ಚಾಮರಾಜನಗರ: ಇಲ್ಲಿನ ಕೊಳ್ಳೇಗಾಲದ ಎಸಿ ಕೋರ್ಟ್‌ನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವಯಸ್ಸಾದ ಕಾಲದಲ್ಲಿ ಆಸರೆ ಆಗಬೇಕಾದ ಮಗನೊಬ್ಬ ಸುಳ್ಳು ಹೇಳಿ, ತಾಯಿಯ ಆಸ್ತಿಯನ್ನು ಬರೆಸಿಕೊಂಡಿದ್ದಲ್ಲದೇ, ಜೀವ ಬೆದರಿಕೆ ಹಾಕಿರುವ (Property fraud) ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಪ್ರಕರಣ ಸಂಬಂಧ ಕೋರ್ಟ್ ನೋಟಿಸ್ ಬಂದಿದ್ದರಿಂದ ಹಾಸಿಗೆ ಹಿಡಿದ ಸ್ಥಿತಿಯಲ್ಲಿಯೇ ಕೋರ್ಟ್‌ಗೆ ವೃದ್ಧೆ ಹಾಜರಾದ ಪ್ರಸಂಗ ನಡೆದಿದೆ.
ಹಜ್ ಯಾತ್ರೆಗೆ ಪಾಸ್‌ಪೋರ್ಟ್ ಮಾಡಿಸಿಕೊಡುವುದಾಗಿ ನಂಬಿಸಿ ತಾಯಿಯ ಹೆಸರಿನಲ್ಲಿದ್ದ ೩ ಎಕರೆ ಜಮೀನು ಜಾಗವನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಸುಳ್ಳು ಹೇಳಿ ಆಸ್ತಿ ಬರೆಸಿಕೊಂಡ ಮಗನ ಮೇಲೆ ತಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಚಾಮರಾಜನಗರ ನಿವಾಸಿ ಮುಮ್ತಾಜ್ ಬೇಗಂಗೆ (75) ವಂಚನೆಗೊಳಗಾದವರು. ಇವರ ಕೊನೆಯ ಮಗ ಅಬ್ದುಲ್ ರಜಾಕ್ ಅಲಿಯಾಸ್ ಸಿದ್ದಿಕ್ ವಂಚನೆ ಮಾಡಿರುವುದು ಗೊತ್ತಾಗಿದೆ. ಮುಮ್ತಾಜ್‌ಗೆ ಮೂವರು ಹೆಣ್ಣು ಮಕ್ಕಳು ಮತ್ತು 6 ಗಂಡು ಮಕ್ಕಳಿದ್ದಾರೆ. ಕಳೆದ 22 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಪತ್ನಿ ಹೆಸರಿಗೆ ಪತಿ ಸಿ.ಎಸ್.ನಿಸಾರ್ ಅಹ್ಮದ್ ಮೂರು ಎಕರೆ ಜಮೀನನ್ನು ಬರೆದಿದ್ದರು. ಆದರೆ, ಇದೇ ಜಮೀನು ಈಗ ಬೇಗಂ ಅವರಿಗೆ ಉರುಳಾಗಿ ಪರಿಣಮಿಸಿದೆ.
ವೃದ್ಧೆ ಬೇಗಂರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ನೆನಪಿನ ಶಕ್ತಿಯೂ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಬ್ದುಲ್ ರಜಾಕ್ ಅಲಿಯಾಸ್ ಸಿದ್ದಿಕ್, ಹಜ್ ಯಾತ್ರೆಗೆ ಹೋಗಲು ಪಾಸ್‌ಪೋರ್ಟ್ ಮಾಡಿಸುವುದಾಗಿ ಹೇಳಿದ್ದಾನೆ. ಬಳಿಕ ನೇರವಾಗಿ ಚಾಮರಾಜನಗರ ಸಬ್‌ರಿಜಿಸ್ಟ್ರಾರ್ ಆಫೀಸ್‌ಗೆ ಕರೆದುಕೊಂಡು ಹೋಗಿದ್ದು, ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿಗೆ ದಾನಪತ್ರವನ್ನು ಬರೆಸಿಕೊಂಡಿದ್ದಾನೆ. ಅಲ್ಲದೆ, ಸುಳ್ಳು ವಂಶವೃಕ್ಷ ಮಾಡಿಸಿಕೊಂಡು ಸಹಿ ಹಾಕಿಸಿಕೊಂಡು ವಂಚನೆ ಮಾಡಿರುವುದಾಗಿ ವೃದ್ಧೆ ಬೇಗಂ ಆರೋಪಿಸಿದ್ದಾರೆ.
ಇವೆಲ್ಲದರ ಜತೆಗೆ ಬ್ಯಾಂಕ್ ಅಕೌಂಟ್ ಮಾಡಿಸುವುದಾಗಿ ಹೇಳಿ ತಾಯಿಯಿಂದ ಸಹಿ ಹಾಕಿಸಿಕೊಂಡು 3,50,000 ರೂ. ಸಾಲ ತೆಗೆದುಕೊಂಡಿದ್ದಾನೆ. ಬ್ಯಾಂಕ್‌ನಿಂದ ಕೋರ್ಟ್ ಮುಖಾಂತರ ನೋಟಿಸ್ ಬಂದಾಗಲೇ, ಉಳಿದ ಎಲ್ಲ ಮಕ್ಕಳಿಗೆ ವಂಚನೆ ಮಾಡಿರುವ ವಿಷಯ ತಿಳಿದಿದೆ.
ಪ್ರಾಣ ಬೆದರಿಕೆ ಹಾಕಿದ ಮಗ, ಕೋರ್ಟ್ ಮೆಟ್ಟಿಲೇರಿದ ತಾಯಿ
ಮಗನ ಮೋಸ ಜಾಲ ತಿಳಿಯುತ್ತಿದ್ದಂತೆ ವೃದ್ಧೆ ಮುಮ್ತಾಜ್ ಬೇಗಂ ಲೋಕ ಅದಾಲತ್‌ಗೆ ಕೇಸ್ ಹಾಕಿದ್ದಾರೆ. ಈ ವೇಳೆ ಕೋರ್ಟ್‌ಗೆ ಮೊಕದ್ದಮೆಯನ್ನು ಕೊಟ್ಟ ಮೇಲೆ ಮಗನಿಂದ ಪ್ರಾಣ ಬೆದರಿಕೆ ಬಂದಿರುವುದಾಗಿ ಆರೋಪಿಸಿದ್ದಾರೆ. ಕೇಸ್ ವಾಪಸ್ ತೆಗೆದುಕೊಳ್ಳಬೇಕುಮ ಇಲ್ಲದಿದ್ದರೆ ʻನಿಮ್ಮನ್ನು ಅಪಹರಣ ಮಾಡಿ ಹೊರಗೆ ಕರೆದುಕೊಂಡು ಹೋಗಿ ಹೊಡೆದು ಸಾಯಿಸುತ್ತೇನೆ, ಸಹೋದರಿ ಆಯಿಷಾಳನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತ ಮಗನಿಗೆ ಹೆದರಿದ ತಾಯಿ ಮನೆ ಬಿಟ್ಟು ಹೋಗಿ ಮೈಸೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಅಬ್ದುಲ್ ಕಾರಿನಲ್ಲಿ 5-6 ಜನರನ್ನು ಕರೆದುಕೊಂಡು ಹೋಗಿ ಗಲಾಟೆ ಮಾಡಿ ಬಂದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇತ್ತ ಲೋಕ ಅದಾಲತ್‌ನಲ್ಲಿ ಕೇಸ್ ಹಾಕಿದ್ದರಿಂದ ಕೊಳ್ಳೇಗಾಲದ ಎಸಿ ಕೋರ್ಟ್‌ಗೆ ಹಾಜರಾಗಬೇಕೆಂದು ಮುಮ್ತಾಜ್ ಬೇಗಂಗೆ ನೋಟಿಸ್ ಬಂದಿದೆ. ಪ್ರಾಣ ಭಯ ಹಾಗೂ ಅನಾರೋಗ್ಯ ಕಾರಣದಿಂದಾಗಿ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ಬೇಗಂ ತಿಳಿಸಿದ್ದಾರೆ. ಅಲ್ಲದೆ, ಇವರ ಉಳಿದ ಮಕ್ಕಳು ಈ ಕೃತ್ಯದ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ.
ಅನಾರೋಗ್ಯ ಪೀಡಿತ ತಾಯಿಯನ್ನು ಮಂಚದಲ್ಲಿ ಹೊತ್ತು ತಂದ ಮಗ
ಆಸ್ತಿ ವಿವಾದ ಸಂಬಂಧ ವಿಚಾರಣೆ ಇದ್ದ ಕಾರಣಕ್ಕಾಗಿ ಆಸ್ಪತ್ರೆಯಲ್ಲಿದ್ದ ತಾಯಿಯನ್ನು ಮಂಚದ ಮೇಲೆಯೇ ಕೊಳ್ಳೇಗಾಲ ಕೋರ್ಟ್‌ಗೆ ಕರೆ ತಂದ ಘಟನೆ ಬುಧವಾರ ನಡೆದಿದೆ. ಪುತ್ರನ ವಿರುದ್ಧ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007ರ ಅಡಿ ಮುಮ್ತಾಜ್ ಬೇಗಂ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ವಂಚನೆ ಪ್ರಕರಣ ಸಂಬಂಧ ಮುಮ್ತಾಜ್‌ಗೆ ನೋಟಿಸ್ ಬಂದಿದ್ದರಿಂದ ಉಳಿದ ಮಕ್ಕಳು ಹಾಸಿಗೆ ಹಿಡಿದ ಸ್ಥಿತಿಯಲ್ಲಿ ಮಂಚದ ಸಮೇತವೇ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಈ ವೇಳೆ ಮಂಚದ ಮೇಲೆ ಬಂದ ವೃದ್ಧೆಯನ್ನು ಕಂಡು ವಿಚಾರಣೆ ನಡೆಸದೆ ಕೊಳ್ಳೇಗಾಲದ ಎಸಿ ಗೀತಾ ಹುಡೇದ ವಾಪಸ್ ಕಳುಹಿಸಿದ್ದಾರೆ.
ಅಲ್ಲದೆ, ಮಗನಿಂದ ಪ್ರಾಣ ಬೆದರಿಕೆ ಇದೆ ಎಂದು ಮುಮ್ತಾಜ್ ಬೇಗಂ ಮತ್ತು ಮಗಳು ಸಿ.ಎನ್.ನೂರ್ ಆಯಿಷಾ ದೂರು ನೀಡಿದ್ದರಿಂದ ರಕ್ಷಣೆ ನೀಡುವ ಸಂಬಂಧ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಅವರನ್ನು ಭೇಟಿ ಮಾಡಿಸಿ ಸಮಾಲೋಚನೆ ನಡೆಸಲಾಗಿದೆ ಎಂದು ಗೀತಾ ಹುಡೇದಾ ಹೇಳಿದ್ದಾರೆ.
ಇದನ್ನೂ ಓದಿ | Moral policing | ಬಸ್ಸಿನಲ್ಲಿ ಮೈ ತಾಗಿದ ವಿಚಾರದಲ್ಲಿ ತಗಾದೆ: ಮುಸ್ಲಿಂ ಕೂಲಿ ಕಾರ್ಮಿಕನ ಮೇಲೆ ಯದ್ವಾತದ್ವಾ ಹಲ್ಲೆ