ಲಂಡನ್: ಇನ್ಫೋಸಿಸ್ ಸಂಸ್ಥಾಪಕ ಎನ್.ನಾರಾಯಣಮೂರ್ತಿ ಅವರ ಪತ್ನಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರಿಗೆ ಮಾರ್ಚ್ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ. ಸಮಾಜ ಸೇವೆಗಾಗಿ ಸುಧಾ ಮೂರ್ತಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಇದರ ಬೆನ್ನಲ್ಲೇ, ಬ್ರಿಟನ್ ಪ್ರಧಾನಿ, ಸುಧಾಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಅತ್ತೆಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಹೆಮ್ಮೆಯ ದಿನ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸುಧಾಮೂರ್ತಿ ಅವರ ಪುತ್ರಿ, ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಕೂಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಅಕ್ಷತಾ ಮೂರ್ತಿ ಅವರು ತಾಯಿಯ ಫೋಟೊ ಪೋಸ್ಟ್ ಮಾಡುವ ಜತೆಗೆ ಭಾವನಾತ್ಮಕ ಪೋಸ್ಟ್‌ಅನ್ನೂ ಶೇರ್ ಮಾಡಿದ್ದಾರೆ. “ನನ್ನ ತಾಯಿಯು ರಾಷ್ಟ್ರಪತಿ ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದನ್ನು ಮೂಕ ವಿಸ್ಮಿತಳಾಗಿ ನೋಡಿದೆ. ಸಮಾಜ ಸೇವೆಯನ್ನು ಪರಿಗಣಿಸಿ ತಾಯಿಗೆ ಉನ್ನತ ಪ್ರಶಸ್ತಿ ದೊರೆತಿದೆ” ಎಂದು ಹೇಳಿದ್ದರು. ಇದಕ್ಕೆ ರಿಷಿ ಸುನಕ್ ಪ್ರತಿಕ್ರಿಯಿಸಿ, “ಹೆಮ್ಮೆಯ ದಿನ” ಎಂದಿದ್ದಾರೆ.
ಅಕ್ಷತಾ ಮೂರ್ತಿ ಪೋಸ್ಟ್
“ನನ್ನ ತಾಯಿ ಎಂದಿಗೂ ಪ್ರಚಾರಕ್ಕಾಗಿ ಕೆಲಸ ಮಾಡಿದವರಲ್ಲ. ನಿಸ್ವಾರ್ಥ ಮನೋಭಾವದಿಂದ ಅವರು ಸೇವೆ ಮಾಡಿದ್ದಾರೆ. ನನ್ನ ಸಹೋದರ ಹಾಗೂ ನನಗೂ ಇಂತಹ ಸೇವೆ, ಮಾನವೀಯತೆ, ಪರಿಶ್ರಮದ ಮೌಲ್ಯಗಳನ್ನು ಅವರು ನಮ್ಮಲ್ಲಿ ತುಂಬಿದ್ದಾರೆ. ಅವರ ಸೇವೆಯನ್ನು ಸರ್ಕಾರ ಗುರುತಿಸಿರುವುದು ಸಂತಸದ ಸಂಗತಿ” ಎಂದಿದ್ದಾರೆ. ದೇವದಾಸಿಯರ ಏಳಿಗೆ, ಶಿಕ್ಷಣ, ನೆರೆ ಪರಿಹಾರ ಸೇರಿ ಹಲವು ರೀತಿಯಲ್ಲಿ ಸುಧಾಮೂರ್ತಿ ಅವರು ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ, ಬಾಲಿವುಡ್ ನಟಿ ರವೀನಾ ಟಂಡನ್, ಆರ್‌ಆರ್‌ಆರ್ ಚಿತ್ರದ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಎಂ.ಎಂ. ಕೀರವಾಣಿ ಅವರಿಗೂ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೇಶಾದ್ಯಂತ ಪದ್ಮ ಪ್ರಶಸ್ತಿಗಳಿಗೆ ಪಾತ್ರರಾದ ಗಣ್ಯರಿಗೆ ಪದ್ಮ ಪುರಸ್ಕಾರಗಳನ್ನು ರಾಷ್ಟ್ರಪತಿಗಳು ಪ್ರದಾನ ಮಾಡಿದರು.
ಪದ್ಮ ಪ್ರಶಸ್ತಿ ಪ್ರದಾನ ವೇಳೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವ ಸಂಪುಟ ಹಿರಿಯ ಸಹೋದ್ಯೋಗಿಗಳು ಈ ವೇಳೆ ಹಾಜರಿದ್ದರು. ಹಲವು ಪುರಸ್ಕೃತರ, ಪ್ರಶಸ್ತಿ ಸ್ವೀಕರಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ನಮಸ್ಕರಿಸಿ, ಪ್ರಶಸ್ತಿ ಸ್ವೀಕರಿಸಿದರು.
ಇದನ್ನೂ ಓದಿ: Padma Award: ಸಾಹಿತಿ ಎಸ್ ಎಲ್ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರದಾನ