Site icon Vistara News

Pulse of Karnataka: ವಿಸ್ತಾರ-ಅಖಾಡಾ ಸಮೀಕ್ಷೆ: ಕಿತ್ತೂರು ಕರ್ನಾಟಕ: ಹಿಂದುತ್ವ ಅಲೆಯ ನಡುವೆ ಸಿದ್ದರಾಮಯ್ಯ ಪ್ರಸಿದ್ಧಿ ಹೇಗಿದೆ?

pulse-of-karnataka-Vistara Akhada Survey Kittur Karnataka

#image_title

ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.

ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.

ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್​​ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಯಾರ ಹವಾ ಹೇಗಿದೆ ಅನ್ನೋದನ್ನ ನಿಮಗೆ ತಿಳಿಸಲಿದ್ದೇವೆ.

ಕಿತ್ತೂರು ಕರ್ನಾಟಕ ಭಾಗದ ಜನರ ನಾಡಿಮಿಡಿತ ಹೇಗಿದೆ ಅನ್ನೋದನ್ನ ನಿಮ್ಮ ಮುಂದೆ ಇಡ್ತಿದ್ದೇವೆ. ಈ ಭಾಗದಲ್ಲಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳು ಈ ವ್ಯಾಪ್ತಿಗೆ ಬರುತ್ತವೆ. ಮಹಾರಾಷ್ಟ್ರ ಗಡಿ ವಿವಾದ, ಮಹದಾಯಿ ಯೋಜನೆಯಂಥ ಉಪಯುಕ್ತ ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಷಯಗಳಾಗಿವೆ.


ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ?

ನಿರೀಕ್ಷೆಯಂತೆ ಈ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಉಳಿಸಿಕೊಂಡಿದೆ.. – ಹಿಂದುತ್ವದ ಅಲೆ ಹೊಂದಿರುವ ಮತದಾರರ ಮನದಾಳ ವ್ಯಕ್ತವಾಗಿದೆ.. – ಬಿಜೆಪಿ ವಿರೋಧ ಮತಗಳು ಕಾಂಗ್ರೆಸ್​ನತ್ತ ನೆಟ್ಟಿವೆ.. – ತಟಸ್ಥ ಮತದಾರರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಗೆ ಅಭ್ಯರ್ಥಿ ಘೋಷಣೆ ನಂತರ ಸ್ಪಷ್ಟತೆ ಸಿಗುವ ಸಾಧ್ಯತೆ ಹೆಚ್ಚಿದೆ..

ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?

ಬಿಜೆಪಿ ಸಂಘಟನೆಯಲ್ಲಿ ಪ್ರಬಲವಾಗಿದ್ದರೂ ಮತದಾರರು ಸ್ಥಳೀಯ ನಾಯಕತ್ವದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇದರಿಂದ ಪಕ್ಷಕ್ಕಿಂತ ವ್ಯಕ್ತಿತ್ವ ಮಣೆಹಾಕಿದಂತೆ ಕಾಣಿಸುತ್ತಿದೆ. ರಾಜ್ಯ ಇತರ ಭಾಗಗಳಿಗೆ ಹೋಲಿಸಿದರೆ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಸ್ವಲ್ಪ ಮಟ್ಟಿಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?

ಹೆಚ್ಚಾಗಿ ಉದ್ಯಮ ಹಾಗೂ ವ್ಯಾಪಾರಿಗಳನ್ನು ಹೊಂದಿರುವ ಈ ವಲಯದಲ್ಲಿ ಧರ್ಮಕ್ಕಿಂತೂ ಅಭಿವೃದ್ಧಿಗೆ ಮತದಾರರ ಮಣೆಹಾಕಲಿದ್ದಾರೆ. ಸ್ಥಳೀಯ ನಾಯಕತ್ವ ವಿಚಾರವೂ ಮತದಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. – ಇಲ್ಲಿ ಜಾತಿ ವಿಷ್ಯ ನಗಣ್ಯವಾಗಿದೆ ಎನ್ನುವುದು ರಿಪೋರ್ಟ್​​ನಲ್ಲ ಕಂಡು ಬರುತ್ತಿದೆ.

ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ

ಬಿಜೆಪಿ ಕುರಿತು ಉತ್ತಮ ಅಭಿಪ್ರಾಯವನ್ನು ಹೊಂದಿರುವುದು ಕಂಡುಬರುತ್ತಿದೆ. ಬಿಜೆಪಿಯ ಘಟಾನುಘಟಿ ನಾಯಕರಾದ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ, ರಮೇಶ್ ಜಾರಕಿಹೋಳಿ, ಬಸನಗೌಡ ಪಾಟೀಲ್ ಯತ್ನಾಳ್, ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೂಲ ಜಿಲ್ಲೆಯೂ ಇದೇ ಭಾಗದಲ್ಲಿರುವುದು ಮತದಾರರ ಮೇಲೆ ಪರಿಣಾಮ ಬೀರಿದಂತಿದೆ. ಬೆಳಗಾವಿ ಗಡಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿಲುವು ಮತದಾರರ ಧನಾತ್ಮಕ ಭಾವನೆ ಮೂಡಿದೆ. ಅಲ್ಲದೆ, ಹೆಚ್ಚಿನ ಮಟ್ಟದಲ್ಲಿ ಸರ್ಕಾರಕ್ಕೆ ಕಳಪೆ ಅಂಕವನ್ನು ನೀಡಲಾಗಿದೆ.. ಏಕೆಂದ್ರೆ, ಡಬಲ್ ಏಂಜಿನ್ ಸರ್ಕಾರವಿದ್ದರೂ ಬಗೆ ಹರಿಯದ ಮಹದಾಯಿ ಯೋಜನೆ ಬಿಕ್ಕಟ್ಟು.

ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?

ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಶಾಸಕರ ಕುರಿತು ಮತದಾರರು ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಆದರೂ ನಕರಾತ್ಮಕವಾದ ಅಂಶಗಳು ಶಾಸಕರ ವಿರುದ್ಧ ಕೇಳಿ ಬರುತ್ತಿದೆ. ಟಿಕೆಟ್ ಹಂಚಿಕೆ ವೇಳೆ ಅನೇಕ ಶಾಸಕರಿಗೆ ಕುತ್ತು ತರುವ ಸಾಧ್ಯತೆಗಳಿವೆ. ಬಿಜೆಪಿಯ ಅನೇಕ ಹಿರಿಯ ಶಾಸಕರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎಂಬ ಮುನ್ಸೂಚನೆ ಕೇಳಿ ಬರುತ್ತಿದೆ.

ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?

ಸಿಎಂ ಬೊಮ್ಮಾಯಿ ಅವರ ಮೂಲ ಜಿಲ್ಲೆ ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತಗಳು ಇರುವ ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ ಮುಂಚೂಣಿ ಕಾಯ್ದುಕೊಂಡಿದ್ದಾರೆ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ . ಅಲ್ಲದೆ, ಬೆಳಗಾವಿ ಭಾಗದಲ್ಲಿ ಪ್ರಭಾವ ಹೊಂದಿರುವ ಡಿ.ಕೆ.ಶಿವಕುಮಾರ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಭಾರತ್ ಜೋಡೋ ಯಾತ್ರೆ ಬೃಹತ್ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಇದು ಮತದಾರರ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಲಿಂಗಾಯತ ಮತದಾರರು ಹೆಚ್ಚಿರುವುದು ಬಿವೈ ವಿಜಯೇಂದ್ರ ಕುರಿತು ಒಲವು ವ್ಯಕ್ತವಾಗಲು ಕಾರಣ.

ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?

2014ರಿಂದ ದೇಶದಲ್ಲಿ ಆವರಿಸಿರುವ ಮೋದಿ ಮೆನಿಯಾ ಈ ಭಾಗದಲ್ಲೂ ಹೆಚ್ಚು ಕೆಲಸ ಮಾಡಿದಂತಿದೆ. ಏಕೆಂದ್ರೆ, ಅರ್ಧಕ್ಕಿಂತ ಮೀರಿ ಮೋದಿ ಪ್ರಭಾವಕ್ಕೆ ಒಳಗಾಗಿದ್ದಾರೆ. – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಪಕ್ಕದ ವಲಯದಲ್ಲೆ ಹೇಳಿಕೊಳ್ಳುವಂತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಪರ ಸಾಕಷ್ಟು ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಆದ್ರೆ, ಮೋದಿಗಿಂತಲೂ ಬಹಳ ಹಿಂದಿದ್ದಾರೆ.

ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?

ಬಿಜೆಪಿ ಸಾಂಪ್ರದಾಯಿಕ ಮತದಾರರು ಹೆಚ್ಚಿರುವ ಕಾರಣ, ಸಹಜವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಪಾಲುದಾರ ಪಕ್ಷವಾಗಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಪ್ರಭಾವ ಉಳಿಸಿಕೊಂಡಿದೆ. ಇದೇ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ತಲೆಎತ್ತಿತ್ತು. ಕುಮಾರಸ್ವಾಮಿ-ಬಿಎಸ್​ವೈ ಜೋಡಿ ಯಶಸ್ವಿಯಾಗಿ ಸರ್ಕಾರ ನಡೆಸಿದ್ದೇ ಈ ಅಭಿಪ್ರಾಯಕ್ಕೆ ಕಾರಣ ಎನ್ನಬಹುದು.

ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?

ಬಿಜೆಪಿಯ ಹಿಂದುತ್ವ ಅಜೆಂಡಾ ಹಾಗೂ ನರೇಂದ್ರ ಮೋದಿ ಅಲೆ ಈ ಭಾಗದಲ್ಲಿ ಸಮಬಲ ಹೊಂದಿದೆ. ಬಿಜೆಪಿಯ ಅಭಿವೃದ್ಧಿ ವಿಚಾರವೂ ಕೊಂಚ ಮಟ್ಟಿಗೆ ಜನರನ್ನು ತಲುಪಿದೆ. ಬಿಜೆಪಿ ರಾಜ್ಯ ನಾಯಕತ್ವವನ್ನು ಕಡೆಗಣಿಸಿದೆ, ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಜನರು ಸಮ್ಮತಿ ನೀಡಿದಂತಿದೆ.

ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?

ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಕೊಂಚ ಯಶಸ್ವಿಯಾಗಿದೆ. ಏಕೆಂದ್ರೆ, ಸುಮಾರು ಅರ್ಧದಷ್ಟು ಜನರು ಬಿಜೆಪಿ ಸರ್ಕಾರದ ಕಮಿಷನ್ ಹಾಗೂ ಭ್ರಷ್ಟಾಚಾರ ಆರೋಪದಿಂದ ಪ್ರಭಾವಿತರಾಗಿದ್ದಾರೆ. ಗೊತ್ತಿಲ್ಲ ಎನ್ನುವರ ಸಂಖ್ಯೆ ಹೆಚ್ಚಿದ್ದು, ಬಿಜೆಪಿ ಕುರಿತು ಒಲವು ಹೊಂದಿರುವ ಸಾಧ್ಯತೆಗಳಿವೆ.

ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?

ಡಿಕೆಶಿ-ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಕೈ ಪಡೆಗೆ ಹಿನ್ನಡೆ ಉಂಟು ಮಾಡುವ ಸ್ಪಷ್ಟ ಸೂಚನೆ ನೀಡಿದೆ. ಈ ಭಾಗದ ಪ್ರಭಾವಿಯಾದ ಎಂಬಿ ಪಾಟೀಲ್, ಸತೀಶ್ ಜಾರಕಿಹೋಳಿಯಂಥ ನಾಯಕರು ಒಗ್ಗಟ್ಟು ಕಾಯ್ದುಕೊಂಡಿಲ್ಲ ಎನ್ನುವ ಸೂಚನೆ ನೀಡಿದೆ. ಅಲ್ಲದೆ, ಡಿಕೆಶಿ-ಸಿದ್ದರಾಮಯ್ಯ ಅವರ ಪ್ರತ್ಯೇಕ ಬಣಗಳು ಮತದಾರರಲ್ಲಿ ಕೊಂಚ ಗೊಂದಲ ಮೂಡಿಸಿದೆ.

ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?

ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಾಂಗ್ರೆಸ್​ ಉಚಿತ ಘೋಷಣೆಗಳು ಮತದಾರರನ್ನು ಪ್ರಭಾವಿಸಿರುವ ಸೂಚನೆಯನ್ನು ರಿಪೋರ್ಟ್ ನೀಡುತ್ತಿದೆ. ಅಲ್ಲದೆ, ಉಚಿತ ಘೋಷಣೆಗಳು ಆರ್ಥಿಕತೆ ಒಳ್ಳೆದಲ್ಲ ಎಂಬ ಮೋದಿ ಮಾತು, ಜನರಿಗೆ ಇನ್ನೂ ಮನವರಿಕೆಯಾದಂತೆ ಕಾಣುತ್ತಿಲ್ಲ. ಬೆಲೆ ಏರಿಕೆಯಿಂದ ಜನರು ತತ್ತರಿಸಿರುವುದು ಸಹಿತ, ಉಚಿತ ಘೋಷಣೆಗಳ ಕುರಿತು ಒಲವು ಹೊಂದಿರುವ ಸಾಧ್ಯತೆ ಇದೆ.

ಪ್ರಶ್ನೆ 13 – ಈ ಭಾಗದಲ್ಲಿ ನೀವು ಮತ ಯಾರಿಗೆ ನೀಡಬೇಕೆಂಬುದಕ್ಕೆ ನಿರ್ಣಾಯಕವಾದ ಅಂಶ ಯಾವುದು?

ಮಹಾರಾಷ್ಟ್ರ ಗಡಿ ವಿವಾದದಂತ ಭಾವನಾತ್ಮಕ ವಿಚಾರಗಿಂತಲೂ, ಮಹದಾಯಿ ಯೋಜನೆಯಂಥ ಉಪಯುಕ್ತ ಯೋಜನೆಗಳ ಕುರಿತು ಜನರು ಆಸಕ್ತಿ ಹೊಂದಿರುವ ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ಥಳೀಯ ನಾಯಕತ್ವದ ಕುರಿತು ಹೆಚ್ಚಿನ ಜನರು ಆಸಕ್ತಿ ವಹಿಸಿದಂತಿದೆ.

ಇದನ್ನೂ ಓದಿ: Pulse of Karnataka: ವಿಸ್ತಾರ-ಅಖಾಡಾ ಸಮೀಕ್ಷೆ: ಕಲ್ಯಾಣ ಕರ್ನಾಟಕ: ಗಣಿ ರೆಡ್ಡಿ ಪಕ್ಷದ ಭವಿಷ್ಯವೇನು? ಇದು ಬಿಜೆಪಿಗೆ ಹೆಚ್ಚು ನಷ್ಟ ತರುತ್ತದೆಯೇ?

Exit mobile version