ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು (ಪಿಯು ಬೋರ್ಡ್) 2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ (ಸೆಪ್ಟೆಂಬರ್ 12) ಬೆಳಗ್ಗ 11 ಗಂಟೆಗೆ (PU Supplementary Results) ಪ್ರಕಟಿಸಿದೆ. ಪೂರಕ ಪರೀಕ್ಷೆಯಲ್ಲಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕಳೆದ ಆಗಸ್ಟ್ 12ರಿಂದ 25ರ ವರೆಗೆ ನಡೆದಿದ್ದ ಪೂರಕ ಪರೀಕ್ಷೆಯಲ್ಲಿ ಸುಮಾರು 1,85,415 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,75,905 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9,510 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. 65,233 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ.37.08% ಫಲಿತಾಂಶ ಬಂದಿದೆ. ರಾಜ್ಯಾದ್ಯಂತ 307 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಸೆಪ್ಟೆಂಬರ್ 1ರಿಂದ 8ರ ವರೆಗೆ 6,927 ಮೌಲ್ಯಮಾಪನ ಕೇಂದ್ರದಲ್ಲಿ ನಡೆಸಲಾಗಿತ್ತು.
ಫಲಿತಾಂಶ ಈ ಲಿಂಕ್‌ನಲ್ಲಿ ಲಭ್ಯ
ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ https://karresults.nic.in ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೂ ಫಲಿತಾಂಶ ಬರಲಿದೆ. ಇಲಾಖೆ ವೆಬ್‌ಸೈಟ್ ತೆರಳಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಷನ್ ನಂಬರ್ ಮತ್ತು ಜನ್ಮದಿನಾಂಕವನ್ನು ದಾಖಲಿಸಿದರೆ ಫಲಿತಾಂಶ ನೋಡಬಹುದಾಗಿದೆ.
ಈ ಬಾರಿಯ ಪೂರಕ ಪರೀಕ್ಷೆಯಲ್ಲಿ 1,37,962 ಬಾಲಕರು ಹಾಜರಾಗಿದ್ದು, 36,647 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಬಾಲಕರ ವಿಭಾಗದಲ್ಲಿ ಶೇಕಡ 34.28 ಫಲಿತಾಂಶ ಬಂದಿದೆ. 70,958 ಬಾಲಕಿಯರು ಪರೀಕ್ಷೆ ಬರೆದಿದ್ದರೆ, 28,596 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಅಂದರೆ ಶೇ. 40.30ರಷ್ಟು ಫಲಿತಾಂಶ ಹೆಣ್ಣು ಮಕ್ಕಳ ಕಡೆಯಿಂದ ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 36.36ರಷ್ಟು ಫಲಿತಾಂಶವಿದ್ದು, ನಗರ ಪ್ರದೇಶದಲ್ಲಿ ಶೇಕಡ 37.28ರಷ್ಟು ಫಲಿತಾಂಶ ಬಂದಿದೆ.
ವಿಭಾಗವಾರು ಫಲಿತಾಂಶ
ವಿಭಾಗ- ಹಾಜರು- ಉತ್ತೀರ್ಣ- ಶೇಕಡವಾರು
ಕಲಾ- 70,774- 24,530- 34.66%
ವಾಣಿಜ್ಯ- 58,102- 20,124- 34.64%
ವಿಜ್ಞಾನ- 47,029- 20,579- 43.76%
ಮಾಧ್ಯಮವಾರು ಫಲಿತಾಂಶ
ಮಾಧ್ಯಮ- ಹಾಜರು- ಉತ್ತೀರ್ಣ- ಶೇಕಡವಾರು
ಕನ್ನಡ ಮಾಧ್ಯಮ- 89,378- 31,182- 34.89%
ಇಂಗ್ಲಿಷ್ ಮಾಧ್ಯಮ- 86,527- 34,051- 39.35%
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ, ಮರು ಮೌಲ್ಯಮಾಪನ ಮತ್ತು ಮರುಎಣಿಕೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಸೆಪ್ಟೆಂಬರ್ 12ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 15ರಂದು ಕೊನೆಯ ದಿನವಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಯನ್ನು ಸೆಪ್ಟೆಂಬರ್ 21ರಿಂದ 24ರ ವರೆಗೆ puc.karnataka.gov.in ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಕಡ್ಡಾಯವಾಗಿ ಸ್ಕ್ಯಾನಿಂಗ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಮರುಮೌಲ್ಯಮಾಪನ ಹಾಗೂ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಹಾಗೂ ಮರು ಮೌಲ್ಯಮಾಪನಕ್ಕೆ 1,670 ರೂ. ಮರುಮೌಲ್ಯಮಾಪನದಲ್ಲಿ ನಿಗದಿಪಡಿಸಿರುವ ಅಂಕಗಳಿಗಿಂತ ಹೆಚ್ಚಿನ ಅಂಕಗಳು ಅಥವಾ ಕಡಿಮೆ ಅಂಕಗಳು ಬಂದಲ್ಲಿ ಅಂಕಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ | ಈಗ ಆನ್‌ಲೈನ್ ವ್ಯಾಪ್ತಿಗೆ ಶಿಕ್ಷಕರ ಅಗತ್ಯ ಸೇವೆ: ಶಿಕ್ಷಣ ಇಲಾಖೆಗೆ ಪ್ರಾಥಮಿಕ ಶಿಕ್ಷಕರ ಸಂಘ ಅಭಿನಂದನೆ