Site icon Vistara News

Public safety: ಸಿಟಿಗೆ ಸೇಫ್ಟಿ ಐಲ್ಯಾಂಡ್‌ ಎಂಟ್ರಿ; ಬಟನ್‌ ಒತ್ತಿದ್ದರೆ ಪೊಲೀಸರು ಬರೋದು ಗ್ಯಾರಂಟಿ

Bangalore City police Safe City Project

ಬೆಂಗಳೂರು: ಒಮ್ಮೊಮ್ಮೆ ತೊಂದರೆಯಲ್ಲಿ ಸಿಲುಕಿದಾಗ ಏನು ಮಾಡಬೇಕೆಂದು ತಲೆಗೆ ಹೊಳೆಯುವುದೇ ಇಲ್ಲ. ಪೊಲೀಸರನ್ನು ಸಂಪರ್ಕಿಸುವ (Public safety) ವಿಧಾನಗಳಿದ್ದರೂ ಕೆಲವೊಮ್ಮೆ ಅದಕ್ಕೂ ಅಡೆತಡೆಗಳುಂಟಾಗುತ್ತದೆ. ಇದನ್ನು ತಪ್ಪಿಸಲು ಈಗ ಮತ್ತೊಂದು ಯೋಜನೆಯನ್ನು ಬೆಂಗಳೂರು ನಗರ ಪೊಲೀಸರು (Bangalore City police) ಅಳವಡಿಸಿದ್ದಾರೆ. ಸೇಫ್‌ ಸಿಟಿ ಪ್ರಾಜೆಕ್ಟ್‌ನ (Safe City Project) ಭಾಗವಾಗಿ ಇದೀಗ ಸಾರ್ವಜನಿಕರ ರಕ್ಷಣೆಗಾಗಿ ನಗರ ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಜನರು ಎಮರ್ಜೆನ್ಸಿ ಎಂದಾಗ ಮೊಬೈಲ್‌ ಮೂಲಕ 112 ಗೆ ಕರೆ ಮಾಡಿ ಕಂಟ್ರೋಲ್‌ ರೂಂನ್ನು ಸಂಪರ್ಕ ಮಾಡುವ ವಿಧಾನ ಇತ್ತು. ಈಗ ಪೊಲೀಸ್‌ ಇಲಾಖೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸೇಫ್ಟಿ ಐಲ್ಯಾಂಡ್‌ (Safety Island) ಎಂಬ ವಿನೂತನ ಯೋಜನೆಯನ್ನು ಹೊರತಂದಿದೆ. ಎಮರ್ಜೆನ್ಸಿ ಎಂಬ ಬರಹ ಹೊತ್ತಿರುವ ಈ ಯಂತ್ರದ ಮುಖಾಂತರ ಕಷ್ಟಕ್ಕೆ ಸಿಲುಕಿದ್ದವರು ನೇರವಾಗಿ ಪೊಲೀಸರ ಜತೆ ಮಾತನಾಡಬಹುದು. ತಕ್ಷಣಕ್ಕೆ ಪೊಲೀಸರ ಸಹಾಯವನ್ನೂ ಪಡೆಯಬಹುದಾಗಿದೆ.

ಏನಿದು ಸೇಫ್ಟಿ ಐಲ್ಯಾಂಡ್‌?

ನೀಲಿ ಬಣ್ಣದಲ್ಲಿರುವ ಈ ಎಮರ್ಜೆನ್ಸಿ ಐಲ್ಯಾಂಡ್‌ ಬಾಕ್ಸ್‌ನಲ್ಲಿರುವ ರೆಡ್‌ ಬಟ್‌ ಒತ್ತಿದರೆ ಸಾಕು ಕಮಾಂಡ್‌ ಸೆಂಟರ್‌ನಲ್ಲಿ ಅಲಾರಂ ಆಗುತ್ತದೆ. ತಕ್ಷಣ ಐಲ್ಯಾಂಡ್‌ ಮಷೀನ್‌ ಬಳಿ ಇರುವ ಕ್ಯಾಮೆರಾ ಆನ್‌ ಆಗುತ್ತದೆ. ಕಮಾಂಡ್‌ ಸೆಂಟರ್‌ ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ. ಸಮಸ್ಯೆ ಆಲಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸುತ್ತಾರೆ.

ಪೊಲೀಸರು ಐಲ್ಯಾಂಡ್‌ ಬಳಿ ಇರುವ ಕ್ಯಾಮೆರಾದಲ್ಲಿ ಘಟನೆಯನ್ನು ನೇರವಾಗಿ ನೋಡಿ ಅದನ್ನು ದಾಖಲಿಸುವ ವ್ಯವಸ್ಥೆ ಕೂಡ ಇದೆ. ಜನರ ಜತೆಗೆ ಸಂಪರ್ಕದಲ್ಲಿದ್ದು ಅವರಿಗೆ ಧೈರ್ಯ ತುಂಬುತ್ತಲೇ ಕೇವಲ 7 ನಿಮಿಷದ ಒಳಗೆ ಹೊಯ್ಸಳ ಬೀಟ್‌ ವಾಹನಗಳನ್ನು ಕಳಿಸುವ ವ್ಯವಸ್ಥೆ ಈ ಸೇಫ್ಟ್‌ ಐಲ್ಯಾಂಡ್‌ ಸಿಬ್ಬಂದಿ ಮಾಡುತ್ತಾರೆ. ಹೀಗಾಗಿ ಇದು ಸಮಸ್ಯೆಗೊಳಗಾದವರಿಗೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಇದನ್ನೂ ಓದಿ: Heart Attack: ಹೃದಯಾಘಾತದಿಂದ ಮೃತಪಟ್ಟ ಸಂಚಾರಿ ಮಹಿಳಾ ಪೊಲೀಸ್‌; ಅನಾಥವಾದ ಕೂಸು

ಎಲ್ಲಿಲ್ಲಿದೆ ಸೇಫ್ಟಿ ಐಲ್ಯಾಂಡ್‌ ಮಷಿನ್‌?

ಈ ಸೇಫ್ಟಿ ಐಲ್ಯಾಂಡ್‌ ಯಂತ್ರವು ಇಂದಿರಾನಗರ , ಚಾಮರಾಜಪೇಟೆ, ಉಪ್ಪಾರ್‌ ಪೇಟೆ ಎಂ.ಜಿ ರಸ್ತೆ ಸೇರಿದಂತೆ ನಗರದ 30 ಕಡೆಗಳಲ್ಲಿ ಅಳವಡಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಳವಡಿಸಲು ಪೊಲೀಸ್‌ ಇಲಾಖೆಯು ಸಿದ್ಧತೆ ನಡೆಸಿದೆ. ಸಾರ್ವಜನಿಕರು ಯಾವ ರೀತಿಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version