Site icon Vistara News

PSI Scam | ಹೋರಾಟ ಮಾಡೋಣ ಬನ್ನಿ ಎಂದವನೇ A1; ಇಪ್ಪತ್ತೆರಡು ಅಭ್ಯರ್ಥಿಗಳ ವಿರುದ್ಧ FIR

ಬೆಂಗಳೂರು: ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಒಎಂಆರ್‌ ಶೀಟ್‌ ತಿದ್ದಿದ ಆರೋಪದಲ್ಲಿ ಸಿಐಡಿ ವಿಚಾರಣೆ ನಡೆಸುತ್ತಿದ್ದು, ಬೆಂಗಳೂರು ಕೇಂದ್ರದಲ್ಲಿ ಅಕ್ರಮ ನಡೆಸಿದ್ದಾರೆಂಬ ಆರೋಪದಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. 545 ಪಿಎಸ್‌ಐ ಆಯ್ಕೆ ಪರೀಕ್ಷೆಯನ್ನು ಸರ್ಕಾರ ಮತ್ತೆ ನಡೆಸಬಾರದು ಎಂದು ಬೆಂಗಳೂರಿನಲ್ಲಿ ಹೋರಾಡಲು ಅಭ್ಯರ್ಥಿಗಳಿಗೆ ಕರೆ ನೀಡಿ ನೇತೃತ್ವ ವಹಿಸಿದವರೇ ಎಫ್‌ಐಆರ್‌ನಲ್ಲಿ ಮೊದಲ ಆರೋಪಿ (A1) ಆಗಿರುವುದು ಇದೀಗ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತುಸು ಹಿನ್ನಡೆ ಉಂಟುಮಾಡಿದೆ.

ಪಿಎಸ್‌ ಪರೀಕ್ಷೆ ಅಕ್ರಮದ ಸಂಬಂಧ ಪೊಲೀಸರು ಈಗಾಗಲೆ ಮುಖ್ಯ ಆರೋಪಿ ದಿವ್ಯಾ ಹಾಗರಗಿ ಸೇರಿ 26 ಆರೋಪಿಗಳನ್ನು ಬಂಧಿಸಲಾಗಿದೆ. ಕೆಲವು ಪ್ರಮುಖ ಆರೋಪಿಗಳ ಬಂಧನವಾಗುತ್ತಿರುವಂತೆ ರುದ್ರಗೌಡ ಪಾಟೀಲ್‌, ಶಾಲೆಯ ಪ್ರಾಂಶುಪಾಲ ಕಾಶಿನಾತ್‌, ಮಂಜುನಾಥ ಮೇಳಕುಂಠಿ ಸೇರಿ ಅನೇಕರು ಸಿಐಡಿ ಪೊಲೀಸರೆದುರು ಹಾಜರಾಗುತ್ತಿದ್ದಾರೆ. ಇನ್ನೂ ಅನೇಕ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ | PSI Scam | ಒಬ್ಬ ಮಂತ್ರಿ ಭ್ರಷ್ಟಾಚಾರ ಮಾಡಿದರೆ ಸರ್ಕಾರವನ್ನೇ ವಜಾ ಮಾಡ್ತೀರ?: ಮರುಪರೀಕ್ಷೆಗೆ ಅಭ್ಯರ್ಥಿಗಳ ವಿರೋಧ

ಇದೇ ವೇಳೆ. ಕಲಬುರ್ಗಿಯಲ್ಲಷ್ಟೆ ಅಲ್ಲದೆ ಬೆಂಗಳೂರು ಹಾಗೂ ರಾಮನಗರದಲ್ಲೂ ಅನೇಕ ಅಭ್ಯರ್ಥಿಗಳು ಭ್ರಷ್ಟಾಚಾರ ಮಾರ್ಗದಲ್ಲಿ ಪರೀಕ್ಷೆ ಬರೆದು ತೇರ್ಗಡೆ ಆಗಿದ್ದ ಅಂಶ ತನಿಖೆ ವೇಳೆ ತಿಳಿದುಬಂದಿತ್ತು. ಬೆಂಗಳೂರು ವ್ಯಾಪ್ತಿಯಲ್ಲಿ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳ ಹಾಲ್‌ ಟಿಕೆಟ್‌ ಹಾಗೂ ಒಎಂಆರ್‌ ಹಾಲೆಯ ನಕಲನ್ನು ಹಾಜರುಪಡಿಸಲು ಸೂಚಿಸಲಾಗಿತ್ತು. ಈ ಪೈಕಿ ನಾಲ್ಕು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ದಾಖಲೆಗಳನ್ನು ಒದಗಿಸಿದ್ದರು. ಈ ಎಲ್ಲ ದಾಖಲೆಗಳನ್ನೂ ಪೊಲೀಸರು ಮಡಿವಾಳದಲ್ಲಿರುವ ಪೊಲೀಸ್‌ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಏಪ್ರಿಲ್‌ 28ರಂದು ವರದಿ ನೀಡಿದ್ದ ಎಫ್‌ಎಸ್‌ಎಲ್‌, 22 ಅಭ್ಯರ್ಥಿಗಳ ಒಎಂಆರ್‌ ಹಾಲೆಗಳನ್ನು ತಿದ್ದಿರುವ ಸಾಕ್ಷಿ ದೊರಕಿರುವುದಾಗಿ ತಿಳಿಸಿತ್ತು. ಅಭ್ಯರ್ಥಿಗಳು ನೀಡಿದ ಕಾರ್ಬನ್‌ ಒಎಂಆರ್‌ ಹಾಗೂ ಇಲಾಖೆಯಲ್ಲಿದ್ದ ಒಎಂಆರ್‌ ನಡುವೆ ವ್ಯತ್ಯಾಸ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ನೇತೃತ್ವ ವಹಿಸಿದ್ದವನೇ A1

ಎಫ್‌ಐಆರ್‌ ದಾಖಲಿಸಿರುವುದರಲ್ಲಿ ಅಚ್ಚರಿಯ ಸಂಗತಿಯೆಂದರೆ, ಪಿಎಸ್‌ಐ ಪರೀಕ್ಷೆಯನ್ನು ಸರ್ಕಾರ ಮತ್ತೆ ನಡೆಸಬಾರದು ಎಂದು ಅಭ್ಯರ್ಥಿಗಳಿಗೆ ಕರೆ ನೀಡಿ ಪ್ರತಿಭಟನೆಯನ್ನು ಸಂಘಟಿಸಿದ್ದ ಜಾಗೃತ್‌ ಎಂಬಾತನೇ ಮೊದಲ ಆರೋಪಿ ಎಂದು ನಮೂದಾಗಿದೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಆರೋಪಿಗಳ ಪಟ್ಟಿ ಈ ಕೆಳಕಂಡಂತಿದೆ.

ಆರೋಪಿ ಮಮತೇಶ್‌ ಗೌಡ

ಪ್ರತಿಭಟನೆ ನಡೆಸಲು ಪೊಲೀಸ್ ಠಾಣೆಯಲ್ಲಿ ಜಾಗೃತ್‌ ಅನುಮತಿ ಕೇಳಿದ್ದ. ನಂತರ ವಿವಿಧ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಪ್ರತಿಭಟನೆ ಮಾಡೋಣ, ನ್ಯಾಯ ಸಿಗುತ್ತದೆ ಎಂದು ಹೇಳಿದ್ದ. ಶನಿವಾರದಿಂದ ಆರಂಭವಾದ ಪ್ರತಿಭಟನೆಯ ನೇತೃತ್ವ ವಹಿಸಿ, ಮರುಪರೀಕ್ಷೆ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದ. ಇದೀಗ ಎಫ್‌ಐಆರ್‌ನಲ್ಲಿ ಮೊದಲ ಆರೋಪಿಯಾಗಿರುವ ಜಾಗೃತ್‌ ಕಾರಣಕ್ಕೆ ಪ್ರತಿಭಟನಾಕಾರರಿಗೆ ಬೇಸರ ಉಂಟಾಗಿದೆ. ತಮ್ಮೊಳಗೇ ಇರುವ ಅನೇಕರು ಅಕ್ರಮ ಎಸಗಿದವರು ಇದ್ದಾರೆ, ಇದರಿಂದ ಹೋರಾಟಕ್ಕೆ ಹಿನ್ನಡೆ ಆಗಬಹುದು ಎಂದು ಕೆಲ ಅಭ್ಯರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಸಿದ ಅಭ್ಯರ್ಥಿ ಹರ್ಷಿತಾ, ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ನೀಡಲಾಗುತ್ತಿದೆ? ನಾನು ದಕ್ಷಿಣ ಕನ್ನಡದವಳು, ಹಗರಣ ನಡೆದಿರುವುದು ಕಲಬುರ್ಗಿಯಲ್ಲಿ. ಎಲ್ಲೋ ನಡೆದಿರುವ ಅಪರಾಧಕ್ಕೆ ನನಗೇಕೆ ಶಿಕ್ಷೆ ನೀಡಬೇಕು? ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಪ್ರಾಮಾಣಿಕರಿಗೆ ಶಿಕ್ಷೆ ನೀಡಬಾರದು. ಕಾನೂನು ಪ್ರಕಾರವೂ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ರಕ್ತಚಂದನ ಕಳವು ಆರೋಪಿಯೂ ಸಿಕ್ಕಿಬಿದ್ದ

ಇದೀಗ ಎಫ್‌ಐಆರ್‌ ದಾಖಲಾಗಿರುವ ಮಮತೇಶ್‌ ಗೌಡ ಈಗಾಗಲೆ ಪೊಲೀಸ್‌ ಇಲಾಖೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಆಗಿದ್ದು, ಈ ಹಿಂದೆ ರಕ್ತಚಂದನ ಕಳವು ಪ್ರಕರಣದಲ್ಲಿ ಆರೋಫಿಯಾಗಿದ್ದು ತಿಳಿದುಬಂದಿದೆ. ಎಫ್‌ಐಆರ್‌ನಲ್ಲಿ 10ನೇ ಆರೋಪಿಯನ್ನಾಗಿ ಮಮತೇಶ್‌ ಗೌಡ ಹೆಸರಿದೆ. 2021ರ 15ರಂದು ರಂದು ಹೊಸಕೋಟೆ ಸಂತೆಗೇಟ್ ಬಳಿ ಟಾಟಾ ಏಸ್ ವಾಹನ ಅಡ್ಡಗಟ್ಟಿ ರಕ್ತಚಂದನ ವಶಕ್ಕೆ ಪಡೆದಿದ್ದ ಆರೋಪಿ, ನಂತರ ಅದನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪವಿತ್ತು. ಈ ಕುರಿತು ವಿಚಾರಣೆ ನಡೆದು ಆರೋಪಿಯನ್ನು ಜನವರಿಯಲ್ಲಿ ಅಮಾನತು ಮಾಡಲಾಗಿತ್ತು. ಇದೀಗ ಪಿಎಸ್‌ಐ ಪರೀಕ್ಷೆಯಲ್ಲಿ ಮಮತೇಶ್‌ ಗೌಡ 27ನೇ ರ‍್ಯಾಂಕ್‌ ಪಡೆದು ಆಯ್ಕೆಯಾಗಿದ್ದ. ಎಫ್‌ಎಸ್‌ಎಲ್‌ ವರದಿ ಆಧಾರದಲ್ಲಿ ಮಮತೇಶ್‌ ಗೌಡ ವಿರುದ್ಧ ಈಗ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ ದಾಖಲಾಗುವ ಸಮಯದಲ್ಲಿ ಒಟ್ಟು 9 ಅಭ್ಯರ್ಥಿಗಳನ್ನು ಬಂಧಿಸಲಾಗಿತ್ತು. ಇದೀಗ 12 ಅಭ್ಯರ್ಥಿಗಳ ಬಂಧನವಾಗಿದ್ದು, ಎಲ್ಲರನ್ನೂ 10 ದಿನಗಳ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಎಫ್‌ಐಆರ್‌ ದಾಖಲಾಗಿರುವ ಎಲ್ಲ ಅಭ್ಯರ್ಥಿಗಳನ್ನೂ ತಮ್ಮ ವಶಕ್ಕೆ ನೀಡುವಂತೆ, ಇಡೀ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕೋರಿದ್ದಾರೆ. ಸದ್ಯದಲ್ಲೆ ಸಿಐಡಿ ವಶಕ್ಕೆ ನೀಡಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ | PSI SCAM | ಮರುಪರೀಕ್ಷೆ ಘೋಷಿಸಿದ ಸರ್ಕಾರ

Exit mobile version