Site icon Vistara News

Pulse of Karnataka: ಮಧ್ಯ ಕರ್ನಾಟಕ: ವಿಸ್ತಾರ-ಅಖಾಡಾ ಸಮೀಕ್ಷೆ: ಸಿಎಂ ಬೊಮ್ಮಾಯಿ ತವರು ಪ್ರದೇಶದಲ್ಲಿ ಯಾರು ಹೆಚ್ಚು ಫೇಮಸ್‌?

pulse-of-karnataka-vistara Akhada election Survey Mid Karnataka

#image_title

ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲುವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.

ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.

ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್​​ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಯಾರ ಹವಾ ಹೇಗಿದೆ ಅನ್ನೋದನ್ನ ನಿಮಗೆ ತಿಳಿಸಲಿದ್ದೇವೆ.

ಮಧ್ಯ ಕರ್ನಾಟಕ ಭಾಗದ ಜನರ ನಾಡಿಮಿಡಿತ ಹೇಗಿದೆ ಅನ್ನೋದನ್ನ ನಿಮ್ಮ ಮುಂದೆ ಇಡ್ತಿದ್ದೇವೆ. ಈ ಭಾಗದಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳನ್ನ ತೆಗೆದುಕೊಳ್ಳಲಾಗಿದೆ. ಭತ್ತ, ತೆಂಗು ಸೇರಿ ಕೃಷಿ ಪ್ರಧಾನವಾದ ಈ ಭಾಗದ ಪಲ್ಸ್ ಹೇಗಿದೆ? ಇಲ್ಲಿದೆ ವಿವರ.

ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ.?

ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿ ಜಿಲ್ಲೆಯೂ ಈ ವಲಯದಲ್ಲಿದೆ. ಬಿಜೆಪಿಗೆ ಹೆಚ್ಚು ಜನರು ಒಲವು ತೋರಿದ್ದಾರೆ ಎನ್ನುವುದು ಸಿಎಂಗೆ ಸಮಾಧಾನ ತರುವ ಸಂಗತಿ. ತುಮಕೂರಿನಲ್ಲಿ ಇತ್ತೀಚೆಗೆ ಎಚ್​​ಎಎಲ್​ ಹೆಲಿಕಾಪ್ಟರ್​ ಘಟಕವನ್ನು ಮೋದಿ ಉದ್ಘಾಟಿಸಿದ್ದು, ಅಲ್ಲಿನ ಯುವಕರಿಗೆ ಉದ್ಯೋಗ ನೀಡುವ ಆಶಯ ಹುಟ್ಟಿಸಿದೆ. ಕೇಂದ್ರ ಬಜೆಟ್​​ನಲ್ಲಿ ಈ ವರ್ಷ ನಮೂದಾದ ಏಕೈಕ ರಾಜ್ಯದ ಹೆಸರು ಕರ್ನಾಟಕ, ಅಲ್ಲಿ ಘೋಷಣೆಯಾದ ಭದ್ರಾ ಮೇಲ್ದಂಡೆ ಯೋಜನೆಯ ಲಾಭ ಈ ವಲಯಕ್ಕೇ ಆಗುತ್ತದೆ. ಕಾಂಗ್ರೆಸ್​​ ಪಕ್ಷದ ಪರವಾಗಿಯೂ ಸಾಕಷ್ಟು ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಟಸ್ಥ ಮತದಾರರು ಸರಿಸುಮಾರು ಶೇ.7.6 ರಷ್ಟಿದ್ದಾರೆ. ತಟಸ್ಥ ಮತದಾರರನ್ನು ಸೆಳೆಯುವ ಪಕ್ಷಕ್ಕೆ ಹೆಚ್ಚಿನ ಲಾಭವಿದೆ ಎನ್ನುವುದನ್ನು ರಿಪೋರ್ಟ್​ ತೋರಿಸುತ್ತಿದೆ

ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?

ಈ ವಲಯದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಅನೇಕ ಅಭ್ಯರ್ಥಿಗಳಿದ್ದಾರೆ, ಅವರು ಬೇರೆ ಬೇರೆ ಪಕ್ಷಗಳಿಗೆ ತೆರಳಿದಾಗಲೂ ಗೆದ್ದವರಿದ್ದಾರೆ. ಉದ್ಯಮ, ಉದ್ಯೋಗದ ಹಾಗೂ ಕೃಷಿ ಮೇಲೆ ಹೆಚ್ಚು ಅವಲಂಬಿತವಾಗಿರುವ ಮತದಾರರು ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕಿದ್ದಾರೆ ಎನ್ನಬಹುದು. ದಿನನಿತ್ಯ ತಮ್ಮ ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ನಾಯಕತ್ವವೇ ಪಕ್ಷಕ್ಕಿಂತಲೂ ಮುಖ್ಯ ಎಂಬ ಸಂದೇಶವನ್ನು ನೀಡಿರುವುದು ಕಂಡುಬರುತ್ತದೆ. ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದಕ್ಕಿಂತಲೂ ತಮ್ಮನ್ನು ಯಾರು ಪ್ರತಿನಿಧಿಸುತ್ತಾರೆ ಎನ್ನುವುದು ಮುಖ್ಯ ಎಂಬ ಸಂದೇಶ ನೀಡಿರುವುದನ್ನ ಕಾಣಬಹುದು.

ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?

ಧರ್ಮ ಹಾಗೂ ಜಾತಿ ರಾಜಕಾರಣದ ಬದಲಿಗೆ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ಎನ್ನುತ್ತಿದ್ದಾರೆ ಮಧ್ಯ ಕರ್ನಾಟಕದ ಮತದಾರರು. ಚಿತ್ರದುರ್ಗದಲ್ಲಿ ಕಳೆದ 2018ರ ಚುನಾವಣೆ ಸಂದರ್ಭದಲ್ಲಿ ಟಿಪ್ಪು ವರ್ಸಸ್​​ ಒನಕೆ ಓಬವ್ವ, ಟಿಪ್ಪು ವರ್ಸಸ್​​​ ಮದಕರಿನಾಯಕ ಅಭಿಯಾನವನ್ನು ಬಿಜೆಪಿ ನಡೆಸಿತ್ತು, ಇದರಿಂದ ಕೆಲ ಮಟ್ಟಿಗೆ ಬಿಜೆಪಿಗೆ ಅನುಕೂಲ ಆಗಿತ್ತು. ಧರ್ಮದ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದರೂ, ಅಂತಿಮವಾಗಿ ಅಭಿವೃದ್ಧಿಯೇ ಮುಖ್ಯ ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ. ಅಭಿವೃದ್ಧಿ ರಾಜಕಾರಣವು ಸ್ಥಳೀಯ ನಾಯಕತ್ವದ ಮೂಲಕ ಆಗಬೇಕು ಎಂಬ ಪರೋಕ್ಷ ಅಭಿಪ್ರಾಯವನ್ನೂ ಮತದಾರರು ಹೇಳುತ್ತಿದ್ದಾರೆ ಎನ್ನಬಹುದು.

ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ?

ಬಿಜೆಪಿ ಹಾಗೂ ಕಾಂಗ್ರೆಸ್​​ ಸಮಬಲವಿರುವ, ಹಿಂದೂ ಹಾಗೂ ಮುಸ್ಲಿಂ ಜನಸಂಖ್ಯೆಯೂ ಗಣನೀಯವಾಗಿರುವ ವಲಯದಲ್ಲಿ ಬಿಜೆಪಿ ಸರ್ಕಾರಕ್ಕೆ ಫಿಫ್ಟಿ ಫಿಫ್ಟಿ ಮಾರ್ಕ್ಸ್ ​ಸಿಕ್ಕಿದೆ. ಬಿಜೆಪಿ ಸರ್ಕಾರ ಅತ್ಯುತ್ತಮ ಎನ್ನುವಷ್ಟೇ ಬಹುತೇಕ ಪ್ರಮಾಣದಲ್ಲಿ ಕಳಪೆ ಎನ್ನುವವರೂ ಇದ್ದಾರೆ, ಆದರೂ ಅತ್ಯುತ್ತಮ ಹಾಗೂ ಉತ್ತಮ ಸೇರಿಸಿದರೆ ಬಿಜೆಪಿ ಸರ್ಕಾರಕ್ಕೇ ಪಾಸಿಟಿವ್​ ಆಗಿದೆ ವರದಿ. ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ 5,300 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿರುವುದು ಈ ವಲಯದಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿರುವಂತಿದೆ.

ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?

ಈ ವಲಯದ 30 ವಿಧಾನಸಭಾ ಕ್ಷೇತ್ರದಲ್ಲಿ 20s18ರಲ್ಲಿ ಬಿಜೆಪಿಯ 19 ಶಾಸಕರು ಆಯ್ಕೆಯಾಗಿದ್ದರು, ಈ ನಿಟ್ಟಿನಲ್ಲಿ ಬಿಜೆಪಿ ಶಾಸಕರಿಗೆ ಮತದಾರರಿಂದ ಸಿಕ್ಕ ಪ್ರಮಾಣಪತ್ರ ಎಂದು ಹೇಳಬಹುದು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್​​ಸಿ, ಎಸ್​​ಟಿ ಸಮುದಾಯದ ಮತದಾರರೂ ಇರುವುದರಿಂದ, ಎಸ್​​ಸಿ, ಎಸ್​​ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವು ಸ್ಥಳೀಯ ಶಾಸಕರ ಮೇಲೆ ಪ್ರಭಾವ ಬೀರಿದೆ ಎನ್ನಬಹುದು.

ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?

ಈ ವಲಯದಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯೂ ಇರುವುದರಿಂದ, ಅವರ ನಾಯಕತ್ವಕ್ಕೆ ಹೆಚ್ಚಿನ ಅಂಕ ಲಭಿಸಿದೆ. ಬಿಜೆಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಲೆಕ್ಕಕ್ಕೆ ಇರಿಸಿಲ್ಲ ಎಂಬ ಕಾಂಗ್ರೆಸ್​ ಟೀಕೆಯನ್ನು ಈ ಭಾಗದ ಮತದಾರರು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನಂತರದಲ್ಲಿ ಸಿದ್ದರಾಮಯ್ಯ ಇದ್ದು, ಡಿ.ಕೆ. ಶಿವಕುಮಾರ್​ ಅತ್ಯಂತ ಹಿಂದೆ ಉಳಿದಿದ್ದಾರೆ. ಇದು ಕಾಂಗ್ರೆಸ್​​​ನಲ್ಲಿ ಸಿದ್ದರಾಮಯ್ಯ ಮೇಲುಗೈ ಸಂದೇಶವನ್ನು ಮಧ್ಯ ಕರ್ನಾಟಕದ ಜನರು ನೀಡುತ್ತಿದ್ದಾರೆ ಎನ್ನಬಹುದು. ಪಂಚರತ್ನ ಯಾತ್ರೆ ನಡೆಸುತ್ತ, 123 ಸ್ಥಾನ ಗಳಿಸುತ್ತೇವೆ ಎಂಬ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಯವರು ಪ್ರಭಾವವು ಮಧ್ಯ ಕರ್ನಾಟಕಕ್ಕೆ ಬರುವಾಗಲೇ ಕ್ಷೀಣವಾಗಿರುವುದು ಕಾಣುತ್ತದೆ.

ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?

ಹಳೆ ಮೈಸೂರು, ಕರಾವಳಿ-ಮಲೆನಾಡಿನಂತೆಯೇ ಮಧ್ಯ ಕರ್ನಾಟಕದಲ್ಲೂ ಮೋದಿ ಅಲೆ ನಿಚ್ಛಳವಾಗಿರುವುದು ಕಾಣುತ್ತದೆ. ಎಸ್​ಸಿಎಸ್​​ಟಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದಲೂ ಇರಬಹುದು, ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ತುಸು ಹೆಚ್ಚಿನ ಒಲವನ್ನು ಮತದಾರರು ಹೊಂದಿದ್ದಾರೆ ಎನ್ನಬಹುದು. ಆಮ್​ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್​ ಕುರಿತು ಮತದಾರರು ತುಸು ಒಲವು ಹೊಂದಿದ್ದಾರೆ, ಬಹುಶಃ ಇದೇ ಕಾರಣಕ್ಕೆ ಅರವಿಂದ ಕೇಜ್ರಿವಾಲ್​​ ಮಾರ್ಚ್​​ 4ರಂದು ದಾವಣಗೆರೆಗೆ ಆಗಮಿಸಿ ಪ್ರಚಾರಾಂದೋಲನ ನಡೆಸುತ್ತಿದ್ದಾರೆ.

ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?

ಬಿಜೆಪಿ ಪ್ರಾಬಲ್ಯ ಹೆಚ್ಚಿರುವ ಕಾರಣ ಸಹಜವಾಗಿಯೇ ಮತದಾರರು, ಬಿಜೆಪಿ ಅಧಿಕಾರದಲ್ಲಿರುವ ಕಾಂಬಿನೇಷನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಬಹುದು. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಕಂಡುಬಂದ ಅಂಶವೆಂದರೆ ಹೆಚ್ಚಿನವರಿಗೆ ಸಮ್ಮಿಶ್ರ ಸರ್ಕಾರವೇ ಇಷ್ಟವಿಲ್ಲ. ಅನಿವಾರ್ಯವಾಗಿ ಯಾರಿಗೂ ಬಹುಮತ ಬಾರದಿದ್ದರೆ ಮಾತ್ರ ಮೈತ್ರಿ ಕುರಿತು ಆಲೋಚಿಸುತ್ತಾರೆ ಎನ್ನುವುದು. ಮೈತ್ರಿ ಸರ್ಕಾರಗಳು ರಚನೆಯಾದ ಸಂದರ್ಭದಲ್ಲಿ ಗೊಂದಲ, ಗದ್ದಲಗಳೇ ಜನರ ಕಣ್ಣಮುಂದೆ ಬರುತ್ತಿರಬೇಕು ಎನ್ನಿಸುತ್ತದೆ. ಈ ವಲಯದಲ್ಲಿ ಜೆಡಿಎಸ್​​ ಪ್ರಾಬಲ್ಯವೂ ತುಸು ಇದ್ದು, ಕಾಂಗ್ರೆಸ್​​ಗಿಂತಲೂ ಬಿಜೆಪಿ ಜತೆಗೆ ಮೈತ್ರಿ ಮಾಡುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಹೆಚ್ಚಿನ ಜನರು ವ್ಯಕ್ತಪಡಿಸಿದ್ದಾರೆ.

ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?

ಒಂದೆಡೆ ಮೋದಿ ಅಲೆ ಹೆಚ್ಚಾಗಿರುವುದೂ ಇದೇ ವಲಯದಲ್ಲಾದರೆ, ಬಿಜೆಪಿಯು ರಾಜ್ಯ ನಾಯಕತ್ವವನ್ನು ಹೆಚ್ಚಾಗಿ ನೆಚ್ಚಿಕೊಳ್ಳುವುದಿಲ್ಲ ಎನ್ನುವುದಕ್ಕೆ ತಾಳೆ ಆಗುತ್ತಿರುವುದನ್ನು ರಿಪೋರ್ಟ್​​ನಲ್ಲಿ ನೋಡಬಹುದು. ಬಿಜೆಪಿಯ ಕೋರ್​​​ ಐಡಿಯಾಲಜಿ ಹಿಂದುತ್ವವನ್ನೂ ಮೀರಿ ಮೋದಿ ನಾಯಕತ್ವವನ್ನೇ ಪಕ್ಷ ನೆಚ್ಚಿಕೊಂಡಿದೆ ಎಂದು ಜನರು ನಂಬಿರುವುದು ಕಂಡುಬರುತ್ತಿದೆ. ಇದು ಬಿಜೆಪಿ ಪಕ್ಷದ ಸಿದ್ಧಾಂತವನ್ನೂ ಮೀರಿ ಮೋದಿ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ಸೂಚಿಸುತ್ತಿದೆ. ಕಾಲು ಭಾಗದಷ್ಟು ಜನರು, ಬಿಜೆಪಿಯು ಅಭಿವೃದ್ಧಿಯನ್ನು ನೆಚ್ಚಿಕೊಂಡಿದೆ ಎಂದು ಅಭಿಪ್ರಾಯಪಟ್ಟಿರುವುದು ಆ ಪಕ್ಷದ ಪ್ರಚಾರಾಭಿಯಾನ ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಮುಟ್ಟಿರುವ ಸಂದೇಶ ನೀಡುತ್ತಿದೆ.

ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?

ಗುತ್ತಿಗೆದಾರರ ಸಂಘದ ಸದಸ್ಯರು ಆರೋಪ ಮಾಡಿದ 40 ಪರ್ಸೆಂಟ್​ ಕಮಿಷನ್​ ಆರೋಪ ಈ ವಲಯದ ಜನರ ಮನಸ್ಸಿನಲ್ಲೂ ಬೇರೂರಿವುದು ಕಂಡುಬರುತ್ತದೆ. ಅರ್ಧದಷ್ಟು ಮತದಾರರು, ಈ ಆರೋಪ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂದಿರುವುದು ಕಾಂಗ್ರೆಸ್​​ ಅಭಿಯಾನವು ಜನರನ್ನು ತಲುಪಿದೆ ಎಂದು ಹೇಳಬಹುದು. ಆರೋಪವು ಸುಳ್ಳು ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ, ಅದನ್ನು ನಿರೂಪಿಸಲು ಪರಿಣಾಮಕಾರಿ ಹೆಜ್ಜೆಗಳನ್ನು ಇಟ್ಟಿರುವ ಕುರಿತು ಜನರಲ್ಲಿ ಅನುಮಾನಗಳಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?

ಡಿ.ಕೆ. ಶಿವಕುಮಾರ್​​ ಹಾಗೂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಹಣಾಹಣಿಯು ಕಾಂಗ್ರೆಸ್​​ಗೆ ಡ್ಯಾಮೇಜ್​ ಆಗುತ್ತದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಇಬ್ಬರ ನಡುವಿನ ಸ್ಪರ್ಧೆಯು ಪಕ್ಷಕ್ಕೆ ಹೆಚ್ಚು ಮತಗಳನ್ನು ತಂದುಕೊಡುತ್ತದೆ ಎಂಬ ಕೆಲ ಕಾಂಗ್ರೆಸಿಗರ ಲೆಕ್ಕಾಚಾರವು ಅಷ್ಟು ಸಫಲವಾದಂತೆ ಕಾಣುತ್ತಿಲ್ಲ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್​​​​​​ ಮತದಾರರು, ಸಂಘಟನೆಯೂ ಸಾಕಷ್ಟು ಸದೃಢವಾಗಿದ್ದು, ಇದು ಒಟ್ಟಾರೆ ರಾಜ್ಯ ಮಟ್ಟದಲ್ಲೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆಯೇ ಮುಂದೆ ನೋಡಬೇಕು.

ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?

ಮಧ್ಯ ಕರ್ನಾಟಕವು ಕೃಷಿ, ಉದ್ಯಮ ಹಾಗೂ ವ್ಯಾಪಾರವನ್ನು ಹೆಚ್ಚು ನೆಚ್ಚಿಕೊಂಡ ಪ್ರದೇಶ, ಇಲ್ಲಿ ಉಚಿತ ಯೋಜನೆಗಳು ಅಷ್ಟು ಗಮನ ಸೆಳೆದಂತೆ ಕಾಣುತ್ತಿಲ್ಲ. ಮುಖ್ಯವಾಗಿ ತುಮಕೂರಿನಲ್ಲಿ ಹೆಲಿಕಾಪ್ಟರ್​ ಘಟಕ, ಚಿತ್ರದುರ್ಗದಲ್ಲಿ ಇಸ್ರೊ, ಡಿಆರ್​ಡಿಒ ಘಟಕಗಳ ಸ್ಥಾಪನೆ ಮೂಲಕ ಬಿಜೆಪಿಯು ಡಬಲ್​ ಇಂಜಿನ್​ ಸರ್ಕಾರದ ಅಭಿಯಾನ ನಡೆಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವಾದರೆ ಲಕ್ಷಾಂತರ ರೈತರು ತಾವೇ ದುಡಿದು ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದು, ಉಚಿತ ಕೊಡುಗೆಗಳ ಕುರಿತು ಹೆಚ್ಚು ಆಸಕ್ತಿ ವಹಿಸಿಲ್ಲ ಎನ್ನುವುದನ್ನು ರಿಪೋರ್ಟ್​ ಹೇಳುತ್ತಿದೆ.

ಪ್ರಶ್ನೆ 13 – ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಈ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯಕವಾಗಲಿವೆಯೇ?

ಕೇಂದ್ರ ಬಜೆಟ್​​ನಲ್ಲಿ ಘೋಷಣೆಯಾದ, ರಾಜ್ಯ ಕೇಂದ್ರಿತ ಏಕೈಕ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ, ಇದು ಪ್ರದೇಶದ ಜನರ ಮನಸ್ಸನ್ನು ನಾಟಿರುವುದು ಕಾಣುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ಕೇಂದ್ರ ಒಪ್ಪಿದೆಯಾದರೂ ಇನ್ನೂ ಆದೇಶವಾಗಿಲ್ಲ, ಆದರೂ ಜನರಲ್ಲಿ ಒಂದು ಭರವಸೆ ಮೂಡಿರುವುದು ಕಾಣುತ್ತದೆ. ಶೇ.44 ಮತದಾರರು ಇದು ಬಿಜೆಪಿಗೆ ಸಹಾಯಕವಾಗಲಿದೆ ಎಂದಿದ್ದಾರೆ, ಶೇ.25 ಮತದಾರರು ಸ್ಪಷ್ಟ ನಿರ್ಧಾರ ಹೇಳಿಲ್ಲ, ಮೂರನೇ ಒಂದು ಭಾಗದಷ್ಟು ಮತದಾರರು ಮಾತ್ರವೇ ಯಾವದೇ ಪ್ರಯೋಜನ ಆಗದು ಎಂದಿದ್ದಾರೆ. ಯಾವುದೇ ನೀರಾವರಿ ಯೋಜನೆಗಳ ಅನುಷ್ಠಾನ ನಿಧಾನವಾಗುತ್ತದೆ, ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿದರೆ ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಗೂ ಲಾಭ ತಂದುಕೊಡುವ ಸಾಧ್ಯತೆಯಿದೆ.

ಇದನ್ನೂ ಓದಿ: Pulse of Karnataka: ಹಳೆ ಮೈಸೂರು: ವಿಸ್ತಾರ-ಅಖಾಡಾ ಸಮೀಕ್ಷೆ: ಮೂವರು ಸಿಎಂ ಅಭ್ಯರ್ಥಿಗಳ ತವರು ಜನರ ಮನದಲ್ಲೇನಿದೆ?

Exit mobile version