Site icon Vistara News

PSI Scam :‌ ಪಿಎಸ್‌ಐ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ; AGDP ಅಮೃತ್‌ ಪಾಲ್‌ಗೆ ಡಬಲ್‌ ಸಂಕಷ್ಟ

Amrit paul

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್‌ ಸರ್ಕಾರ (Congress Government) ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಎಲ್ಲ ಹಗರಣಗಳ ಮರುತನಿಖೆ ಮಾಡಲು ಮುಂದಾಗಿದೆ. ಚುನಾವಣಾಪೂರ್ವದಲ್ಲಿ ಆಡಿದ ಮಾತಿನಂತೆ ಒಂದೊಂದಾಗಿ ತನಿಖೆಗಳನ್ನು ಘೋಷಿಸುತ್ತಿದೆ. ಭಾರಿ ಸದ್ದು ಮಾಡಿದ ಬಿಟ್‌ಕಾಯಿನ್‌ ಹಗರಣದ ಮರುತನಿಖೆಗೆ ಆದೇಶ ನೀಡಿದ ಬೆನ್ನಿಗೇ ಇನ್ನೊಂದು ಆದೇಶ ಹೊರಬಿದ್ದಿದೆ. ಇದರ ಪ್ರಕಾರ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (Police Sub Inspector) ನೇಮಕ ಹಗರಣ (PSI Scam)ಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಎಡಿಜಿಪಿ ಅಮೃತ್‌ ಪಾಲ್‌ (ADGP Amrit Pal) ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಜತೆಗೆ ಅವರ ವಿರುದ್ಧ ಭ್ರಷ್ಟಾಚಾರ ಕಾಯಿದೆಯಡಿಯೂ (Police Sub Inspector) ತನಿಖೆಗೆ ಅನುಮತಿ ನೀಡಲಾಗಿದೆ.

ರಾಜ್ಯದಲ್ಲಿ ನಡೆದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ 575 ಮಂದಿಯಲ್ಲಿ ಬಹುತೇಕರು ಬ್ಲೂ ಟೂತ್‌ ಸೇರಿದಂತೆ ಎಲೆಕ್ಟ್ರಾನಿಕ್‌ ಸಾಧನಗಳ ಮೂಲಕ ಸರಿ ಉತ್ತರವನ್ನು ತಿಳಿದುಕೊಂಡು ಉತ್ತರಿಸಿದ್ದರು. ಆ ಮೂಲಕ ಹೆಚ್ಚು ಅಂಕ ಪಡೆದು ಉನ್ನತ ರ‍್ಯಾಂಕ್‌ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದರು ಎಂದು ಆಪಾದಿಸಲಾಗಿದೆ. ಇದರ ಜತೆಗೆ ಕೆಲವರು ಲಕ್ಷ ಲಕ್ಷ ಲಂಚ ಕೊಟ್ಟು ಈ ಹುದ್ದೆ ಗಿಟ್ಟಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ನಡೆದು 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಹಗರಣದಲ್ಲಿ ನೇರವಾಗಿ ಭಾಗಿಯಾದ ಆರೋಪ ಹೊತ್ತಿರುವ 57 ಮಂದಿ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಯಾವುದೇ ಪರೀಕ್ಷೆಯಲ್ಲಿ ಭಾಗಿಯಾಗದಂತೆ ಅವರನ್ನು ಡಿಬಾರ್‌ ಮಾಡಲಾಗಿದೆ.

ಇದರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಮುಖ್ಯಸ್ಥರೇ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿಯೂ ಆಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ದೋಷಾರೋಷಣೆ ಹೊರಿಸಲು ಸರ್ಕಾರದ ಅನುಮತಿ ಬೇಕಾಗುತ್ತದೆ. ಇದೀಗ ರಾಜ್ಯ ಸರ್ಕಾರ ಈ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ತನಿಖೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಜತೆಗೆ ಅಮೃತ್‌ ಪಾಲ್‌ ಅವರು ಕೆಲಸ ಕೊಡಿಸಲು ಲಂಚ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ತನಿಖೆಗೂ ಅನುಮತಿ ನೀಡಲಾಗಿದೆ. ಇದರಿಂದ ಅಮೃತ್‌ ಪಾಲ್‌ ಅವರಿಗೆ ಡಬಲ್‌ ಸಂಕಷ್ಟ ಎದುರಾಗಿದೆ.

ಅಮೃತ್‌ ಪಾಲ್‌ ವಿರುದ್ಧ ದೋಷಾರೋಪಣೆ (prosecution) ಮಾಡಲು ಅನುಮತಿ ನೀಡುವುದೆಂದರೆ ಹೆಚ್ಚಿನ ತನಿಖೆಗೆ ಅನುಮತಿ ನೀಡಿದಂತೆ. ಅಂದರೆ ಒಟ್ಟಾರೆ ಪ್ರಕರಣದ ಮರುತನಿಖೆಗೂ ಇದರಿಂದ ಸುಲಭವಾಗುತ್ತದೆ ಎಂದು ಅರ್ಥೈಸಲಾಗಿದೆ. ಹೀಗಾಗಿ ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಮರುಜೀವ ನೀಡುವುದು ಫಿಕ್ಸ್‌ ಎಂಬಂತಾಗಿದೆ.

ಅಮೃತ್‌ ಪಾಲ್‌ ಯಾರು?

1995ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಮೃತ್‌ ಪೌಲ್‌ ಅವರು ಮೂಲತಃ ಪಂಜಾಬ್‌ನವರು. 2000ರಿಂದ 2003ರವರೆಗೆ ಉಡುಪಿಯಲ್ಲಿ ಎಸ್‌ಪಿಯಾಗಿದ್ದ ಅವರು, 2014ರಲ್ಲಿ ಕರ್ನಾಟಕದ ಪಶ್ಚಿಮ ವಲಯದ ಐಜಿಪಿ ಆಗಿದ್ದರು. 2018ರಲ್ಲಿ ಸೆಂಟ್ರಲ್ ರೇಂಜ್ ಐಜಿಯಾದರು. 2019ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಎಡಿಜಿಪಿ ಆಗಿ ಬಡ್ತಿ ಪಡೆದರು.

ಪಿಎಸ್‌ಐ ಹಗರಣ ನಡೆಯುವಾಗ ಮತ್ತು ಅದು ಬಯಲಾಗುವವರೆಗೂ ಈ ಹುದ್ದೆಯಲ್ಲಿ ಇದ್ದರು. ಅಮೃತ್ ಪೌಲ್ ಅವರ ವಿರುದ್ಧ ಅಕ್ರಮದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಬೇರೆ ವಿಭಾಗಕ್ಕೆ ವರ್ಗ ಮಾಡಲಾಗಿತ್ತು. ನಂತರ ಬಂಧನ ಮಾಡಲಾಯಿತು.

ಇದನ್ನೂ ಓದಿ: PSI Scam: ಪಿಎಸ್‌ಐ ಹಗರಣದ 52 ಕಳಂಕಿತರು ಶಾಶ್ವತ ಡಿಬಾರ್‌, ಉಳಿದವರಿಗೆ ಒಲಿಯುತ್ತಾ ಅದೃಷ್ಟ?

ಹಗರಣದಲ್ಲಿ ಅಮೃತ್‌ ಪಾಲ್‌ ಪಾತ್ರವೇನು?

ಪಿಎಸ್‌ಐ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಖುದ್ದು ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಮುಖ್ಯಸ್ಥರೇ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಎಡಿಜಿಪಿ ಅಮೃತ್ ಪೌಲ್ ಅವರೇ ಡೀಲ್ ಕುದುರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಏಕೆಂದರೆ, ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ಇದರ ಕೀಲಿ ಕೈ ಅಮೃತ್ ಪೌಲ್ ಅವರ ಉಸ್ತುವಾರಿಯಲ್ಲೇ ಇರುತ್ತದೆ! ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ, ಅಮೃತ್ ಪೌಲ್ ಅವರನ್ನು ಸತತ ಮೂರು ಬಾರಿ ವಿಚಾರಣೆ ನಡೆಸಿತ್ತು. 2022ರ ಜುಲೈ 4ರಂದು ನಾಲ್ಕನೇ ಬಾರಿ ವಿಚಾರಣೆಗೆ ಕರೆದು ಬಂಧಿಸಿದೆ. ಅಂದರೆ 2023ರ ಜುಲೈ 3ಕ್ಕೆ ಅನ್ವಯವಾಗುವಂತೆ ಸರಿಯಾಗಿ ಒಂದು ವರ್ಷದ ಹಿಂದೆ ಬಂಧನ ನಡೆದಿದೆ.

ಈ ಹಗರಣದಲ್ಲಿ ಬಿಜೆಪಿ ಸರ್ಕಾರದ ಕೆಲವು ಮಂತ್ರಿಗಳೂ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳಿರುವುದರಿಂದ ಕಾಂಗ್ರೆಸ್‌ ಸರ್ಕಾರ ಇಡುವ ಪ್ರತಿ ಹೆಜ್ಜೆಯೂ ಮಹತ್ವದ್ದಾಗಿದೆ.

Exit mobile version