್ಲಿನ ಹುಲಿಗಳ ಸಂಖ್ಯೆ 126. ಇಲ್ಲಿರುವುದು ಬೆಂಗಾಲ್ ಟೈಗರ್. ಆಸುಪಾಸಿನಲ್ಲಿರುವ ಹುಲಿಗಳ ಓಡಾಟದ ಲೆಕ್ಕಾಚಾರ ನೋಡಿದರೆ 173 ಎನ್ನುತ್ತಾರೆ ಅಧಿಕಾರಿಗಳು. 1997ರ ಗಣತಿ ಪ್ರಕಾರ ಇಲ್ಲಿರುವ ಆನೆಗಳ ಸಂಖ್ಯೆ 3471. ಉಳಿದಂತೆ ಚಿರತೆ, ಜಿಂಕೆ, ಕಾಡೆಮ್ಮೆಗಳು ಇಲ್ಲಿನ ಮೂಲ ನಿವಾಸಿಗಳು.
4. ಸಫಾರಿಗೆ ಇಲ್ಲಿದೆ ಅದ್ಭುತ ಅವಕಾಶ
ಅರಣ್ಯ ಇಲಾಖೆಯಿಂದ ಪ್ರತಿದಿನ ಎರಡು ಬಾರಿ ಅರಣ್ಯ ಸಫಾರಿ ನಡೆಸಲಾಗುತ್ತದೆ. ಬಸ್ ಸಫಾರಿ ಮತ್ತು ಜೀಪ್ ಸಫಾರಿಯ ವ್ಯವಸ್ಥೆ ಇಲ್ಲಿದೆ. ದೊಡ್ಡ ಗುಂಪುಗಳಲ್ಲಿರುವ ಪ್ರವಾಸಿಗರು ಅಗ್ಗದ ಮತ್ತು ಕಡಿಮೆ ಸಮಯದ ಎಂದರೆ 45ರಿಂದ 60 ನಿಮಿಷಗಳ ಬಸ್ ಸಫಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಸಣ್ಣ ಗುಂಪುಗಳಿಗೆ ಮತ್ತು ಕಾಡಿನ ಅನುಭವವನ್ನು ಇನ್ನಷ್ಟು ದೀರ್ಘ ಅವಧಿಗೆ ಪಡೆಯಬೇಕು ಎಂದು ಬಯಸುವವರಿಗೆ ಎರಡು ಗಂಟೆಗಳ ಜಿಪ್ಸಿ ಸಫಾರಿ ಇದೆ. ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3ರಿಂದ 6 ಗಂಟೆ ನಡುವೆ ಮಾತ್ರ ಈ ಸಫಾರಿ ಇರುತ್ತದೆ.
5. ಯಾವಾಗ ಭೇಟಿ ನೀಡುವುದು ಉತ್ತಮ?
ವರ್ಷದ ಎಲ್ಲ ಕಾಲದಲ್ಲೂ ಬಂಡೀಪುರ ಉದ್ಯಾನವನ ತೆರೆದಿರುತ್ತದೆ. ಆದರೆ, ಮುಂಗಾರು ನಂತರದ ಅಕ್ಟೋಬರ್‌ನಿಂದ ಫೆಬ್ರವರಿ ಬಂಡೀಪುರಕ್ಕೆ ಭೇಟಿ ನೀಡಲು ಉತ್ತಮ ಸಮಯ. ತಮ್ಮದೇ ಸ್ವಚ್ಛಂದ ಪರಿಸರದಲ್ಲಿ ಓಡಾಡುವ ಪ್ರಾಣಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಕಾಡಿನ ದೃಶ್ಯಗಳು ಮತ್ತು ಗಾಳಿ, ಹಕ್ಕಿಗಳ ಇಂಚರದ ಕಲರವ ಇಲ್ಲಿ ಆಹ್ಲಾದಕರ ಅನುಭವವನ್ನು ತರುತ್ತದೆ. ಪರಿಸರ ಹಸಿರಾಗಿರುತ್ತದೆ.
6. ಬಂಡೀಪುರಕ್ಕೆ ಹೋಗುವುದು ಹೇಗೆ?
ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತಾ ಪ್ರದೇಶ ಮಸೂರಿನಿಂದ 80 ಕಿಮೀ. ದೂರದ ಗುಂಡ್ಲುಪೇಟೆಯಲ್ಲಿದೆ. ಮೈಸೂರಿನಿಂದ ಬಸ್ ಸೌಲಭ್ಯ ಸಾಕಷ್ಟಿದೆ. ಖಾಸಗಿ ವಾಹನಗಳೂ ಸಿಗುತ್ತವೆ. ಆದರೆ, ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳಿಗೆ ಸಾಗಲು ಅನುಮತಿ ಇಲ್ಲ.
ಇದನ್ನೂ ಓದಿ : Tiger Facts : ರಾಷ್ಟ್ರೀಯ ಪ್ರಾಣಿ ಹುಲಿಯ ಕುತೂಹಲಕಾರಿ ಸಂಗತಿಗಳು; ಹುಲಿಯ ತೂಕ ಎಷ್ಟು, ಎಷ್ಟು ವರ್ಷ ಬದುಕುತ್ತವೆ?