ಬಳ್ಳಾರಿ: ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಪಿಎಸ್ಐ ಮಣಿಕಂಠ ಅವರ ಮೇಲೆ ದೂರು ದಾಖಲಾದ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ (PSI Suspend) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲಾ ಅಡಾವತ್ ಆದೇಶ ಹೊರಡಿಸಿದ್ದಾರೆ.
ಪಿಎಸ್ಐನಿಂದ ಹಲ್ಲೆಗೊಳಗಾದ ಕೋಳೂರು ಗ್ರಾಮದ ಹೊನ್ನೂರುಸ್ವಾಮಿ ನೀಡಿರುವ ದೂರಿನ ಮೇರೆಗೆ ಜಾತಿ ನಿಂದನೆ, ಪ್ರಾಣ ಬೆದರಿಕೆ, ಅವಾಚ್ಯ ಶಬ್ದಗಳ ಬಳಕೆಗೆ ಸಂಬಂಧಿಸಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಐ ವರದಿ ಆಧರಿಸಿ ಪಿಎಸ್ಐ ಮಣಿಕಂಠ ಅವರನ್ನು ಅಮಾನತು ಮಾಡಿ ಎಸ್‌ಪಿ ಆದೇಶಿಸಿದ್ದಾರೆ.
ಹಲ್ಲೆ ಘಟನೆಯನ್ನು ಖಂಡಿಸಿ ಕುರುಗೋಡು ಪೊಲೀಸ್ ಠಾಣೆಯ ಮುಂದೆ ವಾಲ್ಮೀಕಿ ಸಮಾಜದವರು ಪ್ರತಿಭಟಿಸಿ, ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ. ಪಿಎಸ್ಐ ಕರ್ತವ್ಯ ನಿರ್ವಹಿಸಿದ ಠಾಣೆಯಲ್ಲಿಯೇ ಪ್ರಕರಣವನ್ನು ದಾಖಲಿಸಲಾಗಿದೆ.
ಕಪಾಳ ಮೋಕ್ಷ ಪ್ರಕರಣದಿಂದ ಮುಜುಗರ ತಪ್ಪಿಸಿಕೊಳ್ಳಲು ಗುರುವಾರ (ಆ.೧೧) ಬಳ್ಳಾರಿ ಡಿವೈಎಸ್ಪಿ ಕಚೇರಿಗೆ ಪಿಎಸ್ಐ ಅವರನ್ನು ಕರ್ತವ್ಯ ನಿಯೋಜಿಸಿ, ಕುರುಗೋಡು ಠಾಣೆಗೆ ರಘು ಅವರನ್ನು ನಿಯೋಜಿಸಿ ಎಸ್‌ಪಿ ಆದೇಶ ಹೊರಡಿಸಿದ್ದರು. ತೋರಣಗಲ್ ಡಿವೈಎಸ್ಪಿ ಕಾಶಿಗೌಡ ಅವರ ನೇತೃತ್ವದಲ್ಲಿ ಪಿಎಸ್ಐ ವಿಚಾರಣೆಗೆ ಇಲಾಖೆ ಆದೇಶಿಸಿದೆ.
ಇದನ್ನೂ ಓದಿ | ಪಿಎಸ್ಐನಿಂದ ಕಪಾಳ ಮೋಕ್ಷ, ಅವಾಚ್ಯ ಶಬ್ದಗಳ ನಿಂದನೆಗೆ ವ್ಯಾಪಕ ಆಕ್ರೋಶ