Site icon Vistara News

PSI Scam | ಪಿಎಸ್‌ಐ ಹಗರಣದ ಪ್ರಧಾನ ಆರೋಪಿ ದಿವ್ಯಾ ಹಾಗರಗಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

divya hagaragi

ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ನಿರಾಕರಿಸಿದೆ.

ಬಿಜೆಪಿಯ ನಾಯಕಿಯೂ ಆಗಿರುವ ಕಲಬುರ್ಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) ಸಹಾಯಕ ಕಮಾಡೆಂಟ್‌ (ಡಿವೈಎಸ್ಪಿ) ವೈಜನಾಥ್‌ ಕಲ್ಯಾಣಿ ರೇವೂರ ಅವರ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ವಜಾ ಮಾಡಿದೆ.

ದಿವ್ಯಾ ಮತ್ತು ವೈಜನಾಥ್‌ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ವಜಾ ಮಾಡಿದೆ.

ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವೀರೇಶ ನಿಡಗುಂದಾ ಎಂಬ ಅಭ್ಯರ್ಥಿ ಬಂಧನದೊಂದಿಗೆ ಅಕ್ರಮ ಬಯಲಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಕಲಬುರ್ಗಿಯ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120 (ಬಿ), 465, 468, 471, 410 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿದೆ.

ವೈಜನಾಥ್‌ ಅವರು ಅಭ್ಯರ್ಥಿಗಳು ಅಕ್ರಮವಾಗಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ನೆರವಾದ ಆರೋಪ ಎದುರಿಸುತ್ತಿದ್ದಾರೆ. ಏಪ್ರಿಲ್‌ 29ರಂದು ದಿವ್ಯಾ ಹಾಗರಗಿ ಸೇರಿದಂತೆ ಐವರನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದರು. ಮೇ 6ರಂದು ವೈಜನಾಥ್‌ ಅವರನ್ನು ಬಂಧಿಸಲಾಗಿತ್ತು. ದಿವ್ಯಾ ಹಾಗರಗಿ ಅವರು ಪ್ರಕರಣದಲ್ಲಿ 18ನೇ ಆರೋಪಿಯಾಗಿದ್ದಾರೆ.

ಇದನ್ನೂ ಓದಿ | PSI scam | ಹಗರಣದ ಮಧ್ಯವರ್ತಿಗಳು ಸೇರಿದಂತೆ 9 ಮಂದಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು

Exit mobile version