ಯಾದಗಿರಿ: ಪಿಎಸ್ಐ ಪರಶುರಾಮ ಸಾವು ಪ್ರಕರಣದ (PSI Parashuram Case) ಎ2 ಆರೋಪಿ ಪಂಪನಗೌಡ (ಸನ್ನಿಗೌಡ) ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಂಚಾಯತ್ ರಾಜ್ ಇಲಾಖೆ ಯೋಜನೆಯ 3 ಕೋಟಿ ಹಣ ಬಿಡುಗಡೆಗೂ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಪುತ್ರ ಕಮಿಷನ್ ಕೇಳಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣದ ತನಿಖೆಗೆ ಒತ್ತಾಯಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಭಾಧ್ಯಕ್ಷರಿಗೆ ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಪತ್ರ ಬರೆದಿದ್ದಾರೆ.
ಜಿಲ್ಲೆಯ ಐದು ತಾಲೂಕಿನ ಪಂಚಾಯತ್ ರಾಜ್ ಯೋಜನೆ ಹಣ ಬಿಡುಗಡೆಯಾಗಿದೆ. ಆದರೆ ವಡಗೇರಾ ತಾಲೂಕಿನ ಪಂಚಾಯತಿ ರಾಜ್ ಹಣ ಬಿಡುಗಡೆ ಆಗಿಲ್ಲ. ಇದರಿಂದ ವಡಗೇರಾ ತಾಲೂಕಿನಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ. ಶಾಸಕರ ಪುತ್ರ ಸನ್ನಿಗೌಡ ಹಣ ಬಿಡುಗಡೆಗೆ ಕಮಿಷನ್ ಕೇಳಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ಲಂಚಕ್ಕೆ ಬೇಡಿಕೆ ಇಟ್ಟು ಪಿಎಸ್‌ಐ ಪರಶುರಾಮ ಸಾವಿಗೆ ಕಾರಣವಾದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಒತ್ತಾಯಿಸಿದ್ದಾರೆ.
ಎರಡು ಪ್ರಕರಣ ಗಂಭೀರವಾಗಿ ಪರಿಗಣಿಸಿ ಶಾಸಕ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರ ವಿಧಾನಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಪತ್ರ ಬರೆದು ಮನವಿ ಮಾಡಿದ್ದಾರೆ.
ಯಾದಗಿರಿ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಸಿಐಡಿ ತಂಡ
ಪಿಎಸ್ಐ ಪರಶುರಾಮ ಸಾವು ಪ್ರಕರಣ ಸಂಬಂಧ ತನಿಖೆಗಾಗಿ ಯಾದಗಿರಿ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಸಿಐಡಿ ತಂಡ ಆಗಮಿಸಿದೆ. ಪ್ರಕರಣದ ಬಗ್ಗೆ ಯಾದಗಿರಿಯ ವಿವಿಧ ಠಾಣೆಗಳ ಪೊಲೀಸರಿಂದ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಡಿವೈಎಸ್ಪಿ ಕಚೇರಿಯತ್ತ ಪೊಲೀಸ್ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಸಿಪಿಐ ಸುನಿಲ್ ಮೂಲಿಮನಿ, ಗ್ರಾಮೀಣ ಠಾಣೆ ಪಿಎಸ್ಐ ಹಣಮಂತ ಬಂಕಲಗಿ ಆಗಮಿಸಿದ್ದಾರೆ.
ಯಾದಗಿರಿ ಪಿಎಸ್ಐ ಪರಶುರಾಮ್ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆ
ಬೆಂಗಳೂರು: ಯಾದಗಿರಿ ಪಿಎಸ್ಐ ಪರಶುರಾಮ್ ಸಾವು ಪ್ರಕರಣವನ್ನು (PSI Parashuram Case) ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿ ಡಿಜಿಪಿಗೆ ಪತ್ರ ಬರೆದ ಗೃಹ ಇಲಾಖೆ, ಪ್ರಕರಣದ ಕೂಲಂಕಷವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ಏನಿದು ಪ್ರಕರಣ?
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ(ಆ.2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.
ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಪಿಎಸ್‌ಐ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿ, ಸ್ಥಳೀಯ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ಶಾಸಕ, ಪುತ್ರನ ವಿರುದ್ಧ ದೂರು ನೀಡಿದ್ದರು.
ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿ ಪತಿ ಪರಶುರಾಮ ಮೃತಪಟ್ಟಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದರು. ಹೀಗಾಗಿ ಶಾಸಕ ಹಾಗೂ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.