ಬೆಂಗಳೂರು: ಪ್ರೌಢಶಾಲಾ ಶಿಕ್ಷಕರು ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ (PU Lecturer Recruitment) ಪಡೆಯಲು ಅರ್ಹತಾ ಅಂಕಗಳನ್ನು ಶೇ.55 ನಿಂದ 50ಕ್ಕೆ ಇಳಿಸಲು, ʼಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ʼಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉಪನ್ಯಾಸಕರಾಗಲು ಇಚ್ಛಿಸುವ ಶಿಕ್ಷಕರು ಅರ್ಹತಾ ಪರೀಕ್ಷೆ ಬರೆಯಬೇಕಿದ್ದು, ಇನ್ನು ಮುಂದೆ ಶೇ.50 ಅಂಕ ಪಡೆದರೆ ಪಿಯು ಕಾಲೇಜು ಉಪನ್ಯಾಸಕಗಲು ಅರ್ಹರಾಗುತ್ತಾರೆ.
ಸದ್ಯ ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ ವೇಳೆ ಶೇ.75 ನೇರ ನೇಮಕಾತಿ ಹಾಗೂ ಶೇ.25 ಹುದ್ದೆಗಳಿಗೆ ಪ್ರೌಢಶಾಲೆ ಶಿಕ್ಷಕರಿಗೆ ಬಡ್ತಿ ನೀಡಿ ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಪ್ರೌಢಶಾಲಾ ಶಿಕ್ಷಕರು ಪಿಯು ಉಪನ್ಯಾಸಕರಾಗಲು ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.55 ಅಂಕ, ಪರಿಶಿಷ್ಟ ಜಾತಿ, ಪಂಗಡದವರು ಶೇ.50 ಅಂಕ ಪಡೆಯಬೇಕಿದೆ. ಇದೀಗ ಅರ್ಹತಾ ಅಂಕಗಳನ್ನು ಶೇ.55 ನಿಂದ 50ಕ್ಕೆ ಇಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಹೆಸರು ಬದಲಾವಣೆಗೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು: ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ (Ramanagara as Bengaluru South District) ಎಂದು ಬದಲಾವಣೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ (cabinet meeting) ಒಪ್ಪಿಗೆ ನೀಡಿದೆ. ರಾಮನಗರ ಜಿಲ್ಲೆಯ ಹೆಸರು (Bengaluru South District) ಮಾತ್ರ ಬದಲಾವಣೆಯಾಗಲಿದೆ, ಜಿಲ್ಲಾ ಕೇಂದ್ರ (ರಾಮನಗರ) ಸೇರಿ ಉಳಿದ ಎಲ್ಲವೂ ಹಾಗೆ ಉಳಿಯಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ದೃಷ್ಟಿಯಿಂದ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಉಳಿದ ಎಲ್ಲವೂ ಹಾಗೇ ಉಳಿಯಲಿದೆ. ಚುನಾವಣಾ ದೃಷ್ಟಿಯಿಂದ ಹೀಗೆ ಮಾಡಿಲ್ಲ. ಜನರ ಹಿತಾಸಕ್ತಿ ಕಾಪಾಡಲು ಜೊತೆಗೆ ಬ್ರ್ಯಾಂಡ್ ಬೆಂಗಳೂರು ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎಂದು ತಿಳಿಸಿದರು.
ರಾಮನಗರದವರೂ ಬ್ರ್ಯಾಂಡ್ ಬೆಂಗಳೂರಿಗೆ ಬರಬೇಕು ಎನ್ನುತ್ತಾರೆ. ಜನರ ಅಭಿಪ್ರಾಯ, ಶಾಸಕರ ಅಭಿಪ್ರಾಯ , ಕೆಲ ನಾಯಕರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ಮಾಡಿದ್ದೇವೆ. ನೋಟಿಫೈ ಮಾಡಬೇಕು, ಆಮೇಲೆ ಹೆಸರು ಬದಲಾವಣೆ ಪ್ರಕ್ರಿಯೆ ಶುರುವಾಗುತ್ತೆ. ಇದಕ್ಕೆ ಒಂದು ಸಮಿತಿಯನ್ನು ಮಾಡಲಾಗುತ್ತದೆ ಎಂದು ರಾಮನಗರ ಹೆಸರು ಬದಲಾವಣೆಗೆ ಸಚಿವ ಎಚ್.ಕೆ ಪಾಟೀಲ್ ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ | Shalini Rajneesh: ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕ; ಪತಿ ಜಾಗಕ್ಕೆ ಪತ್ನಿಯ ಆಯ್ಕೆ
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
- 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ (ಕೆಎಎಸ್) ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಬಾರಿ ವಿಶೇಷ ಅವಕಾಶ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಹಾಕಲು ವಿಶೇಷ ಅವಕಾಶಕ್ಕೆ ಕ್ಯಾಬಿನೆಟ್ ಅನುಮೋದನೆ.
- KIADBಯ ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2.64 ಎಕರೆ ಸಿಎ ನಿವೇಶನವನ್ನು ಲೋಕ ಶಿಕ್ಷಣ ಟ್ರಸ್ಟ್ ಗೆ ಹಂಚಿಕೆ ಮಾಡಲು ಕ್ಯಾಬಿನೆಟ್ ತೀರ್ಮಾನ. ಈ ಹಂಚಿಕೆ ಜೊತೆಗೆ ಶೇ.75 ರಿಯಾಯಿತಿ ನೀಡಲು ತೀರ್ಮಾನ.
- ಅನಿಮೇಶನ್ ವಿಶ್ಯುವಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್ (AVGC) 2.0.- “ಉತ್ಕೃಷ್ಟತಾ ಕೇಂದ್ರವನ್ನು ” 16 ಕೋಟಿಗಳ ಅಂದಾಜು ಮೊತ್ತದಲ್ಲಿ (CAPEX-ರೂ. 7.00 ಕೋಟಿಗಳು ಮತ್ತು” OPEX-ರೂ. 9.00 ಕೋಟಿಗಳು) ಸ್ಥಾಪನೆಗೆ ಅನುಮೋದನೆ.
- ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ನೇಮಕಾತಿಗೆ ಸಂಬಂಧಿಸಿದಂತೆ “ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024”ಕ್ಕೆ ಅನುಮೋದನೆ.
- ಪ್ರೌಢಶಾಲಾ ಶಿಕ್ಷಕರಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆಯಲು 55% ನಿಂದ 50% ಅಂಕಕ್ಕೆ ಇಳಿಸಿ ಪರಿಷ್ಕರಣೆ.
- ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ ಅಡಿ ಸ್ಥಾಪನೆಗೆ ಅನುಮೋದನೆ
- ಕೆ ಆರ್ ಎಸ್ ಬೃಂದಾವನ ಉದ್ಯಾನವನವನ್ನು ಮೇಲ್ದರ್ಜೆಗೆ ಏರಿಸಲು ಕ್ಯಾಬಿನೆಟ್ ಅನುಮೋದನೆ. 2633 ಕೋಟಿ ರೂ. ದಲ್ಲಿ ಪಿಪಿಪಿ ಮಾಡೆಲ್ನಲ್ಲಿ ಮೇಲ್ದರ್ಜೆಗೆ ಏರಿಸಲು ಅನುಮೋದನೆ. ಟೆಂಡರ್ ಮೂಲಕ ಅನುಷ್ಠಾನ