Site icon Vistara News

ಬೆಂಗಳೂರಿನಲ್ಲಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ; 44 ಯುವತಿಯರನ್ನು ರಕ್ಷಿಸಿದ ಸಿಸಿಬಿ

Spa Accused

Prostitution In A Beauty Parlour In Bengaluru; CCB Rescues 48 Women

ಬೆಂಗಳೂರು: ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಾ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದು, ಬ್ಯೂಟಿ ಪಾರ್ಲರ್‌ (Beauty Parlour) ಹೆಸರಿನಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ (Prostitution) ದಂಧೆಯನ್ನು ಬಯಲಿಗೆಳೆದಿದ್ದಾರೆ. ಸುಮಾರು 4 ಗಂಟೆ ಬ್ಯೂಟಿ ಪಾರ್ಲರ್‌ನಲ್ಲಿ ಶೋಧ ನಡೆಸಿದ ಸಿಸಿಬಿ ಪೊಲೀಸರು 44 ಯುವತಿಯರನ್ನು ರಕ್ಷಿಸಿದ್ದಾರೆ. ಹಾಗೆಯೇ, 34 ಗಿರಾಕಿಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಅನಿಲ್‌ ಎಂಬ ಆಸಾಮಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಓಲ್ಡ್‌ ಮದ್ರಾಸ್‌ ರಸ್ತೆಯಲ್ಲಿರುವ ನಿರ್ವಾಣ ಇಂಟರ್‌ನ್ಯಾಷನಲ್‌ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಕುರಿತು ನಿಖರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿಯು ಸ್ಪಾ ಮೇಲೆ ದಾಳಿ ನಡೆಸಿದ್ದಾರೆ. ಕೂಲಂಕಷ ತಪಾಸಣೆ ಬಳಿಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬಯಲಾಗಿದೆ.

ಬಹುಮಹಡಿ ಕಟ್ಟದ 1 ಹಾಗೂ 6ನೇ ಫ್ಲೋರ್‌ನಲ್ಲಿ ಸ್ಪಾ ಇದ್ದು,‌ ಕಾನೂನು ಬಾಹಿರವಾಗಿರುವ ಬಾಡಿ ಟು ಬಾಡಿ ಮಸಾಜ್ ಸೇರಿ ಹಲವು ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು. ಹೊರ ರಾಜ್ಯದಿಂದ ಬಂದಿರುವ ಅನಿಲ್‌, ಹೊರ ರಾಜ್ಯಗಳು ಹಾಗೂ ಬೇರೆ ದೇಶಗಳಿಂದ ಯುವತಿಯರನ್ನು ಕರೆಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ. ಸುಮಾರು 34 ಕೋಣೆಗಳಲ್ಲಿ ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: Prostitution Racket: ನಿವೃತ್ತ ಪೊಲೀಸ್ ಮನೆಯಲ್ಲೇ ವೇಶ್ಯಾವಾಟಿಕೆ; 5 ಯುವತಿಯರ ರಕ್ಷಣೆ, ಇಬ್ಬರ ಬಂಧನ

ಐಷಾರಾಮಿ ಕಟ್ಟಡದಲ್ಲಿ, ಸುಸಜ್ಜಿತ ಕೋಣೆಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಹೊರಗಡೆ ಸ್ಪಾ ಎಂದು ಬೋರ್ಡ್‌ ನೇತುಹಾಕಿ, ಒಳಗೆ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಅನಿಲ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸ್ಪಾದಲ್ಲಿದ್ದ 44 ಯುವತಿಯರು ಹಾಗೂ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version