ಬೆಂಗಳೂರು: ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾದ ಪೊಲೀಸ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನಂ. ೧೮ ಎಂದು ಗುರುತಿಸಲಾಗಿರುವ ಶಿವರಾಜ್ ಎಂಬಾತ ಈಗ ಹೊಸದಾಗಿ ಬಂಧಿತನಾದವನು. ಈತ ಸುಮಾರು ೪೦ ಲಕ್ಷಕ್ಕೂ ಹೆಚ್ಚು ಹಣ ಕೊಟ್ಟು ಪಿಎಸ್‌ಐ ಪರೀಕ್ಷೆ ಪಾಸ್ ಮಾಡಿಕೊಂಡಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.
ಪ್ರಕರಣ ಬಯಲಾಗುತ್ತಿದ್ದಂತೆಯೇ ಆತ ತಪ್ಪಿಸಿಕೊಂಡಿದ್ದು ಈಗ ಆತನನ್ನು ಸಿಐಡಿ ಬಂಧಿಸಿದೆ. ಈತ ಇಷ್ಟೊಂದು ದುಡ್ಡು ಕೊಟ್ಟು ಒಂದು ಪೊಲೀಸ್ ಪರೀಕ್ಷೆ ಪಾಸ್ ಮಾಡಿಸಿಕೊಳ್ಳುತ್ತಾನೆ ಎಂದಾದರೆ ಈತನಿಗೆ ಎಷ್ಟೊಂದು ಹಣ ಸಂಗ್ರಹ ಮಾಡುವ ಗುರಿ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ.
ಬ್ಯಾಡರಹಳ್ಳಿ ಪಿಎಸ್‌ಐ ನವೀನ್‌ಗಾಗಿ ಹುಡುಕಾಟ
ಈ ನಡುವೆ ಸಿಐಡಿ ಪೊಲೀಸರು ಬ್ಯಾಡರಹಳ್ಳಿ ಪಿಎಸ್‌ಐ ನವೀನ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದ ನವೀನ್ ಬಳಿಕ ಅಕ್ರಮವಾಗಿ ಪಿಎಸ್ ಐ ಆಗಿದ್ದರು. ೫೪೫ ಪಿಎಸ್‌ಐಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬಳಿಕ ಆತ ತಲೆಮರೆಸಿಕೊಂಡಿದ್ದಾರೆ. ಈ ನಡುವೆ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದೆ.
ಆರೋಪಿ ನವೀನ್ ಸದ್ಯಕ್ಕೆ ಮೊಬೈಲ್ ಬಳಸುತ್ತಿಲ್ಲ. ಹಾಗಾಗಿ ಯಾರನ್ನೂ ಮೊಬೈಲ್ ಮೂಲಕ ಸಂಪರ್ಕಿಸುತ್ತಿಲ್ಲ. ಹೀಗಾಗಿ ಅವನನ್ನು ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಹಚ್ಚುವುದು ಸಿಐಡಿಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಇದೀಗ ಆತನ ಸಂಬಂಧಿಕರ ಚಲನವಲನದ ಮೇಲೂ ಕಣ್ಣಿಟ್ಟಿದೆ.
ಈತ ತಾನು ಅಕ್ರಮವಾಗಿ ಹುದ್ದೆ ಪಡೆದಿದ್ದಲ್ಲದೆ, ಬೇರೆ ಅಭ್ಯರ್ಥಿಗಳಿಗೂ ಸಾಥ್ ನೀಡಿದ್ದ. ಈ ಹಿಂದೆ ಬ್ಯಾಡರಹಳ್ಳಿ ಠಾಣೆ ಪಿಎಸ್ ಐ ಹರೀಶ್ ನನ್ನು ಇದೇ ಆರೋಪದಲ್ಲಿ ಸಿಐಡಿ ತಂಡ ಬಂಧಿಸಿತ್ತು.
ಏನಿದು ಪಿಎಸ್‌ಐ ಹಗರಣ?
ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ೫೪೫ ಹುದ್ದೆಗಳಿಗಾಗಿ ೨೦೨೧ರ ಅಕ್ಟೋಬರ್ ೩ರಂದು ಪರೀಕ್ಷೆ ನಡೆದಿತ್ತು. ಸುಮಾರು ೫೪,೦೪೧ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಈ ವರ್ಷದ ಜನವರಿಯಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಇದರಲ್ಲಿ ದೊಡ್ಡ ಮಟ್ಟದ ಹಗರಣವಾಗಿರುವುದು ಬೆಳಕಿಗೆ ಬಂತು. ಬಳಿಕ ಸಿಐಡಿ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇದುವರೆಗೆ ೫೦ಕ್ಕೂ ಅಧಿಕ ಮಂದಿಯನ್ನು ಬಂಧಿಸಿದೆ.
ಸಿಐಡಿ ಸಲ್ಲಿಸಿರುವ ೧೯೦೦ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿನ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಹೇಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರು ಮತ್ತು ಹೇಗೆ ಸರಿ ಉತ್ತರಗಳನ್ನು ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡಿದರು ಎನ್ನುವುದನ್ನು ವಿವರಿಸಲಾಗಿದೆ.
ಬಂಧಿತರಲ್ಲಿ ದೊಡ್ಡ ದೊಡ್ಡ ಕುಳಗಳೇ ಸೇರಿದ್ದಾರೆ. ಅವರಲ್ಲಿ ಮುಖ್ಯರಾದವರು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮೃತ್ ಪೌಲ್, ಬಿಜೆಪಿ ನಾಯಕಿ ಮತ್ತು ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಡಿ. ಪಾಟೀಲ್, ಆತನ ಸಹೋದರ ರುದ್ರ ಗೌಡ ಪಾಟೀಲ್, ಅಫ್ಜಲ್ ಪುರ ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಹಯ್ಯಾಲಿ ದೇಸಾಯಿ, ಸಹಾಯಕ ಎಂಜಿನಿಯರ್ ಆಗಿರುವ ಮಂಜುನಾಥ್ ಮೆಲಕುಂಡಿ ಮತ್ತು ಇತರರು.
ಇದನ್ನೂ ಓದಿ |PSI Scam | ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದ ಬಿಜೆಪಿ ಶಾಸಕ: ಸರ್ಕಾರಕ್ಕೆ ಮತ್ತೊಂದು ಸಂಕಷ್ಟ