ಬೆಂಗಳೂರು: ಈ ಹಿಂದೆ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ (PSI Exam Scam) ನಡೆದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲಾಗುತ್ತಿದೆ. ಜ. 23ರಂದು ಮರು ಪರೀಕ್ಷೆ ನಡೆಯುವುದರಿಂದ ಅಭ್ಯರ್ಥಿಗಳು ಅಂತಿಮ ಹಂತದ ಸಿದ್ಧತೆಯಲ್ಲಿದ್ದಾರೆ. ಆದರೆ, ಇದೀಗ ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿದೆ (PSI Exam Question Paper Leak) ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಿಎಸ್ಐ, ವಾಣಿಜ್ಯ ತೆರಿಗೆ ಪರಿವೀಕ್ಷಕರು (ಸಿಟಿಐ) ಪರೀಕ್ಷೆ ಪತ್ರಿಕೆ ಸೋರಿಕೆ ಆಗಿದೆ ಎಂದು ಆಕ್ರೋಶ ಹೊರಹಾಕಿರುವ ಅಭ್ಯರ್ಥಿಗಳು, ಚಂದ್ರ ಲೇಔಟ್ ಪೊಲೀಸ್ ಠಾಣೆ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಪಿಎಸ್ಐ, ಸಿಟಿಐ ಪರೀಕ್ಷೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪ್ರತಿಭಟನೆ ನಡೆಸಿದ ನೂರಾರು ಅಭ್ಯರ್ಥಿಗಳು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಪಿಎಸ್‌ಸಿಯಿಂದ ಜ.20, 21 ರಂದು ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ಪರೀಕ್ಷೆ (ಸಿಟಿಐ) ಹಾಗೂ ಕೆಇಎಯಿಂದ ಜ.23ರಂದು ಪಿಎಸ್‌ಐ ಪರೀಕ್ಷೆ ನಡೆಸಲಾಗುತ್ತಿದೆ.
ಇಂಟೆಲಿಜೆನ್ಸ್ ವಿಭಾಗದಲ್ಲಿ ಸಬ್ ಇನ್‌ಸ್ಪೆಪೆಕ್ಟರ್ ಆಗಿರುವ ಒಬ್ಬರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಸಬ್ ಇನ್‌ಸ್ಪೆಕ್ಟರ್ ಒಬ್ಬರು ಪೇಪರ್ ಲೀಕ್ ಮಾಡಿದ್ದಾರೆ ಎನ್ನಲಾಗಿದ್ದು, ಹಣಕ್ಕೆ ಡಿಮ್ಯಾಂಡ್ ಮಾಡಿರುವುದು, ಪರೀಕ್ಷೆಗಳ ವಿಚಾರವಾಗಿ ಡೀಲ್ ಬಗ್ಗೆ ಮಾತನಾಡಿರುವುದು ಎನ್ನಲಾದ ಆಡಿಯೊ ವಾಟ್ಸ್‌ಆ್ಯಪ್ ಸೇರಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು, ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮನವಿ ಪತ್ರದಲ್ಲೇನಿದೆ?
ಕುಣಿಗಲ್ ಮೂಲದ ಲಿಂಗಯ್ಯ ಎಚ್.ವಿ ಎಂಬಾತನು ಗುಪ್ತಚರ ಇಲಾಖೆಯ (ರಾಜ್ಯ ಪೊಲೀಸ್) ಸಬ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಈತ ಜ. 20ರಂದು ಕೆಪಿಎಸ್‌ಸಿ ವತಿಯಿಂದ ನಡೆಯಲಿರುವ ಸಿಟಿಐ ಮತ್ತು ಜ. 23ರಂದು ನಡೆಯಲಿರುವ 545 ಪಿಎಸ್‌ಐ ಹುದ್ದೆಯನ್ನು ಕೊಡಿಸುವುದಾಗಿ ಅಮಾಯಕ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಭರವಸೆ ನೀಡುತ್ತಿದ್ದಾನೆ. ಪಿಎಸ್‌ಐ ಹುದ್ದೆಗೆ 85 ಲಕ್ಷ ರೂ. ಮತ್ತು ಸಿಟಿಐ ಹುದ್ದೆಗೆ 25 ಲಕ್ಷ ರೂ. ಕೊಡಬೇಕೆಂದು ಹೇಳಿದ್ದಾನೆ. ಈಗಾಗಲೇ ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಯಾವ ಅಭ್ಯರ್ಥಿ ತನ್ನ ಹಾಲ್ ಟಿಕೆಟ್ ಕೊಟ್ಟು ಕಮಿಟ್ ಆಗಿರುತ್ತಾನೋ, ಅಂತಹ ಅಭ್ಯರ್ಥಿಯನ್ನು ರಾತ್ರಿ ಕರೆದುಕೊಂಡು ಹೋಗಿ ತಯಾರಿ ಮಾಡಿಸಿ, ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡುವುದಾಗಿ ಹೇಳಿದ್ದಾನೆ. ಇದಕ್ಕೆ ಸಂಬಂಧಪಟ್ಟ ಆಡಿಯೊ ಸಾಕ್ಷ್ಯಗಳನ್ನು ನೀಡಿದ್ದೇವೆ. ಕೂಡಲೇ ಆತನನ್ನು ಬಂಧಿಸಿ, ಕಾನೂನು ಕ್ರಮ ಜರಗಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಕಾಂತಕುಮಾರ್ ಮನವಿ ಮಾಡಿದ್ದಾರೆ.
ಪರೀಕ್ಷೆ ಮುಂದೂಡಲು ಒತ್ತಾಯ
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಕಾಂತಕುಮಾರ್ ಮಾತನಾಡಿ, 1.60 ಲಕ್ಷ ಅಭ್ಯರ್ಥಿಗಳು CTI ಪರೀಕ್ಷೆ ಬರೆಯಲಿದ್ದಾರೆ. ಲಿಂಗಯ್ಯ ಎಂಬ ಪಿಎಸ್ಐ ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೀವಿ, ಪೋಸ್ಟಿಂಗ್ ಕೊಡಿಸುತ್ತೇವೆ ಎಂದಿರೋ ಆಡಿಯೋ ಲಭ್ಯವಾಗಿದೆ. ಪಿಎಸ್‌ಐ ಎಕ್ಸಾಂ ಕೂಡ ಬರೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಕೆಪಿಎಸ್‌ಸಿ ಬೋರ್ಡ್ ಮುಂದೆ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ. ಆದರೆ ಪೋಷಕರನ್ನು ಒಳಗೆ ಭೇಟಿ ಮಾಡಲು ಕರೆಸಿಕೊಳ್ಳುತ್ತಾರೆ. ಜನವರಿ 21 ರಂದು CTI ಪರೀಕ್ಷೆ ಇದೆ, ಜನವರಿ 23 ರಂದು ನಡೆಯುವ ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೂ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ | Job Alert: ಸಿಆರ್‌ಪಿಎಫ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ
80 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರೆ. ಪವನ್, ರಜತ್ ಎಂಬಿಬ್ಬರ ಹೆಸರು ಬಳಕೆ ಮಾಡಿದ್ದಾರೆ. ರಾಜಕಾರಣಿಗಳ ಹೆಸರೂ ಬಳಕೆಯಾಗಿದೆ. ಹೀಗಾಗಿ ಕೆಪಿಎಸ್‌ಸಿ ಪರೀಕ್ಷೆ ಮುಂದೂಡಬೇಕು. CBRT ಮೂಲಕ ಪರೀಕ್ಷೆ ನಡೆಸುವಂತೆ ಆಗ್ರಹಿಸಿ, ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.