Site icon Vistara News

Public Exam : ಮಾ. 13ರಂದು ಆರಂಭವಾಗಬೇಕಿದ್ದ 5, 8ನೇ ತರಗತಿ ಪರೀಕ್ಷೆ ಮುಂದೂಡಿಕೆ, ಹೈಕೋರ್ಟ್‌ ಆದೇಶದಂತೆ ಸರ್ಕಾರ ಕ್ರಮ

#image_title

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆಯು, ಮಾರ್ಚ್‌ 13ರಂದು ಆರಂಭವಾಗಬೇಕಾಗಿದ್ದ ಐದು ಮತ್ತು ಎಂಟನೇ ತರಗತಿಯ ನಿಗದಿತ ಪಬ್ಲಿಕ್‌ ಪರೀಕ್ಷೆಯನ್ನು (Public Exam) ಮುಂದೂಡಿದೆ. ರಾಜ್ಯ ಹೈಕೋರ್ಟ್‌ ಸೂಚನೆಯಂತೆ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಚ್‌ 14ರಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು, ಅದರ ಬಳಿಕ ತೀರ್ಮಾನ ಮಾಡುವುದಾಗಿ ಅದು ಹೇಳಿದೆ.

ಏಕಸದಸ್ಯ ಪೀಠದ ತೀರ್ಪು ರದ್ದತಿಗೆ ವಿಭಾಗೀಯ ಪೀಠ ನಕಾರ

ಹೈಕೋರ್ಟ್‌ನ ನ್ಯಾ. ಪ್ರದೀಪ್ ಸಿಂಗ್ ಹೆರೂರ್ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ನಡೆಸಿದ ಮಹತ್ವದ ವಿಚಾರಣೆಯ ವೇಳೆ ‌ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿತ್ತು. ಈ ಮೂಲಕ ಪಬ್ಲಿಕ್‌ ಪರೀಕ್ಷೆ ರದ್ದಾಗಿದೆ, ಸಾಮಾನ್ಯ ಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಹೆರೂರ್‌ ನೇತೃತ್ವದ ಏಕದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಅದರ ವಿಚಾರಣೆ ಶನಿವಾರ ನಡೆಯಿತು.

ಪರೀಕ್ಷೆ ಆರಂಭಿಸದಂತೆ ಹೈಕೋರ್ಟ್‌ ಸೂಚನೆ

ನ್ಯಾ. ನರೇಂದರ್ ಮತ್ತು ನ್ಯಾ.ಅಶೋಕ್ ಕಿಣಗಿ ಅವರ ವಿಭಾಗೀಯ ಪೀಠದಲ್ಲಿ ನಡೆದ ವಿಚಾರಣೆ ವೇಳೆ ಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪನ್ನು ರದ್ದು ಮಾಡಲು ನಿರಾಕರಿಸಿತು. ಮಾರ್ಚ್ 13ಕ್ಕೆ ನಿಗದಿ ಮಾಡಲಾಗಿದ್ದ ಪರೀಕ್ಷೆ ಆರಂಭಿಸದಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್‌ ಸೋಮವಾರ (ಮಾ. 14) ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ಹೀಗಾಗಿ ಮಾ. 14ರಂದು 5 ಮತ್ತು 8ನೇ ತರಗತಿ ಪರೀಕ್ಷೆಯ ಬಗ್ಗೆ ಹೈಕೋರ್ಟ್‌ ಅಂತಿಮ ತೀರ್ಮಾನ ಮಾಡಲಿದೆ.

ಸರ್ಕಾರದ ಆದೇಶ

ಪರೀಕ್ಷೆ ಮುಂದೂಡಿಕೆ ಬಗ್ಗೆ ಸರ್ಕಾರ ಹೇಳಿದ್ದೇನು?

2022-23ನೇ ಸಾಲಿನಲ್ಲಿ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್‌ 13ರಿಂದ ನಿಗದಿಯಾಗಿದ್ದ ಮೌಲ್ಯಾಂಕನವನ್ನು ಹೈಕೋರ್ಟ್‌ ಆದೇಶದಂತೆ ಮುಂದೂಡಲಾಗಿದೆ. ನ್ಯಾಯಾಲಯವು ಅನುಮತಿಸಿದಲ್ಲಿ ಈ ಮೌಲ್ಯಾಂಕನವನ್ನು ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ಮೌಲ್ಯಾಂಕನವು ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನತೆಗಳು ಹಾಗೂ ಯಾವ ವಿಷಯದಲ್ಲಿ ಹಿನ್ನಡೆಯುಂಟಾಗಿದೆ ಎಂಬುದನ್ನು ತಿಳಿಯುವುದಾಗಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದು ಈ ಮೌಲ್ಯಾಂಕನದ ಉದ್ದೇಶವಾಗಿರುವುದಿಲ್ಲ ಎಂದು ಹೇಳಿದೆ.

ಏನಿದು ವಿವಾದ, ಯಾಕಿಷ್ಟು ಹಗ್ಗ ಜಗ್ಗಾಟ?

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮೇಲ್ಮನವಿ ಸಲ್ಲಿಸಿದ್ದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್‌ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ಸಂಘವು ತಕರಾರು ಅರ್ಜಿ ಸಲ್ಲಿಸಿತ್ತು.

ಅದನ್ನು ಫೆಬ್ರವರಿ 23ರಂದು ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ರುಪ್ಸಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಬದಲಾವಣೆಗೆ ಸರ್ಕಾರ ಕೈಗೊಂಡಿರುವ ನಿರ್ಣಯವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸಂಘದ ಆಕ್ಷೇಪಣೆಯಾಗಿತ್ತು.

ಮೇಲ್ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಸಕ್ತ ಶೈಕ್ಷಣಿಕ ಸಾಲಿನ 5 ಮತ್ತು 8ನೇ ತರಗತಿಗಳ ಪರೀಕ್ಷೆಗಳು ಮಾರ್ಚ್‌ 13ರಂದು ಆರಂಭವಾಗಲಿರುವುದರಿಂದ ತುರ್ತಾಗಿ ಅರ್ಜಿ ಇತ್ಯರ್ಥ ಪಡಿಸಿ ಎಂದು ಸೂಚಿಸಿತ್ತು. ಅದರಂತೆ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಪರೀಕ್ಷೆಗೆ ತಡೆಯಾಜ್ಞೆ ನೀಡಿದೆ.

ಮೇಲ್ಮನವಿ ಸಲ್ಲಿಸಿದ ಸರ್ಕಾರ

ಪಬ್ಲಿಕ್‌ ಪರೀಕ್ಷೆಯನ್ನು ರದ್ದುಪಡಿಸಿದ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಮತ್ತೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ವಿಭಾಗೀಯ ಪೀಠ ಮಾರ್ಚ್‌ 13ರಿಂದಲೇ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮಾರ್ಚ್‌ 14ಕ್ಕೆ ಮುಂದೂಡಿದೆ.

ಇದೀಗ ಹೈಕೋರ್ಟ್‌ ಸೋಮವಾರ ಮತ್ತೊಮ್ಮೆ ತನ್ನ ನಿಲುವನ್ನು ಹೈಕೋರ್ಟ್‌ ಮುಂದೆ ಮಂಡಿಸಲಿದೆ. ಆಗ ಹೈಕೋರ್ಟ್‌ ಏನಾದರೂ ಒಪ್ಪಿದರೆ ಪಬ್ಲಿಕ್‌ ಪರೀಕ್ಷೆಯನ್ನೇ ನಡೆಸಲಿದೆ. ಒಂದು ವೇಳೆ ವಿಭಾಗೀಯ ಪೀಠವೂ ಇದಕ್ಕೆ ತಡೆಯಾಜ್ಞೆಯನ್ನೇ ನೀಡಿದರೆ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ. ಅದಕ್ಕೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಬೇಕಾಗುತ್ತದೆ.

ಇದನ್ನೂ ಓದಿ : Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ರದ್ದು, ಎಕ್ಸಾಂ ನಡೆಸದಂತೆ ರಾಜ್ಯ ಹೈಕೋರ್ಟ್‌ ಆದೇಶ

Exit mobile version