Site icon Vistara News

ಕಲ್ಲು ಹೊಡೆಯಬಹುದಿತ್ತು ಎಂದಿದ್ದ ತೇಜಸ್ವಿ ಸೂರ್ಯಗೆ ಹೂವು ಕೊಡಲು ಬಂದ ಕಾಂಗ್ರೆಸ್ಸಿಗರು ವಶಕ್ಕೆ

ತೇಜಸ್ವಿ ಸೂರ್ಯ

ಬೆಂಗಳೂರು : ‘ಕಾಂಗ್ರೆಸ್ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ನಿವಾಸದ ಮುಂದೆ ಶನಿವಾರ ಬೆಳಗ್ಗೆ ಕಾಂಗ್ರೆಸ್​ ಪ್ರತಿಭಟನೆ ನಡೆಸಿತು. ಗಿರಿನಗರದಲ್ಲಿರುವ ಸೂರ್ಯ ಮನೆ ಮುಂಭಾಗ ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್​ ಅವರ ನೇತೃತ್ವದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪ್ರತಿಭಟನಾಕಾರರನ್ನು ಗಿರಿನಗರ ಪೊಲೀಸರು ವಶಕ್ಕೆ ಪಡೆದುಕೊಂಡರು.

ಕಲ್ಲು ಹೊಡೆಯುವ ಮಾತನಾಡಿದ್ದ ತೇಜಸ್ವಿ ಸೂರ್ಯಗೆ ಕಲ್ಲುಗಳು ಹಾಗೂ ಹೂವುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾಗಿ ಕಾಂಗ್ರೆಸ್​ ನಾಯಕರು ತಿಳಿಸಿದ್ದಾರೆ. ಆದರೆ ಫ್ರೀಡಂ ಪಾರ್ಕ್​ ಹೊರತುಪಡಿಸಿ ಬೆಂಗಳೂರಿನಲ್ಲಿ ಬೇರೆಲ್ಲೂ ಪ್ರತಿಭಟನೆಗೆ ಅವಕಾಶವಿಲ್ಲದಿರುವುದರಿಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಬಂದೋಬಸ್ತ್‌ ನಡುವೆಯೇ ಸಂಸದ ತೇಜಸ್ವಿ ಸೂರ್ಯ ಗೃಹ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತೆ ಮೀನಾ ಹೂ ತಂದು ಪ್ರತಿಭಟನೆಗೆ ಮುಂದಾಗಿದ್ದರು. ಮೀನಾ ಅವರು ಮಾತನಾಡಿ ʻನಾವು ಇವತ್ತು ಶಾಂತಿಯುತವಾಗಿ ಪ್ರತಿಭಟನೆ ಮಾಡುವವರಿದ್ದೆವು.ಆದರೆ ನಮ್ಮೆಲ್ಲ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ. ಸಂಸದರಾಗಿ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಸರ್ಕಾರ ಇದ್ದರೆ ಕಲ್ಲು ಹೊಡೆಯ ಬಹುದಿತ್ತು ಎನ್ನುವ ಹೇಳಿಕೆ ಖಂಡನೀಯ. ಹಾಗಾಗಿ ನಾವು ಗುಲಾಬಿ ಹೂ ನೀಡಿ ಮೌನ ಪ್ರತಿಭಟನೆ ಮಾಡಿದ್ದೇವೆ. ಅವರು ನಮಗೆ ಕಲ್ಲು ಹೊಡೆದರೂ ನಾವು ಅವರಿಗೆ ಹೂವನ್ನು ನೀಡುತ್ತೇವೆʼ ಎಂದು ಹೇಳಿಕೆ ನೀಡಿದ್ದಾರೆ. ಹೂ ತಂದು ತೇಜಸ್ವಿ ಸೂರ್ಯ ಮನೆ ಮುಂದೆ ಇರಿಸಿದ ಮೀನಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕೇವಲ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಪ್ರತಿಭಟನಾಕಾರರನ್ನು ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಿರಿನಗರ ಸರ್ಕಲ್‌ನಿಂದ ತೇಜಸ್ವಿ ಸೂರ್ಯ ನಿವಾಸಕ್ಕೆ ರ್‍ಯಾಲಿ ಮಾಡಲು ಕಾರ್ಯಕರ್ತರು ಪ್ಲಾನ್‌ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ | Audio Leak | ಕಾಂಗ್ರೆಸ್ ಸರ್ಕಾರ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದ ತೇಜಸ್ವಿ!

ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್​ ಜತೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ಬಯಲಾಗಿತ್ತು. ಸಂದೀಪ್​ ಸೇರಿ ಯುವಮೋರ್ಚಾದ ಹಲವರು ರಾಜೀನಾಮೆ ನೀಡಿರುವ ಕುರಿತು ಅವರಿಬ್ಬರ ನಡುವೆ ಮಾತುಕತೆ ಆಡಿಯೋ ವೈರಲ್‌ ಆಗಿತ್ತು.

Exit mobile version