ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ (PSI Scam) ಸಂಬಂಧ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ನಿಂದ ಡೀಲ್ ಮುಗಿಸಿದ್ದ ಪ್ರಮುಖ 8 ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶರಣಬಸವೇಶ್ವರ ಆರ್ಟ್ಸ್, ಸೈನ್ಸ್, ಕಾಮರ್ಸ್ ಹಾಗೂ ಎಂ.ಎಸ್ ಇರಾನಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಇವರಾಗಿದ್ದು, ಇವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳಾದ ಕಲ್ಲಪ್ಪ, ಸಿದ್ದುಗೌಡ, ಈರಪ್ಪ, ಸೋಮನಾಥ, ರವಿರಾಜ, ಶ್ರೀಶೈಲ, ಭಗವಂತ್ ರಾಯ್ ಎಂಬ ಎಂಟು ಮಂದಿಯನ್ನು ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆರೋಪಿಗಳ ಹಿನ್ನೆಲೆ
ಆರ್.ಡಿ. ಪಾಟೀಲ್ ಸಂಬಂಧಿ ಆಗಿರುವ ಸಿದ್ಧುಗೌಡ ಆರೋಗ್ಯ ಇಲಾಖೆಯಲ್ಲಿ ಎಫ್‌ಡಿಎ ಆಗಿ ಕೆಲಸ ಮಾಡುತ್ತಿದ್ದಾರೆ. ಕಲ್ಲಪ್ಪ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು, ಸೋಮನಾಥ ವ್ಯವಸಾಯ ಮಾಡಿಕೊಂಡಿದ್ದಾರೆ. ವಿಜಯ್ ಕುಮಾರ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ರವಿರಾಜ ಮೊದಲನೇ ರ‍್ಯಾಂಕ್ ಪಡೆದಿರುವ ಆರೋಪಿಯಾಗಿದ್ದಾರೆ. ಪದವಿ ಪೂರ್ಣಗೊಳಿಸಿರುವ ಶ್ರೀಶೈಲ ಪಿಎಸ್ಐ ಹುದ್ದೆ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಭಗವಂತರಾಯ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈರಪ್ಪ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.
ಈ ಎಲ್ಲರಿಂದ ಆರ್.ಡಿ.ಪಾಟೀಲ್ ಸುಮಾರು 6 ಕೋಟಿ ರೂಪಾಯಿಯಷ್ಟು ಹಣವನ್ನು ಪಡೆದುಕೊಂಡಿದ್ದಾನೆ. ಎಲ್ಲರ ಬಳಿಯೂ ಹಣ ಪಡೆದಿದ್ದ ಪಾಟೀಲ್ ಬ್ಲೂ ಟೂಥ್ ಡಿವೈಸ್ ನೀಡಿದ್ದ ಎಂದು ಹೇಳಲಾಗಿದೆ.