Site icon Vistara News

PSI Scam : ಪಿಎಸ್‌ಐ ಹಗರಣದಲ್ಲಿ ವಿಶೇಷ ಪರೀಕ್ಷೆ ಇಲ್ಲ, ಮರುಪರೀಕ್ಷೆ ಮಾತ್ರ; ಸರ್ಕಾರ ಸ್ಪಷ್ಟ ನಿಲುವು

PSI Scam in karnataka

#image_title

ಬೆಂಗಳೂರು: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ (Police sub Inspectors) ನೇಮಕಾತಿ ಹಗರಣಕ್ಕೆ (PSI Scam) ಸಂಬಂಧಿಸಿ ಸರ್ಕಾರ (Government of Karnataka) ಕೋರ್ಟ್‌ಗೆ ತನ್ನ ಸ್ಪಷ್ಟ ನಿಲುವನ್ನು ತಿಳಿಸಿದೆ. ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಏಕೆ ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಹೈಕೋರ್ಟ್‌ಗೆ (Karnataka High court) ವಿವರಿಸಿದೆ.

ರಾಜ್ಯದಲ್ಲಿ ನಡೆದ ಪಿಎಸ್‌ಐ ಪರೀಕ್ಷೆ ಭಾರಿ ಅಕ್ರಮದ ಗೂಡಾಗಿ ಗೊಂದಲ ಸೃಷ್ಟಿಯಾಗಿತ್ತು. ಇದರಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿತ್ತು. ಪರೀಕ್ಷೆಯ ಹಂತದಲ್ಲೇ ಅಕ್ರಮಗಳು ನಡೆದಿದ್ದರೆ, ನೇಮಕಾತಿಯಲ್ಲೂ ಅಕ್ರಮಗಳ ಸರಮಾಲೆಯೇ ನಡೆದಿತ್ತು. ಇದರ ಬಗ್ಗೆ ತನಿಖೆ ನಡೆದು 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ನೇಮಕಾತಿ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ಇದ್ದವರೆಲ್ಲರೂ ಅಕ್ರಮಗಳಲ್ಲಿ ಭಾಗಿಯಾದವರು ಎಂಬ ಆರೋಪ ಕೇಳಿಬಂದಿತ್ತು. ಅಂತಿಮವಾಗಿ ಸರ್ಕಾರ ಸುಮಾರು 57 ಮಂದಿ ಕಳಂಕಿತರನ್ನು ಯಾವುದೇ ಪೊಲೀಸ್‌ ಪರೀಕ್ಷೆಯಲ್ಲಿ ಭಾಗಿಯಾಗದಂತೆ ಡಿಬಾರ್‌ ಮಾಡಿತ್ತು.

ಈ ನಡುವೆ, ಪಿಎಸ್‌ಐ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳಲ್ಲಿ ಒಂದು ಸಣ್ಣ ಆಸೆ ಚಿಗುರೊಡೆದಿತ್ತು. ಅದೇನೆಂದರೆ ನೇಮಕಾತಿ ಪಟ್ಟಿಯಿಂದ ಕಳಂಕಿತರನ್ನು ಹೊರಗಿಟ್ಟು, ಉಳಿದವರಲ್ಲಿ ಹೊಸ ಆಯ್ಕೆ ಪಟ್ಟಿ ಪ್ರಕಟಿಸಬಹುದೇ ಎನ್ನುವುದು ಒಂದು ಆಸೆಯಾದರೆ, ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಿ ಅವರಲ್ಲಿ ಆಯ್ಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು.

ಆದರೆ, ಸರ್ಕಾರ ವಿಶೇಷ ಪರೀಕ್ಷೆ ಮೂಲಕ ಆಯ್ಕೆ ಮಾಡದೆ ಮರುಪರೀಕ್ಷೆಯನ್ನೇ ನಡೆಸುವುದಾಗಿ ಹೇಳಿತ್ತು. ಈ ಹಂತದಲ್ಲಿ ಕೆಲವರು ಕೋರ್ಟ್‌ ಮೊರೆ ಹೊಕ್ಕಿದ್ದರು. ಕೋರ್ಟ್‌ ಕೂಡಾ ಯಾಕೆ ವಿಶೇಷ ಪರೀಕ್ಷೆ ಮಾಡಬಾರದು ಎಂದು ಸರ್ಕಾರದಿಂದ ವಿವರಣೆ ಕೇಳಿತ್ತು.

ಇದೀಗ ಜುಲೈ 5ರಂದು ಈ ಸಂಬಂಧ ಸರ್ಕಾರದ ನಿಲುವಿಗೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸಿದ ನ್ಯಾಯಾಲಯವು ವಿಚಾರಣಾರ್ಹತೆಯ ಆಧಾರದಲ್ಲಿ ಅರ್ಜಿಗಳ ಅಂತಿಮವಾಗಿ ಸೋಮವಾರ ಆಲಿಸಲಾಗುವುದು ಎಂದು ಮೌಖಿಕವಾಗಿ ಹೇಳಿತು.

ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ ಪೈಕಿ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪರೀಕ್ಷೆ ನಡೆಸಲಾಗದು. ಈ ಸಂಬಂಧದ ಸರ್ಕಾರದ ಮಟ್ಟದಲ್ಲಿನ ಚರ್ಚೆಯ ವರದಿಯನ್ನು ನ್ಯಾಯಾಲಯಕ್ಕೆ ಗೌಪ್ಯವಾಗಿ ಸಲ್ಲಿಸಲಾಗುತ್ತಿದೆ ಎಂದರು.

ಸರ್ಕಾರದ ವರದಿ ಪರಿಶೀಲಿಸಿದ ಪೀಠವು ಹಾಗಾದರೆ ಅರ್ಜಿಗಳನ್ನು ವಿಚಾರಣಾರ್ಹತೆಯ ಆಧಾರದಲ್ಲಿ ಸೋಮವಾರ ಮಧ್ಯಾಹ್ನ 2.30ಕ್ಕೆ ಆಲಿಸಲಾಗುವುದು ಎಂದಿತು. ಪಕ್ಷಕಾರರ ಪರ ಎಲ್ಲಾ ವಕೀಲರಿಗೂ ಲಿಖಿತ ವಾದ ಸಲ್ಲಿಸುವಂತೆ ಪೀಠವು ಸೂಚಿಸಿ, ವಿಚಾರಣೆ ಮುಂದೂಡಿತು.

ಇದನ್ನೂ ಓದಿ: PSI Scam :‌ ಪಿಎಸ್‌ಐ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ; AGDP ಅಮೃತ್‌ ಪಾಲ್‌ಗೆ ಡಬಲ್‌ ಸಂಕಷ್ಟ

Exit mobile version