Site icon Vistara News

PSI Scam : ಮರುಪರೀಕ್ಷೆ ಮಾಡ್ತೀರಾ ಇಲ್ವಾ ಹೇಳಿ; ಸರ್ಕಾರಕ್ಕೆ ಗಡುವು ನೀಡಿದ ಹೈಕೋರ್ಟ್‌

PSI Scam in karnataka

#image_title

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (Police Sub Inspector) ನೇಮಕಾತಿ ಪರೀಕ್ಷಾ ಅಕ್ರಮದ (PSI Scam) ಆರೋಪ ಪಟ್ಟಿಯಲ್ಲಿ (Chargesheet) ಹೆಸರಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಆಯ್ಕೆ ಪಟ್ಟಿಯಲ್ಲಿರುವ ಉಳಿದ ಅಭ್ಯರ್ಥಿಗಳಿಗಷ್ಟೇ ಮತ್ತೆ ಪರೀಕ್ಷೆ ನಡೆಸುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್‌ (Karnataka High Court) ಸೂಚಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ (Karnataka Government) ಕರ್ನಾಟಕ ಹೈಕೋರ್ಟ್ ಜುಲೈ 5ರವರೆಗೆ ಕಾಲಾವಕಾಶ ನೀಡಿದ್ದು, ಅದರ ಒಳಗೆ ತೀರ್ಮಾನವನ್ನು ತಿಳಿಸುವಂತೆ ಆದೇಶಿಸಿದೆ.

ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ಹಿಂಪಡೆಯಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಮುಂದಿನ ನಡೆಗಳ ಬಗ್ಗೆ ಪ್ರಶ್ನೆ ಮಾಡಿತು.

ಜೂನ್‌ 15ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಲ್ಲಿ ಆರೋಪ ಪಟ್ಟಿಯಲ್ಲಿ ಹೆಸರಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪರೀಕ್ಷೆ ನಡೆಸಬಹುದೇ, ಆ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಅವರನ್ನು ಹುದ್ದೆಗೆ ಪರಿಗಣಿಸಲು ಸಾಧ್ಯವೇ ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಅಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿತ್ತು.

ಮಂಗಳವಾರ ಅರ್ಜಿ ವಿಚಾರಣೆಗೆ ಬಂದಾಗ ಎಜಿ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್ ಸೂಚನೆಯಂತೆ ಆರೋಪ ಪಟ್ಟಿಯಲ್ಲಿ ಹೆಸರಿರದ ಅಭ್ಯರ್ಥಿಗಳಿಗಷ್ಟೇ ಮರು ಪರೀಕ್ಷೆ ನಡೆಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಕುರಿತ ನಿರ್ಧಾರ ತಿಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠವು ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.

ಇದನ್ನೂ ಓದಿ: PSI Scam: ಪಿಎಸ್‌ಐ ಹಗರಣದ 52 ಕಳಂಕಿತರು ಶಾಶ್ವತ ಡಿಬಾರ್‌, ಉಳಿದವರಿಗೆ ಒಲಿಯುತ್ತಾ ಅದೃಷ್ಟ?

ರಾಜ್ಯ ಸರ್ಕಾರ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಮಾಡಿದ ಆರೋಪದೊಂದಿಗೆ ಚಾರ್ಜ್‌ಶೀಟ್‌ನಲ್ಲಿ ಹೆಸರು ದಾಖಲಾದ 52 ಮಂದಿ ಅಭ್ಯರ್ಥಿಗಳನ್ನು ಪೊಲೀಸ್‌ ಇಲಾಖೆಯಲ್ಲಿ ನಡೆಯುವ ಎಲ್ಲ ಪರೀಕ್ಷೆಗಳಿಂದ ಡಿಬಾರ್‌ ಮಾಡಿತ್ತು. ಇವರು ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಪರೀಕ್ಷೆಯಲ್ಲಿ ಕೂರುವಂತಿಲ್ಲ ಎಂದು ಹೇಳಿತ್ತು. ಆದರೆ, ಉಳಿದ ಅಭ್ಯರ್ಥಿಗಳ ಕಥೆಯೇನು? ಅವರಿಗೆ ಮರು ಪರೀಕ್ಷೆ ನಡೆಸಲಾಗುತ್ತದೆಯೇ? ಅಂದಿನ ನೇಮಕಾತಿ ಪಟ್ಟಿಯಿಂದ ಈ ಕಳಂಕಿತರನ್ನು ಕೈಬಿಟ್ಟು ಹೊಸ ಪಟ್ಟಿ ತಯಾರಿಸುವುದೇ ಎನ್ನುವುದರ ಚರ್ಚೆ ನಡೆಯುತ್ತಿದೆ.

Exit mobile version