ಬಳ್ಳಾರಿ: ಒಂದು ಸಣ್ಣ ಘಟನೆಯು ತಾಳ್ಮೆ ಕಳೆದುಕೊಂಡರೆ, ಮಾತು ಅತಿಯಾದರೆ, ರಾಜಕೀಯ ಬೆರತರೆ, ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಕುರುಗೋಡು ಪಿಎಸ್ಐ ಕೋಳೂರಿನ ವ್ಯಕ್ತಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿದ ಘಟನಾವಳಿಯೇ ಸಾಕ್ಷಿಯಾಗಿದೆ.
ಈ ಘಟನೆಯು ಎರಡು ಪ್ರಮುಖ ಜಾತಿಯ ಮಧ್ಯೆ ಸೌಹಾರ್ದತೆಗೆ ಚ್ಯುತಿ ತಂದರೆ, ಪೊಲೀಸ್ ಅಧಿಕಾರಿಯ ನಡೆಯ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈಗ ಈ ಪ್ರಕರಣದಲ್ಲಿ ಈಗ ರಾಜಕೀಯವೂ ಸಹ ಬೆರೆತಿದೆ. ಆದರೆ, ಚುನಾವಣೆ ಸಮೀಪ ಇರುವ ಕಾರಣ ಯಾವ ನಾಯಕರೂ ಬಹಿರಂಗವಾಗಿ ತೋರಿಸಿಕೊಳ್ಳದೆ, ತೆರೆಮರೆಯಲ್ಲಿ ತಮ್ಮ ದಾಳವನ್ನು ಉರುಳಿಸುತ್ತಿದ್ದಾರೆ.
ಏನಿದು ಪ್ರಕರಣ?
ಬಳ್ಳಾರಿ ಜಿಲ್ಲೆಯ ಕೋಳೂರು ಗ್ರಾಮದಲ್ಲಿ ಜು.30ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಇದನ್ನು ನೋಡಲು ಬಂದ ನೂರಾರು ಜನರನ್ನು ಚದುರಿಸಲು ಮಫ್ತಿಯಲ್ಲಿದ್ದ ಪಿಎಸ್ಐ ಮಣಿಕಂಠ ಅವರು ಲಾಠಿ ಬೀಸಿದ್ದಾರೆ. ಆಗ ಒಬ್ಬನ ಕಾಲಿಗೆ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ಪಿಎಸ್ಐ ಮತ್ತು ಊರಿನ ಕೆಲ ಜನರ ಮಧ್ಯೆ ಮಾತಿನ ಚಕಮಕಿ ನಡೆದು ತಳ್ಳಾಟವಾಗಿದೆ.
ಇದನ್ನೂ ಓದಿ | Raksha Bandhan | 900 ಕರುನಾಡ ಸೈನಿಕರಿಗೆ ರಾಖಿ ಕಳಿಸುವ ಬಳ್ಳಾರಿಯ ಸಹೋದರಿ ವಿದ್ಯಾಶ್ರೀ!
ವಿಮ್ಸ್‌ಗೆ ದಾಖಲು
ಕಾಲು ಮುರಿದಿದೆ ಎಂದು ವ್ಯಕ್ತಿಯು ಆಂಬ್ಯುಲೆನ್ಸ್ ಕರೆಸಿಕೊಂಡು ವಿಮ್ಸ್ ದಾಖಲಾದರೆ, ಕೋಳೂರು ಗ್ರಾಮದ ಕೆಲವರು ರಸ್ತೆ ತಡೆದು, ಶಾಸಕ ಗಣೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶಾಸಕರು ಮತ್ತು ಇನ್ಸ್‌ಪೆಕ್ಟರ್ ಚಂದನ್ ಗೋಪಾಲ್ ಬಂದು ಪರಿಸ್ಥಿತಿ ತಿಳಿಗೊಳಿಸಿದರು.
ವಿಕೋಪಕ್ಕೆ ಕಾರಣವಾದ ಅಂಶ
ಎಲ್ಲವೂ ಸರಿಹೋಯಿತು ಎಂದು ಅಂದುಕೊಂಡರೆ ಅಲ್ಲಿ ಬೇರೆಯದ್ದೇ ಸಮಸ್ಯೆ ಉಂಟಾಗಿದೆ. ನಂತರದ ನಡೆದ ಘಟನೆಗಳೇ ಪರಿಸ್ಥಿತಿಯ ವಿಕೋಪಕ್ಕೆ ಕಾರಣವಾಯಿತು. ಜು.30ರಂದು ನಡೆದ ಘಟನೆಯಲ್ಲಿ ಪಿಎಸ್‌ಐ ಅವರನ್ನು ಹೊಡೆಯಲಾಗಿದೆ ಎಂದು ಕೆಲವೊಬ್ಬರು ಹೇಳಿಕೊಂಡು ಸುತ್ತಾಡಿದರೆ, ಮತ್ತೆ ಕೆಲವರು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ ಎಂಬ ಆರೋಪ ಮತ್ತು ಕಾಲು ಮುರಿದ ವ್ಯಕ್ತಿಯು ಕೇವಲ 10 ದಿನದಲ್ಲಿಯೇ ಮೊಹರಂನಲ್ಲಿ ಪಾಲ್ಗೊಂಡು ಅಲಾಯಿ ಕುಣಿದಿದ್ದಾನೆ ಎನ್ನುವ ವಿಚಾರವು ಪಿಎಸ್ಐ ಕೋಪಕ್ಕೆ ಕಾರಣವಾಗಿದೆ. ಹೊಡೆದು ಕಾಲು ಮುರಿಯಲಾಗಿದೆ ಎಂದು ತನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆಂಬುದು ಪಿಎಸ್ಐ ಸಿಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಬ್ಯಾನರ್ ಹರಿದ ಪ್ರಕರಣ; ಸಿಟ್ಟು ತೀರಿಸಲು ವೇದಿಕೆಯಾಯ್ತೆ?
ಕೋಳೂರು ಗ್ರಾಮದಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರ ಬ್ಯಾನರ್ ಹರಿದಿರುವ ಪ್ರಕರಣವು ಪಿಎಸ್ಐ ಸಿಟ್ಟು ತೀರಿಸಿ ಕೊಳ್ಳಲು ವೇದಿಕೆಯಾಯ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | NH-63 | 6 ವರ್ಷ ಕಳೆದರೂ ಮುಗಿಯದ ಬಳ್ಳಾರಿ-ಹೊಸಪೇಟೆ ಹೆದ್ದಾರಿ ಕಾಮಗಾರಿ!
ಪಿಎಸ್ಐ ಬೇರಡೆಗೆ ನಿಯೋಜನೆ
ಬ್ಯಾನರ್ ಹರಿದಿರುವುದಕ್ಕೆ ಸುರೇಶ್ ಬಾಬು ಬೆಂಬಲಿಗರು ಪ್ರತಿಭಟನೆ ನಡೆಸಿದಾಗ, ಬ್ಯಾನರ್ ಹರಿಯಲು ಹಿಂದೆ ಕಾಲು ಮುರಿದಿದೆ ಎಂದು ಹೇಳಿ ಆಸ್ಪತ್ರೆಗೆ ಸೇರಿದವರೇ ಕಾರಣ ಎಂಬ ಆರೋಪದ ಮೇರೆಗೆ ಪಿಎಸ್‌ಐ ಕೊಳೂರು ವ್ಯಕ್ತಿಯೊಬ್ಬನ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯಲು ಮೇಲೆರಗಿ ಹೋಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಇದರ ವಿಡಿಯೊವನ್ನು ಕೆಲವರು ಚಿತ್ರೀಕರಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾ ಮೂಲಕ ಹರಿಬಿಟ್ಟಿದ್ದಾರೆ. ಜತೆಗೆ ಕಪಾಳ ಮೋಕ್ಷ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ. ಈ ಪ್ರಕರಣ ಪಿಎಸ್ಐ ಬೇರೆಡೆ ನಿಯೋಜನೆಗೆ ಕಾರಣವಾಗಿದ್ದಲ್ಲದೆ, ಎರಡು ಜಾತಿಗಳ ಮಧ್ಯೆ ಹೋರಾಟದ ಕಿಚ್ಚು ಹಚ್ಚಲು ಕಾರಣವಾಗಿದೆ.