Site icon Vistara News

ಮುರುಘಾಶ್ರೀ ಪ್ರಕರಣ| ಬಂಧನಕ್ಕೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಆಕ್ರೋಶ, ಮಠಕ್ಕೆ ಮುತ್ತಿಗೆ ಬೆದರಿಕೆ

chitradurga protest

ಚಿತ್ರದುರ್ಗ: ಒಬ್ಬ ಪರಿಶಿಷ್ಟ ಜಾತಿ ಬಾಲಕಿ ಸೇರಿದಂತೆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಇಲ್ಲಿನ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ಬಂಧಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಮತ್ತು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾನಾ ಸಂಘಟನೆಗಳು ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿವೆ. ಜತೆಗೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರ ಕಾರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಸಾಮಾಜಿಕ ಸಂಘರ್ಷ ಸಮಿತಿ ಪ್ರತಿಭಟನೆ

ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿ ಐದಾರು ದಿನವಾದರೂ ಶ್ರೀಗಳನ್ನು ಬಂಧಿಸಿಲ್ಲ. ಪೋಕ್ಸೊ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿಯೂ ಪ್ರಕರಣ ದಾಖಲಾಗಿದೆ. ಆದರೂ ಶ್ರೀಗಳನ್ನು ಯಾಕೆ ಬಂಧಿಸಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬೀರಾವರ ಪ್ರಕಾಶ್ ಹೇಳಿದರು. ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಇಲಾಖೆ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಸ್ವಾಮೀಜಿ ಅವರನ್ನು ಬಂಧಿಸಬೇಕು, ಬಾಲಕಿಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಶ್ರೀಗಳನ್ನು ತಕ್ಷಣವೇ ಬಂಧಿಸದಿದ್ದರೆ ಸಾವಿರಾರು ಜನರನ್ನು ಸೇರಿಸಿ ಮುರುಘಾ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬೀರಾವರ ಪ್ರಕಾಶ್ ಎಚ್ಚರಿಸಿದರು.

ನ್ಯಾಯ ಕೊಡಿ ಇಲ್ಲ ವಿಷ ಕೊಡಿ
ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿದ್ದ ಡಿಸಿ ಅವರನ್ನೇ ತಡೆದ ಪ್ರತಿಭಟನಾಕಾರರು ʻʻಅನ್ಯಾಯದ ವಿರುದ್ಧ ಧ್ವನಿ ಎತ್ತದ ನಪುಂಸಕ ರಾಜಕಾರಣಿ ಗಳಿಗೆ ಧಿಕ್ಕಾರ, ಮಠದ ಕಳ್ಳಬೆಕ್ಕನ್ನು ಬಂಧಿಸಿʼʼ ಎಂದೆಲ್ಲ ಘೋಷಣೆ ಕೂಗಿದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ವಾರ್ಡನ್‌ ರಶ್ಮಿ ಪೊಲೀಸರ ವಶದಲ್ಲಿ, ಬಂಧಿಸಿಲ್ಲ ಎಂದ ಎಸ್‌ಪಿ


Exit mobile version