Site icon Vistara News

PSI Scam | ಒಬ್ಬ ಮಂತ್ರಿ ಭ್ರಷ್ಟಾಚಾರ ಮಾಡಿದರೆ ಸರ್ಕಾರವನ್ನೇ ವಜಾ ಮಾಡ್ತೀರ?: ಮರುಪರೀಕ್ಷೆಗೆ ಅಭ್ಯರ್ಥಿಗಳ ವಿರೋಧ

ಬೆಂಗಗಳೂರು: ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಲು 54,289 ಅಭ್ಯರ್ಥಿಗಳು ಬರೆದಿದ್ದ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದು ಇದೀಗ ಮರು ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಕೆಲವರು ಅಕ್ರಮ ನಡೆಸಿದ್ದಾರೆ ಎನ್ನುವುದು ಈಗಾಗಲೆ ತಿಳಿದುಬಂದಿದೆ, ತನಿಖೆ ಮುಂದುವರಿದಂತೆ ಇನ್ನೂ ಅನೇಕ ಹೆಸರುಗಳು ಹೊರಬರಬಹುದು.

ಪ್ರಾಮಾಣಿಕವಾಗಿ ಆಯ್ಕೆ ಆಗಬಹುದಾಗಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದರಿಂದ ಮರುಪರೀಕ್ಷೆ ನಡೆಸುವುದು ಮೇಲ್ನೋಟಕ್ಕೆ ಸರಿ ಎನ್ನಿಸುತ್ತದೆ. ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಅಂತಿಮ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿದ್ದ ನೂರಾರು ಜನರಿಗೆ ಸಂಕಷ್ಟ ಶುರುವಾಗಿದೆ.

ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದದ್ದಕ್ಕೆ ಕುಟುಂಬದಲ್ಲಿ, ಸಮಾಜದಲ್ಲಿ ದೊರೆತ ಗೌರವ ಇದೀಗ ಕಳಂಕವಾಗಿ ಮಾರ್ಪಟ್ಟಿದೆ. ಅನೇಕ ತಿಂಗಳು ಕುಳಿತು ಪರೀಕ್ಷೆ ಬರೆದು ನಿಟ್ಟುಸಿರು ಬಿಡುವಾಗಲೇ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಿದೆ. ಅಕ್ರಮ ಎಸಗಿದವರಿಗೆ ಶಿಕ್ಷೆ ಕೊಡಿಸುವುದು ಒಕೆ, ಆದರೆ ಸರ್ಕಾರ ಮಾಡಿದ ತಪ್ಪಿಗಾಗಿ ಪ್ರಾಮಾಣಿಕರಿಗೂ ಶಿಕ್ಷೆ ಏಕೆ ಎನ್ನುವುದು ಅನೇಕ ಅಭ್ಯರ್ಥಿಗಳ ಅಳಲು. ಸರ್ಕಾರದಲ್ಲಿ ಮಂತ್ರಿಯೊಬ್ಬ ಹಗರಣ ಮಾಡಿದ್ದಕ್ಕೆ ಅವರೊಬ್ಬರ ರಾಜೀನಾಮೆ ಪಡೆಯಲಾಗುತ್ತದೆ. ಒಬ್ಬರ ಭ್ರಷ್ಟಾಚಾರಕ್ಕಾಗಿ ಸರ್ಕಾರವನ್ನೇ ವಜಾ ಮಾಡಲಾಗುತ್ತದೆಯೇ? ಹಾಗಾದರೆ, 545 ಜನರಲ್ಲಿ ಕೆಲವರು ಮಾತ್ರ ಭ್ರಷ್ಟಾಚಾರ ಮಾಡಿದ್ದಾರೆ. ಎಲ್ಲರಿಗೂ ಶಿಕ್ಷೆ ಏಕೆ ಎಂದು ಅನೇಕ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಮರುಪರೀಕ್ಷೆ ಸುದ್ದಿ ಕೇಳಿ ಘಾತವಾಗಿದೆ. ಅನೇಕ ವರ್ಷಗಳಿಂದ ಕಷ್ಟ ಪಟ್ಟು ಓದಿ ಪಾಸಾಗಿದ್ದೇವೆ. ಈಗ ಇದ್ದಕ್ಕಿದ್ದಂತೆ ಮರುಪರೀಕ್ಷೆ ಎಂದರೆ ಹೇಗೆ? ನಾವು ಆಯ್ಕೆಯಾದಾಗ ಮನೆಯವರಿಗೆ ಬಹಳ ಖುಷಿಯಾಗಿತ್ತು. ಈಗ ಎಲ್ಲರಿಗೂ ಆಘಾತವಾಗಿದೆ.

-ರೇಣುಕಾ ವಡ್ಡರ, ಬಾಗಲಕೋಟೆ

ಇಷ್ಟು ಕಷ್ಟ ಪಟ್ಟು ಪರೀಕ್ಷೆ ಬರೆದ ನಂತರ ಹೀಗೆ ತೀರ್ಮಾನ ಮಾಡಿರುವುದು ಆಘಾತವಾಗಿದೆ. ಎಷ್ಟು ಕಷ್ಟ ಪಟ್ಟು ನನ್ನ ಮಗಳು ಪಾಸಾಗಿದ್ದಾಳೆ ನಮಗೇ ಗೊತ್ತು. ಗಂಡ ಸತ್ತು 20 ವರ್ಷವಾದರೂ ಕಷ್ಟಪಟ್ಟು ಓದಿಸಿದ್ದೆವು. ಈ ನೋವಿನಲ್ಲಿ ಏನೇನು ಮಾನಸಿಕ ತೊಂದರೆ ಆಗುತ್ತದೆಯೋ ತಿಳಿದಿದಿಲ್ಲ. ಜನರಿಗೆ ಮುಖ ಹೇಗೆ ತೋರಿಸುವುದು ಹೇಗೆ ಗೊತ್ತಿಲ್ಲ. ನಮ್ಮ ಮನೆ ಪರಿಸ್ಥಿತಿ ಅವರಿಗೇನು ಗೊತ್ತು? ಎಲ್ಲರೂ ತಮ್ಮಂತೆಯೇ ಶ್ರೀಮಂತರು ಎಂದುಕೊಂಡಿರುತ್ತಾರೆ. ನನ್ನೊಬ್ಬಳ ಮಕ್ಕಳಲ್ಲ, ಎಲ್ಲ ಬಡ ಮಕ್ಕಳಿಗೂ ನೋವಾಗೊದೆ.

-ಕಾಳಮ್ಮ, ರೇಣುಕಾ ವಡ್ಡರ ತಾಯಿ

ಯುಪಿಎಸ್‌ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2016ರಿಂದಲೂ ತಯಾರಿ ಮಾಡುತ್ತಿದ್ದೇನೆ. ತಂದೆಯ ಸಾವಿನ ನೋವಿನಲ್ಲಿಯೇ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದೆ. ಹೈದರಾಬಾದ್‌ ಕರ್ನಾಟಕ ಕೋಟಾದಲ್ಲಿ 23ನೇ ರ‍್ಯಾಂಕ್‌ ಪಡೆದಿದ್ದೇನೆ. ಇದೀಗ ಸರ್ಕಾರ ಮರುಪರೀಕ್ಷೆ ಘೋಷಣೆ ಮಾಡಿದೆ. ಗೃಹ ಸಚಿವರ ನಿರ್ಧಾರ ತಪ್ಪು ಎನ್ನಿಸುತ್ತದೆ.

-ಚೈತನ್ಯ, ಗಂಗಾವತಿಯ ಅಭ್ಯರ್ಥಿ

ಅಕ್ರಮದ ಕುರಿತು ಈಗಾಗಲೆ ಸಿಐಡಿ ತನಿಖೆ ನಡೆಸುತ್ತಿದೆ. ನಾವೇನೂ ತಪ್ಪು ಮಾಡಿಲ್ಲ. ಈಗಾಗಲೆ ಸಿಐಡಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿ ಬಂದಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ. ಆದರೆ ಕಷ್ಟ ಪಟ್ಟು ಪ್ರಾಮಾಣಿಕವಾಗಿ ತೇರ್ಗಡೆಯಾದವರಿಗೂ ಶಿಕ್ಷೆ ನೀಡುವುದು ಸರಿಯಲ್ಲ.

-ನಾಗರತ್ನ, ಯಾದಗಿರಿ ಅಭ್ಯರ್ಥಿ
ಮರುಪರೀಕ್ಷೆಗೆ ಕುಮಾರಸ್ವಾಮಿ ವಿರೋಧ

ಮರುಪರೀಕ್ಷೆ ನಡೆಸಲಾಗುತ್ತದೆ ಎಂಬ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮರುಪರೀಕ್ಷೆ ಬೇಡ ಎಂದು ನೊಂದ ಅಭ್ಯರ್ಥಿಗಳ ನಿಯೋಗ ತಮ್ಮನ್ನು ಭೇಟಿ ಮಾಡಿದ ನಂತರ ಪ್ರತಿಕ್ರಿಯಿಸಿದರು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಇಷ್ಟು ಬೇಗನೆ ಮರುಪರೀಕ್ಷೆ ಎಂದರೆ ಹೇಗೆ? ಯಾರೋ ಕೆಲವರು ಮಾಆಡಿರುವ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಬೇಡ. ಈ ಪ್ರಕರಣದಲ್ಲಿ ಹಣ ಮಾಡಲು ಹೊರಟಿರವವರಿಗೆ ಶಿಕ್ಷೆ ಕೊಡಿಸಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಹೆಚ್ಚಿನ ಓದಿಗಾಗಿ | PSI Scam | 18 ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿವ್ಯಾ ಹಾಗರಗಿ ಅರೆಸ್ಟ್‌: ಒಟ್ಟು 18 ಆರೋಪಿಗಳ ಬಂಧನ

Exit mobile version