Site icon Vistara News

Modi in Karnataka : ಹುಲಿ ಪ್ರಾಜೆಕ್ಟ್‌ ಕಾರ್ಯಕ್ರಮಕ್ಕೆ ಬರುವ ಪ್ರಧಾನಿ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡ್ತಾರಾ?

tiger prime minister

#image_title

ಚಾಮರಾಜನಗರ: ಹುಲಿ ಸಂರಕ್ಷಣೆಗಾಗಿ 1973ರಲ್ಲಿ ಆರಂಭವಾದ ಪ್ರಾಜೆಕ್ಟ್‌ ಟೈಗರ್‌ ಸ್ವರ್ಣಮಹೋತ್ಸವ ಕಾರ್ಯಕ್ರಮಕ್ಕಾಗಿ ಏಪ್ರಿಲ್‌ 9ರಂದು ಮೈಸೂರು ಮತ್ತು ಚಾಮರಾಜನಗರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಬಂಡೀಪುರ ಅರಣ್ಯ ಹಾಗೂ ಮದುಮಲೈ ಅರಣ್ಯ ಬಾರ್ಡರ್ ಸಫಾರಿ ರೋಡ್ ನಲ್ಲಿ ಸಫಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದೆ.

ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರು ಇತ್ತೀಚಿನ ಹುಲಿ ಗಣತಿ ವರದಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಇದರೊಂದಿಗೆ, ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಮೈಸೂರಿನಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಫಾರಿ ಕೂಡಾ ಮಾಡುವ ಸಾಧ್ಯತೆಗಳಿವೆ.

ಬಂಡೀಪುರದಲ್ಲಿ ಚುರುಕುಗೊಂಡಿರುವ ಸಿದ್ಧತೆ ಕಾರ್ಯ ಮತ್ತು ಪ್ರತ್ಯೇಕವಾಗಿ ಸಫಾರಿ ರೋಡ್‌ ಸಿದ್ಧವಾಗುತ್ತಿರುವುದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡಿದೆ. ಅಲ್ಲದೆ ಬಂಡೀಪುರಕ್ಕೆ ಇಂಟೆಲಿಜೆನ್ಸ್ ಪೊಲೀಸರು ಕೂಡಾ ಭೇಟಿ ನೀಡಿದ್ದಾರೆ.

ಏಪ್ರಿಲ್‌ 8, 9ರಂದು ಸಾರ್ವಜನಿಕರಿಗೆ ಸಫಾರಿ ಬಂದ್‌

ಮೋದಿ ಆಗಮನದ ಹಿನ್ನೆಲೆಯಲ್ಲಿ ಚಾಮರಾಜನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಬಂಡೀಪುರಕ್ಕೆ ಬಂದು ಸ್ಥಳ ‌ಪರಿಶೀಲನೆ ನಡೆಸಿದ್ದಾರೆ. ಮೇಲುಕಾಮನಹಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಕ್ರಮವನ್ನೂ ಕೈಗೊಳ್ಳಲಾಗಿದೆ.

ಮೋದಿ ಆಗಮನದ ಹಿನ್ನೆಲೆಯಲ್ಲಿ ಏ‌ಪ್ರಿಲ್‌ 8 ಮತ್ತು 9ರಂದು ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಲಾಗಿದೆ. ಏಪ್ರಿಲ್ 4ರಿಂದ 9ರ ವರೆಗೂ ಬಂಡೀಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅತಿಥಿಗೃಹ, ಕಾಟೇಜ್‌‌ಗಳ ಬುಕಿಂಗ್ ಸಹ ಬಂದ್ ಮಾಡಲಾಗಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಮತ್ತು ಎಸ್‌ಪಿ ಪದ್ಮಿನಿ ಸಾಹು ಅವರು ಸೂಕ್ತ ವ್ಯವಸ್ಥೆಗಾಗಿ ಸಿಬ್ಬಂದಿಗೆ ವಿವಿಧ ಕೆಲಸಗಳನ್ನು ನಿಯೋಜಿಸಿದ್ದಾರೆ.

ಪ್ರಾಜೆಕ್ಟ್‌ ಟೈಗರ್‌ ಸ್ವರ್ಣಮಹೋತ್ಸವ ಎನ್ನುವುದು ಮೂರು ದಿನಗಳ ಕಾರ್ಯಕ್ರಮವಾಗಿದ್ದು, ಪ್ರಧಾನಿಗಳು ಅದಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ Tiger Safari: ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡ 3 ಹುಲಿ; ಪ್ರವಾಸಿಗರು ಫುಲ್‌ ಖುಷ್‌

Exit mobile version