ಮೈಸೂರು: ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುವುದೇ ಎಲ್ಲಾ ಮಹನೀಯರಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಷಿಯಲ್ ಜಸ್ಟೀಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಡಾ. ಹರೀಶ್ ಕುಮಾರ್ ಅವರ “ ಆಧುನಿಕ ಭಾರತದ ನಿರ್ಮಾತೃ ಡಾ. ಬಾಬು ಜಗಜೀವನರಾಮ್ ಮತ್ತು ಬಾಬೂಜಿ ಚಿತ್ರ ಸಂಪುಟ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಗಜೀವನ್ ರಾಮ್ ಅವರು ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಮುತ್ಸದ್ದಿ ರಾಜಕಾರಣಿ ಹಾಗೂ ಪ್ರಜಾಪ್ರಭುತ್ವವಾದಿ. ದೇಶಕ್ಕೆ ಸ್ವಾತಂತ್ರ್ಯ ಬರಬೇಕೆಂದು ಹೋರಾಟ ಮಾಡಿದ ಎಲ್ಲರಿಗೂ ಈ ಮುಂದೆ ಎಂಥ ದೇಶ ನಿರ್ಮಾಣವಾಗಬೇಕೆಂಬ ಕನಸಿತ್ತು. ಇದಕ್ಕೆ ಪೂರಕವಾದ ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿ ಸೂಕ್ತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿದ್ದಾರೆ. ಸಮಾಜದಲ್ಲಿ ಹಸಿವು, ಬಡತನ, ನಿರುದ್ಯೋಗ, ದಾರಿದ್ರ್ಯ, ಅನಕ್ಷರತೆ ಎಲ್ಲವೂ ತೊಲಗಿ, ಸಮಾನ ಅವಕಾಶಗಳಿರುವ ಸಮಸಮಾಜ ನಿರ್ಮಾಣವಾಗಬೇಕು. ಅದಕ್ಕಾಗಿಯೇ ಪ್ರಯತ್ನ ಮಾಡಿದರು ಎಂದರು.
ಇದನ್ನೂ ಓದಿ | CM Siddaramaiah: ನನಗೆ ರಾಜಕೀಯದ ಗೀಳು ಬರಲು ಪ್ರೊ. ನಂಜುಂಡಸ್ವಾಮಿ, ಮಲ್ಲೇಶ್ ಕಾರಣ ಎಂದ ಸಿಎಂ
ಸಂವಿಧಾನದ ಉದ್ದೇಶ ಜಾರಿ ಮಾಡುವ ಪ್ರಯತ್ನ ನಮ್ಮದು
ಇತಿಹಾಸ ತಿರುಚುವುದನ್ನು ನಾವು ನೋಡಿದ್ದೇವೆ. ಮುಂದೆ ಏನಾಗಬೇಕೆಂಬುದನ್ನು ಚರ್ಚಿಸುವುದು ಉತ್ತಮ. ಅಂಬೇಡ್ಕರ್, ಗಾಂಧಿ, ನೆಹರು, ಜಗಜೀವನ್ ರಾಮ್ ಅವರು ಹೇಳಿದಂಥ ಭಾರತ ನಿರ್ಮಾಣವಾಗಬೇಕು. ನಮಗೆ ಅವಕಾಶ ಸಿಕ್ಕಿದಾಗ ಅಂಥ ಭಾರತ, ರಾಜ್ಯವನ್ನು ನಿರ್ಮಿಸಬೇಕು. ಆ ದಿಕ್ಕಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಎಲ್ಲಾ ಸರ್ಕಾರಗಳ ಉದ್ದೇಶ ಆದೇ ಆಗಬೇಕು. ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವುದೇ ಸಂವಿಧಾನದ ಉದ್ದೇಶ. ಅದನ್ನು ಜಾರಿ ಮಾಡುವ ಪ್ರಯತ್ನ ನಮ್ಮದು. ಅನೇಕ ಶಕ್ತಿಗಳು ಅದಕ್ಕೆ ವಿರುದ್ಧವಾಗಿವೆ. ಅಂಥ ಶಕ್ತಿಗಳ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ | CM Siddaramaiah: ವೈಜ್ಞಾನಿಕತೆ, ವೈಚಾರಿಕತೆ ಬೆಳೆದಾಗ ಮಾತ್ರ ಕಲಿತ ವಿದ್ಯೆಗೆ ಬೆಲೆ: ಸಿದ್ದರಾಮಯ್ಯ
ಪಟ್ಟಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅವರನ್ನು ಗುರುತಿಸಿ ಅವರಿಗೆ ಶಕ್ತಿ ಬಾರದಂತೆ ನೋಡಿಕೊಳ್ಳುವ ಕೆಲಸವಾಗಬೇಕು ಎಂದ ಅವರು, ಸಮಾಜಮುಖಿ ಬರವಣಿಗೆ ಇರಲಿ ಎಂದು ಹರೀಶ್ ಕುಮಾರ ಅವರಿಗೆ ಹಾರೈಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ