Site icon Vistara News

PSI Scam | ಕಣ್ಣೀರ ಕಥೆ ಹೇಳಿಕೊಂಡ ಫಸ್ಟ್‌ ರ‍್ಯಾಂಕ್‌ ರಚನಾ; 30 ಲಕ್ಷ ರೂಪಾಯಿ ಕೊಟ್ಟಿದ್ದಾಗಿ ಹೇಳಿಕೆ!

PSI Scam

ಬೆಂಗಳೂರು: ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ (PSI Scam) ಭಾಗಿಯಾಗಿ ಫಸ್ಟ್‌ ರ‍್ಯಾಂಕ್‌ ಪಡೆದಿದ್ದ ರಚನಾ ಇಡೀ ವೃತ್ತಾಂತದ ಒಂದೊಂದೇ ಅಂಶಗಳನ್ನು ಎಳೆಎಳೆಯಾಗಿ ಪೊಲೀಸರ ಮುಂದೆ ಬಿಚ್ಚಿಡುತ್ತಿದ್ದು, ತನ್ನ ಕಣ್ಣೀರಿನ ಕತೆಯನ್ನೂ ಹೇಳಿಕೊಂಡಿದ್ದಾಳೆ. ತಾನು ಓದಿನಲ್ಲಿ ಬುದ್ಧಿವಂತಳಿದ್ದು, ಒಳ್ಳೆಯ ಕೆಲಸದಲ್ಲಿದ್ದರೂ ಹೇಗೆ ಅಕ್ರಮದಲ್ಲಿ ಭಾಗಿಯಾದೆ ಎಂಬ ಅಂಶವನ್ನು ತನಿಖೆ ವೇಳೆ ಸಿಐಡಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾಳೆ.

“ನನ್ನ ತಾಯಿ ಸ್ಕೂಲ್ ಟೀಚರ್ ಆಗಿದ್ದಾರೆ. ಹೆಣ್ಣು ಮಗಳು ಹುಟ್ಟಿದಳು ಎಂಬ ಕಾರಣಕ್ಕೆ ನಾನು ಹುಟ್ಟಿದ ಬಳಿಕ ನನ್ನ ತಂದೆ ಮನೆ ಬಿಟ್ಟು ಹೋಗಿದ್ದರು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ನನ್ನ ಅಮ್ಮ , ನನ್ನನ್ನು ಗಂಡು ಮಗನ ರೀತಿ ಬೆಳಸಿದ್ದಾರೆ. ನಾನು ಯಾವುದಕ್ಕೂ ಭಯಪಡದೆ ಬೆಳೆದೆ” ಎಂದು ರಚನಾ ಹೇಳಿಕೊಂಡಿದ್ದಾರೆ.

ಎಲೆಕ್ಟ್ರಿಕಲ್‌ ಎಂಜಿನಿಯರ್‌ ಪದವೀಧರೆ

“ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ನಂತರ ಎನ್‌ಟಿಪಿಎಸ್ ಥರ್ಮಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದೆ. ಒಳ್ಳೆಯ ಸಂಬಳವೂ ಇತ್ತು. ಕೆಲಸ ಮಾಡುತ್ತಿದ್ದಾಗಲೇ ಎರಡು ಬಾರಿ ಪಿಎಸ್‌ಐ ಪರೀಕ್ಷೆಯನ್ನು ಬರೆದಿದ್ದೆ. ಈ ವೇಳೆ ಬಸವರಾಜ್ ಎಂಬಾತನ ಪರಿಚಯವಾಯಿತು. ನಾನು ಪಿಎಸ್ಐ ಪರೀಕ್ಷೆ ಬರೆದಿದ್ದರ ಬಗ್ಗೆ ಆತನ ಜತೆ ಹೇಳಿಕೊಂಡಿದ್ದೆ. ಆಗ ಆತ ಎಷ್ಟು ಬರೆದರೂ ಅಲ್ಲಿ ಉತ್ತೀರ್ಣ ಆಗುವುದಿಲ್ಲ. ಹೀಗಾಗಿ ತಾನು ಕೆಲಸ ಮಾಡಿಸಿ ಕೊಡಿಸುತ್ತೇನೆ” ಎಂದು ನನ್ನನ್ನು ಒಪ್ಪಿಸಿದ ಎಂದು ರಚನಾ ತನಿಖೆ ವೇಳೆ ಹೇಳಿದ್ದಾರೆನ್ನಲಾಗಿದೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಆರು ಬಾಂಗ್ಲಾದೇಶ ಪ್ರಜೆಗಳಿಗೆ ಗೇಟ್‌ ಪಾಸ್‌, ರೈಲಿನಲ್ಲಿ ಗಡಿಗೆ ರವಾನೆ

೩೫ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ

“ನನಗೆ ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕಿಂಗ್‌ ಕೊಡಿಸುವುದಾಗಿ ಹೇಳಿ ಬಸವರಾಜ್‌ ೩೫ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆದರೆ, ಆ ವೇಳೆ ನನಗೆ ಅಷ್ಟೊಂದು ಹಣವನ್ನು ನೀಡುವಷ್ಟು ಶಕ್ತಿ ಇರಲಿಲ್ಲ. ಹೀಗಾಗಿ ಆತನೊಂದಿಗೆ ಮಾತುಕತೆ ನಡೆಸಿ ೩೦ ಲಕ್ಷ ರೂಪಾಯಿಗೆ ಒಪ್ಪಿಸಿದ್ದೆ. ಬಳಿಕ ಸಾಲ ಮಾಡಿಯೇ ೧೫ ಲಕ್ಷ ರೂಪಾಯಿ ನೀಡಿದ್ದೆ. ಬಳಿಕ ಬರೆದ ಪರೀಕ್ಷೆಯಲ್ಲಿ ನಾನು ಟಾಪ್‌ ರ‍್ಯಾಂಕ್‌ ಬಂದಿದ್ದೆ” ಎಂದು ರಚನಾ ತಪ್ಪೊಪ್ಪಿಕೊಂಡಿದ್ದಾಳೆ.

ಬೆಳಕಿಗೆ ಬಂತು ಪ್ರಕರಣ

“ಕೆಲವು ದಿನಗಳ ನಂತರ ಕಲಬುರಗಿಯಲ್ಲಿ ಪಿಎಸ್‌ಐ ಹಗರಣ ಬೆಳಕಿಗೆ ಬಂದಿತ್ತು. ಈ ವೇಳೆ ಸರ್ಕಾರ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯನ್ನೇ ರದ್ದು ಮಾಡಿತು. ನಾವು ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಮಾಡಿದೆವು. ಈ ವೇಳೆಯಲ್ಲಿ ಸಹ ಬಸವರಾಜ್ ಸಂಪರ್ಕ ಇತ್ತು. ಆತ ಆಗ ಬೆಳಕಿಗೆ ಬಂದಿರುವುದು ಕಲಬುರಗಿಯಲ್ಲಾದ ಪ್ರಕರಣ, ಬೆಂಗಳೂರಿನಲ್ಲಿ ಅಂಥದ್ದೇನೂ ಇಲ್ಲ ಎಂದು ಹೇಳಿದ್ದ. ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ” ಎಂದು ರಚನಾ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಅಡಗಿದ್ದು ಯಾಕೆ?

“ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ ದಿನೇದಿನೆ ಹಲವು ತಿರುವುಗಳನ್ನು ಪಡೆದುಕೊಂಡು ನಂತರ ನಮ್ಮ ಮೇಲೂ ಪ್ರಕರಣ ದಾಖಲಾಯಿತು. ಈ ಪ್ರಕರಣದಿಂದ ಹೊರಬರುವ ಸಂಬಂಧ ವಕೀಲರನ್ನು ಸಂಪರ್ಕ ಮಾಡಲಾಯಿತು. ಅವರು ತಾನು ಹೇಳುವವರೆಗೂ ಕಾಣಿಸಿಕೊಳ್ಳದಿರಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಮಹಾರಾಷ್ಟ್ರಕ್ಕೆ ಹೋಗಿದ್ದೆ” ಎಂದು ರಚನಾ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ರಚನಾ ೧೭ನೇ ಆರೋಪಿಯಾಗಿದ್ದಾರೆ.

ಆಗಸ್ಟ್‌ ೨೭ರಂದು ಸೆರೆ

ಆಗಸ್ಟ್‌ ೨೭ರ ಶನಿವಾರ ಕಲಬುರಗಿ ಸಿಐಡಿ ಪೊಲೀಸರು ಮಹಾರಾಷ್ಟ್ರದಲ್ಲಿ ರಚನಾಳನ್ನು ಬಂಧಿಸಿದ್ದರು. ಅಲ್ಲದೆ, ಶನಿವಾರವೇ ಕಲಬುರಗಿಯ 5ನೇ ಜೆಎಂಎಫ್‌ಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ವಿಷಯ ತಿಳಿದ ಬೆಂಗಳೂರು ಸಿಐಡಿ ಪೊಲೀಸರು ಕಲಬುರುಗಿಗೆ ಆಗಮಿಸಿ ಅಂದೇ ರಚನಾಳನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದರು.

ಇದನ್ನೂ ಓದಿ | PSI Scam | ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿದ್ದ ಫಸ್ಟ್‌ ರ‍್ಯಾಂಕ್‌ ರಚನಾ ಸೆರೆ!

Exit mobile version