Site icon Vistara News

ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ

ಶಿವಮೊಗ್ಗ: ರಾಜ್ಯದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದು ಜಾಗರಣಾ ವೇದಿಕೆ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಹಿಂಜಾವೇ ಆಕ್ರೋಶ ವ್ಯಕ್ತಪಡಿಸಿದ್ದು, ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಭಜರಂಗ ದಳದ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಯುವಕರು ಹತ್ಯೆಗೈದಿದ್ದು, ಈ ಆರೋಪಿಗಳಿಗೆ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ರೋಶ ಸಹಜ ಎಂದ ಆರಗ

ಶಿವಮೊಗ್ಗದಲ್ಲಿ ಒಕ್ಕಲಿಗರ ಯುವ ಸಮಾವೇಶಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿ ಮಾತನಾಡಿ, ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರ ಆಕ್ರೋಶ ಸಹಜ. ಈಗಾಗಲೇ ಹರ್ಷನ ಕುಟುಂಬದವರೊಂದಿಗೆ ಮಾತನಾಡಿದ್ದು, ಅವರು ಸಮಧಾನದಿಂದ ಇದ್ದಾರೆ ಎಂದು ಹೇಳಿದರು.

ʼಶ್ರೀರಾಮ ಸೇನೆಯ 20ಕ್ಕೂ ಅಧಿಕ ಕಾರ್ಯಕರ್ತರು ನಮ್ಮ ಮನೆಗೆ ಆಗಮಿಸಿ ಮಾತುಕತೆ ಮಾಡಿದ್ದಾರೆ. ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ನನ್ನ ರಾಜೀನಾಮೆ ಕೇಳುವುದು ಸಹಜ. ಆದರೆ, ಗೃಹ ಸಚಿವನಾಗಿ ನನಗೆ ನನ್ನದೇ ಆದ ಇತಿಮಿತಿಗಳಿವೆ. ಹರ್ಷನ ಕುಟುಂಬದವರು ಕೇಳುವ ಪ್ರತಿ ವಿಷಯಕ್ಕೂ ಉತ್ತರಿಸಲಾರೆʼ ಎಂದು ಆರಗ ಹೇಳಿದರು.

ಹರ್ಷನ ಕುಟುಂಬದೊಂದಿಗಿದ್ದೇನೆ ಎಂದು ಹೇಳಿದ ಸಚಿವರು ತಪ್ಪಿತಸ್ಥರ ವಿರುದ್ಧ ನಿಶ್ಚಿತವಾಗಿ ಕ್ರಮ ಜರುಗಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಅವರನ್ನು ಎಳೆದು ತಂದು ಫೈರ್‌ ಮಾಡೋಕೆ ಆಗುತ್ತಾ?: ಹರ್ಷ ಆರೋಪಿಗಳ ಕುರಿತು ಆರಗ ಜ್ಞಾನೇಂದ್ರ

Exit mobile version