ಹುಬ್ಬಳ್ಳಿ: ಮಸೀದಿಗಳ ಮೇಲಿನ ಅನಧಿಕೃತ ಧ್ವನಿವರ್ಧಕಗಳ ತೆರವಿಗೆ ಒತ್ತಾಯಿಸಿ ಇಂದಿನಿಂದ (ಜೂನ್ 8) ರಾಜ್ಯಾದ್ಯಂತ ಶ್ರೀರಾಮಸೇನೆ ನೇತೃತ್ವದಲ್ಲಿ ಧ್ವನಿವರ್ಧಕ ನಿಷೇಧ ಅಭಿಯಾನ 2ನೇ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿವಿಧೆಡೆ ವಿವಿಧ ಹಿಂದೂಪರ ಸಂಘಟನೆಗಳಿಂದ ಬಿಜೆಪಿ ಶಾಸಕರ ಕಚೇರಿ, ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಮನೆ ಎದುರು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಸುಪ್ರೀಂಕೋರ್ಟ್ ಆದೇಶವನ್ಯನು ಧಿಕ್ಕರಿಸುತ್ತಿರುವ ಸರ್ಕಾರ ಎಂದು ಘೋಷಣೇ ಕೂಗಿ, ಅನಧೀಕೃತ ಲೌಡ ಸ್ಪೀಕರ್ ತೆರವಿಗೆ 15 ದಿನದ ಗಡುವು ನೀಡಿದ್ದರೂ ಸರ್ಕಾರ ಕೇರ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಪ್ರಮೋದ್ ಮುತಾಲಿಕ್ ಮಾತನಾಡಿ, ಒಂದು ವರ್ಷದಿಂದ ಆಜಾನ್ ಮೈಕ್ ನಿಷೇಧಕ್ಕೆ ಒತ್ತಾಯಿಸಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆದರೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬಿಜೆಪಿ ಶಾಸಕರು ಯಾರೂ ಬಾಯಿ ಬಿಡುತ್ತಿಲ್ಲ ಎಂದು ಕಿಡಿಕಾರಿದರು. ಬಿಜೆಪಿ ಶಾಸಕರ ಕಚೇರಿ ಒಂದು ಕಡೆ ಇದ್ರೆ, ಶಾಸಕರು ಮತ್ತೊಂದೆಡೆ ಇರ್ತಾರೆ. ಇವರಿಗೆ ಸಂಘ ಬೇಕು ಆದ್ರೆ ಸಂಘದ ಸಿದ್ಧಾಂತಗಳು ಬೇಡ. ಹಿಂದುಗಳು ಬೇಕು ಆದ್ರೆ ಹಿಂದುತ್ವ ಬೇಡ, ಮೈಕ್ ತೆರವಿಗೆ ನಾವು ಸಾಕಷ್ಟು ಮನವಿ ಮಾಡಿದ್ದೇವೆ. ಬಸವರಾಜ ಬೊಮ್ಮಾಯಿಯವರೇ ಒಮ್ಮೆ ಯೋಗಿಯನ್ನು ನೋಡಿ ಕಲೀರಿ. ಉತ್ತರ ಪ್ರದೇಶದಲ್ಲಿ 69 ಸಾವಿರ ಮೈಕ್‌ಗಳನ್ನು ತೆರವು ಗೊಳಿಸಿದ್ದಾರೆ. ನೀವು ಹತ್ತಾದ್ರು ಮೈಕ್ ಇಳಿಸಿ ಎಂದು ಕುಟುಕಿದರು.
ಇದನ್ನೂ ಓದಿ | ಲೌಡ್ ಸ್ಪೀಕರ್‌ಗೆ ಪರ್ಮಿಷನ್ ಕೋರಿ 3,489 ಅರ್ಜಿ, ಮಸೀದಿಗಳಿಂದಲೇ ಗರಿಷ್ಠ ಮನವಿ
ನಾವು ದೂರು ನೀಡಿದ್ರು ನಿಮ್ಮವರು ಕೇಳುತ್ತಿಲ್ಲ, ನಿಮ್ಮನ್ನು ಗೆಲ್ಲಿಸಿದ್ದು ಯಾಕೆ ಎಂದು ಬಿಜೆಪಿ ಶಾಸಕರನ್ನು ಪ್ರಶ್ನಿಸಿದ ಅವರು, ಆಜಾನ್ ವಿರುದ್ಧ ಹೋರಾಟ ನಡೆಸಿದರೂ ಮೈಕ್ ಡೌನ್ ಆಗಿಲ್ಲ. ಇದರಿಂದ ಜನತೆಗೆ ಕಿರಿಕಿರಿ ಆಗುತ್ತಿದ್ದರೂ ಯಾಕೆ ಬಿಜೆಪಿ ಶಾಸಕರು ನಿದ್ದೆ ಮಾಡುತ್ತಿದ್ದಾರೆ. ಇದು ಕೊನೆ ಎಚ್ಚರಿಕೆ, ಬಂದ್ ಮಾಡದಿದ್ದರೆ ಬಿಜೆಪಿ ಶಾಸಕರ ಮನೆ ಮುಂದೆ ಲೌಡ್ ಸ್ಪೀಕರ್ ಹಾಕುತ್ತೇವೆ. ಬಿಜೆಪಿ ಶಾಸಕರಿಗೆ ಜನರು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಹಿಂದೂ ಸಂಘಟನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಆ ಪಕ್ಷ ಶಾಸಕರಿಗೆ ಸೊಕ್ಕು ಬಂದಿದೆ. ನೀವು ಅಧಿಕಾರಕ್ಕೆ ಬರಲು ನಮ್ಮ ಸಂಘಟನೆಗಳ ಹೋರಾಟದ ಪಾಲಿದೆ. ಎಲ್ಲ ವಿಷಯದಲ್ಲೂ ನಾವೆ ದನಿ ಎತ್ತಬೇಕು, ನಾವೇ ಕೇಸ್ ಹಾಕಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ
ಮಸೀದಿಗಳ ಮೇಲಿನ ಅನಧಿಕೃತ ಧ್ವನಿವರ್ಧಕಗಳ ತೆರವಿಗೆ ಆಗ್ರಹಿಸಿ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಶ್ರೀರಾಮ ಸೇನೆಯಿಂದ ಎದುರು ಪ್ರತಿಭಟನೆ ನಡೆಸಲಾಯಿತು.
ಮೇ 9ರಂದು ಹಿಂದೂ ಸಂಘಟನೆಗಳ ಹೋರಾಟ ತೀವ್ರಗೊಂಡಾಗ ಸರ್ಕಾರ ಈ ಬಗ್ಗೆ ನೋಟಿಸ್ ಜಾರಿ ಮಾಡಿತ್ತು.
ಆದರೆ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಸೀದಿಗಳಲ್ಲಿ ಕಾನೂನು ಉಲ್ಲಂಘನೆ ಮಾಡಿ ಧ್ವನಿವರ್ಧಕ ಅಳವಡಿಸಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ್ ಒತ್ತಾಯ ಮಾಡಿದರು.
ಇದನ್ನೂ ಓದಿ | ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್ ಟ್ವಿಸ್ಟ್, ಆಂಜನೇಯ ದೇಗುಲ ಸತ್ಯಕ್ಕೆ ಸಿಕ್ಕಿತು ಸಾಕ್ಷ್ಯ