Site icon Vistara News

PTCL Act: ದಲಿತರಿಗೆ ಭೂಮಿ ಪರಭಾರೆ ಆಗಬೇಕು ಎನ್ನುವುದರಲ್ಲಿ ರಾಜಿ ಇಲ್ಲ: ಈ ಅಧಿವೇಶನದಲ್ಲೇ ಪಿಟಿಸಿಎಲ್‌ ತಿದ್ದುಪಡಿ ಎಂದ ಸಿಎಂ

Siddaramaiah in vidhanasoudha meeting

ಬೆಂಗಳೂರು: ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಬಹಿರಂಗ ಒತ್ತಡಕ್ಕೆ ಮಣಿಯುವುದಿಲ್ಲ. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತವಾಗಿ ನುಡಿದಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ-PTCL) ಅಧಿನಿಯಮ- 1978ಕ್ಕೆ ತಿದ್ದುಪಡಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ದಲಿತರಿಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಪರಭಾರೆ ಮಾಡಲು ನಿಷೇಧವಿದೆ. ಅಕ್ರಮ ಪರಭಾರೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯಾವುದೇ ಕಾಲಮಿತಿ ಇರಲಿಲ್ಲ. ಇದಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿತ್ತು. ಇದಕ್ಕೆ ಅನುಗುಣವಾಗಿ 2023-24ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.

“ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನನ್ನು ಪುನರ್‌ಸ್ಥಾಪಿಸುವುದಕ್ಕಾಗಿ ಮನವಿ ಸಲ್ಲಿಸಲು ಕಾಲಮಿತಿಯನ್ನು ಕಾಯ್ದೆಯಲ್ಲಿಯೇ ನಿಗದಿಪಡಿಸಲು ಕರ್ನಾಟಕ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ-PTCL) ಅಧಿನಿಯಮ- 1978ಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದು” ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಅದರ ಕುರಿತು ಸೋಮವಾರ ಸಭೆ ನಡೆಸಿದ್ದಾರೆ.

ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟ ಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ.

ಮತ್ತೆ ಮತ್ತೆ ಯಾವುದೇ ವಿವಾದ ಇರಬಾರದು, ಪಿಟಿಸಿಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರಬೇಕು. ಭೂಮಿ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಾರದು ಎನ್ನುವ ಉದ್ದೇಶದಿಂದ ಈ ಬಗ್ಗೆ ದಲಿತ ಮುಖಂಡರ ಮತ್ತು ನ್ಯಾಯವಾದಿಗಳ ಅಭಿಪ್ರಾಯ ಕೇಳಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತೇವೆ.

ನಾವು ಮೊದಲೇ ಕೊಟ್ಟಿದ್ದ ಭರವಸೆಯಂತೆ ಈ ಸರ್ಕಾರದ ಮೊದಲನೆ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮಧ್ಯಪ್ರದೇಶದಲ್ಲಿ ಮತ್ತೊಂದು ‘ಹೊಲಸು’ ಕೃತ್ಯ; ಇಬ್ಬರು ದಲಿತರಿಗೆ ಮಲ ತಿನ್ನುವಂತೆ ಒತ್ತಾಯಿಸಿದ ಮುಸ್ಲಿಮರು

ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಹೆಚ್.ಕೆ. ಪಾಟೀಲ್, ಡಾ. ಜಿ. ಪರಮೇಶ್ವರ, ಕೆ. ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ.ಎನ್. ರಾಜಣ್ಣ, ಆರ್.ಬಿ. ತಿಮ್ಮಾಪುರ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

35 ನಾಯಕರ ಉಪಸ್ಥಿತಿ
ಸಭೆಯಲ್ಲಿ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಶ್ರೀಧರ್ ಕಲಿವೀರ, ಬಸವರಾಜ ಕೌತಾಳ್, ಮಂಜು, ಇಂದೂದರ ಹೊನ್ನಾಪುರ, ಹರಿರಾಮ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಎನ್.ಮುನಿಸ್ವಾಮಿ, ಎನ್.ವೆಂಕಟೇಶ್, ಡಿ.ಜಿ.ಸಾಗರ್ ಸೇರಿ 35 ಕ್ಕೂ ಅಧಿಕ ಮಂದಿ ದಲಿತ ಮುಖಂಡರು ಮತ್ತು ವಕೀಲರು ಉಪಸ್ಥಿತರಿದ್ದು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Exit mobile version