ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ (Pulse of Karnataka).
ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.
ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಯಾರ ಹವಾ ಹೇಗಿದೆ ಅನ್ನೋದನ್ನ ನಿಮಗೆ ತಿಳಿಸಲಿದ್ದೇವೆ.
ಈಗ ನಾವು ಮಲೆನಾಡು ಮತ್ತು ಕರಾವಳಿ ಭಾಗದ ಜನರ ಪಲ್ಸ್ ಹೇಗಿದೆ ಅನ್ನೋದನ್ನ ನಿಮ್ಮ ಮುಂದೆ ಇಡ್ತಿದ್ದೇವೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳನ್ನ ತೆಗೆದುಕೊಂಡಿದ್ದು, ಈ ಭಾಗದಲ್ಲಿ ಜನಾಭಿಪ್ರಾಯ ಹೇಗಿದೆ ನೋಡೋಣ ಬನ್ನಿ…
ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ.?
ಬಿಜೆಪಿಯ ಹಿಂದುತ್ವದ ಪ್ರಯೋಗಶಾಲೆ ಎಂದೇ ಗುರುತಿಸಲಾಗುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡಿದೆ. ಹೀಗಾಗಿ ಸರಿಸುಮಾರು ಅರ್ಧದಷ್ಟು ಮತದಾರರು ಬಿಜೆಪಿ ಕಡೆಗೆ ಒಲವು ಹೊಂದಿರುವುದು ಕಾಣುತ್ತಿದೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಜತೆಗೆ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಜತೆಗೆ ಶಿವಮೊಗ್ಗದಲ್ಲಿ ಮಾತ್ರ ಜೆಡಿಎಸ್ ಕೆಲವು ಕ್ಷೇತ್ರಗಳಲ್ಲಿ ಸೆಣೆಸಾಡುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಇದೇ ಕಾರಣಕ್ಕೆ ಜೆಡಿಎಸ್ ಕುರಿತು ಶೇ.8.5 ಮತದಾರರು ಒಲವು ಹೊಂದಿದ್ದಾರೆ. ಹಿಂದುತ್ವ ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಸರ್ಕಾರ ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಕರಾವಳಿಯಲ್ಲಿ ಹೊಗೆಯಾಡಿತ್ತು. ಸ್ವತಃ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರನ್ನು ಕಾರ್ಯಕರ್ತರು ಹಿಡಿದು ಅಲುಗಾಡಿಸಿದ್ದರು. ಈ ಅಸಮಾಧಾನವನ್ನು ಸ್ವಲ್ಪಮಟ್ಟಿಗೆ ತಣಿಸಲು ಬಿಜೆಪಿ ಯಶ ಕಂಡಿರುವಂತೆ ಈ ಸಮೀಕ್ಷೆಯಲ್ಲಿ ಕಾಣುತ್ತಿದೆ. ಆದ್ರೆ ತಟಸ್ಥ ಮತದಾರರ ಸಂಖ್ಯೆ ಈ ಭಾಗದಲ್ಲೂ ಶೇ.6.6 ರಷ್ಟಿದ್ದು ಅಂತಿಮ ಕ್ಷಣದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?
ಬಿಜೆಪಿಯು ಬೂತ್ ಪ್ರಮುಖರನ್ನು, ಪೇಜ್ ಪ್ರಮುಖರನ್ನು ನೇಮಕ ಮಾಡಿದ್ದೇ ಮೊದಲಿಗೆ ಈ ಜಿಲ್ಲೆಗಳಲ್ಲಿ, ಸಂಘಟನೆ ಸದೃಢವಾಗಿದೆ. ಕಾಂಗ್ರೆಸ್ ಸಂಘಟನೆಯೂ ಸಾಕಷ್ಟು ಭದ್ರವಾಗಿದೆ. ಇದೇ ಕಾರಣಕ್ಕೆ ಸರಿಸುಮಾರು ಅರ್ಧದಷ್ಟು ಮತದಾರರು ಪಕ್ಷದ ಕುರಿತು ಒಲವು ಹೊಂದಿದ್ದಾರೆ. ಆದರೆ ಶೇ.47 ಮತದಾರರು ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಿರುವುದರಿಂದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷಗಳಿಗೆ ಇದು ಎಚ್ಚರಿಕೆ ಘಂಟೆ ಎನ್ನುವ ಸಂದೇಶ ನೀಡಿದೆ. ಸಂಘಟನೆ ಸದೃಢವಾಗಿದೆ ಎನ್ನುತ್ತಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ್ರೆ, ಸಾಮರ್ಥ್ಯ ಇಲ್ಲದವರನ್ನು ಆಯ್ಕೆ ಮಾಡಿದ್ರೆ ತಕ್ಕ ಪಾಠ ಕಲಿಸುವ ಮುನ್ಸೂಚನೆಯನ್ನೂ ಈ ರಿಪೋರ್ಟ್ ನೀಡುತ್ತದೆ.
ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?
ರಾಜ್ಯದಲ್ಲಿ ಹಿಜಾಬ್ ಹಾಗೂ ಹಲಾಲ್ ಕುರಿತ ಗಲಾಟೆ ಆರಂಭವಾಗಿದ್ದೇ ಈ ಪ್ರದೇಶದಿಂದ, ಆದರೂ ಧರ್ಮದ ಕುರಿತು ಜನರಿಗೆ ಹೆಚ್ಚು ಒಲವಿಲ್ಲ. ರಸ್ತೆ, ಚರಂಡಿಯಂತಹ ವಿಚಾರ ಕೇಳಬೇಡಿ, ಹಿಜಾಬ್ ಕುರಿತು ಆಲೋಚಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದ ಮಾತು ವೈರಲ್ ಆಗಿತ್ತು. ಆದರೆ ಇಲ್ಲಿನ ಜನರು ಮಾತ್ರ ಹಿಜಾಬ್, ಹಲಾಲ್ನಂತಹ ಧಾರ್ಮಿಕ ವಿಚಾರಕ್ಕಿಂತಲೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ರಿಪೋರ್ಟ್ನಲ್ಲಿ ತಿಳಿದುಬಂದಿದೆ. ಅಭಿವೃದ್ಧಿ ನಂತರದಲ್ಲಿ ಶೇ.29 ಮತದಾರರು ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಅಂದರೆ ಧರ್ಮದ ವಿಚಾರದಲ್ಲಿ ಮತದಾರರನ್ನು ಎಳೆದಾಡುವ ನಾಯಕನಿಗಿಂತಲೂ ಅಭಿವೃದ್ಧಿಯನ್ನು ಕೇಂದ್ರವಾಗಿಸಿಕೊಂಡ ನಾಯಕತ್ವ ಬೇಕು ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ ಎನ್ನಬಹುದು.
ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ
ಮುಖ್ಯವಾಗಿ ಹಿಂದು ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಇಲ್ಲಿನ ಮತದಾರರಿಗೆ ಸರ್ಕಾರದ ಮೇಲೆ ಕೋಪ ಇರುವುದನ್ನು ಇಲ್ಲಿ ತೋರಿಸುತ್ತಿದೆ. ಬೆಂಗಳೂರಿನಿಂದ ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆ ಇಷ್ಟು ವರ್ಷವಾದರೂ ಅಭಿವೃದ್ಧಿ ಆಗದ ಅಸಮಾಧಾನ ಎದ್ದು ಕಾಣುತ್ತಿದೆ. ಹಿಂದುತ್ವದ ಪೋಸ್ಟರ್ ಬಾಯ್ಗಳು ಎಂದೇ ಪರಿಗಣಿಸಲ್ಪಡುವ ಸಿ.ಟಿ. ರವಿ ಪ್ರತಿನಿಧಿಸುವ ಚಿಕ್ಕಮಗಳೂರು ಹಾಗೂ ವಿ. ಸುನಿಲ್ ಕುಮಾರ್ ಪ್ರತಿನಿಧಿಸುವ ಉಡುಪಿ ಕ್ಷೇತ್ರವೂ ಇದರಲ್ಲಿವೆ. ಅತ್ಯುತ್ತಮ ಎಂದು ಕೇವಲ ಶೇ.20 ಮತದಾರರು ಮಾತ್ರ ಹೇಳಿರುವುದು, ಈ ಕ್ಷೇತ್ರಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪ್ರಚಾರಾಂದೋಲನ ಯಶ ಕಂಡಿರುವಂತೆ ಭಾಸವಾಗುತ್ತಿದೆ. ಮುಖ್ಯವಾಗಿ 40 ಪರ್ಸೆಂಟ್ ಕಮಿಷನ್ ಆರೋಪ ಮುನ್ನೆಲೆಗೆ ಬಂದಿದ್ದಾಗ, ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಉಡುಪಿಯಲ್ಲಿ. ಈ ಆತ್ಮಹತ್ಯೆ ಪ್ರಕರಣದ ನಂತರ ರಾಜ್ಯ ಸರ್ಕಾರದ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕಾಗಿ ಬಂದಿದ್ದು, ಬಿಜೆಪಿ ಕಾರ್ಯಕರ್ತರಿಗೆ ಮುಜುಗರ ಉಂಟುಮಾಡಿತ್ತು. ಈ ಕಾರಣಕ್ಕಾಗಿಯೂ ಒಟ್ಟಾರೆ ಸರ್ಕಾರದ ಕುರಿತು ಮತದಾರರಲ್ಲಿ ಸಮಾಧಾನ ಇರುವಂತೆ ಕಾಣುತ್ತಿಲ್ಲ.
ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?
ಈ ಭಾಗದ 27 ಶಾಸಕರಲ್ಲಿ 24 ಬಿಜೆಪಿ ಶಾಸಕರೇ ಇರುವುದರಿಂದ ಶೇ.36.1 ಮತದಾರರಿಗೆ ಶಾಸಕರ ಬಗ್ಗೆ ಸಮಾಧಾನ ಇರುವುದನ್ನು ತೋರಿಸುತ್ತಿದೆ. ಶಾಲೆಯ ಲೆಕ್ಕದಲ್ಲಿ ಹೇಳುವುದಾದರೆ ಜಸ್ಟ್ ಪಾಸ್ ಎಂದು ಹೇಳಬಹುದು. ಹರೀಶ್ ಪೂಂಜಾ, ಭರತ್ ಶೆಟ್ಟಿ ಅವರಂತಹ ಹೊಸ ಶಾಸಕರು, ಬಿ.ಎಸ್.ಯಡಿಯೂರಪ್ಪ ಅವರಂತಹ ಅತ್ಯಂತ ಹಿರಿಯ ಶಾಸಕರೂ ಈ ವಲಯದಲ್ಲಿದ್ದಾರೆ. ಕ್ಷೇತ್ರದ ಶಾಸಕರು ಬದಲಾಗಬೇಕು ಎಂದು ಶೇ.20 ಮತದಾರರು ಹೇಳಿರುವುದು ಹಾಲಿ ಶಾಸಕರಿಗೆ ಎಚ್ಚರಿಕೆ ಗಂಟೆ ಎಂದು ಪರಿಗಣಿಸಬಹುದು. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವೇ ಇರುವುದರಿಂದ ಆಡಳಿತ ವಿರೋಧಿ ಅಲೆಯ ಪರಿಣಾಮ ಶಾಸಕರ ಮೇಲೆಯೂ ಬೀರಿರುವ ಸಾಧ್ಯತೆಯಿರುತ್ತದೆ. ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಈ ಅಂಶವು ಗಂಭಿರವಾಗಿ ಪರಿಗಣಿಸಬೇಕಾದ ಸಾಧ್ಯತೆಯನ್ನು ಇದು ಸೂಚಿಸುತ್ತದೆ.
ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?
ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಸ್ಥಾನಕ್ಕೆ ಫೇವರಿಟ್ ಎನ್ನುವುದು, ಹಿಂದುತ್ವ ನೆಲದಲ್ಲಿ ಸಿಎಂ ಜನಪ್ರಿಯತೆಯನ್ನು ಸೂಚಿಸುತ್ತಿದೆ. ಸಾಮಾನ್ಯವಾಗಿ ಹಿಂದುತ್ವಕ್ಕೆ ಹೆಚ್ಚು ಆಸಕ್ತಿ ತೋರದ ಸಿಎಂ ಕುರಿತ ಈ ಆಸಕ್ತಿಯು, ಅಭಿವೃದ್ದಿ ಕುರಿತು ಜನರ ಒಲವನ್ನು ತೋರಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ಬಹುತೇಕ ಸಿಎಂ ಬೊಮ್ಮಾಯಿ ಅವರಷ್ಟೇ ಜನಪ್ರಿಯತೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗುವ ಅಂದಾಜಿದೆ. ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸುವ ನಾಯಕರಾಗಿ ಸಿದ್ದರಾಮಯ್ಯ ಗುರುತಿಸಿಕೊಂಡಿರುವುದು, ಬಿಜೆಪಿ ವಿರೋಧಿ ಮತಗಳಿಗೆ ನಾಯಕರಂತೆ ಕಂಡಿರುವ ಸಾಧ್ಯತೆಯಿದೆ. ಹಳೆ ಮೈಸೂರಿನ ಭಾಗದವರೇ ಆದರೂ ಈ ಭಾಗದಲ್ಲಿಯೂ ಬಿ.ವೈ.ವಿಜಯೇಂದ್ರ ಪರ ವಾತಾವರಣ ಇರುವುದು, ಯುವ ಮತದಾರರು ಇತ್ತ ಒಲವು ಹೊಂದಿದ್ದಾರೆ ಎಂದು ತೋರುತ್ತಿದೆ.
ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?
ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗೆಲ್ಲ ಅಭೂತ ಪೂರ್ವ ಸ್ವಾಗತವೇ ಲಭಿಸಿದೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಮೈದಾನದವರೆಗೆ ಚೈನ್ ಲಿಂಕ್ ಮಾಡಿ ಮತದಾರರು ಸ್ವಾಗತ ಕೋರಿದ್ದರು. ರಾಹುಲ್ ಗಾಂಧಿ ಅವರ ಹೋಲಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ಪಟ್ಟಿಗಿಂತಲೂ ಹೆಚ್ಚು ಜನಪ್ರಿಯತೆ ಹೊಂದಿರುವುದು ಕಾಂಗ್ರೆಸ್ಗೆ ಚಿಂತೆಯ ವಿಷಯ ಎನ್ನಬಹುದು. ಕಾಂಗ್ರೆಸ್ ಇಲ್ಲಿ ಸಂಘಟನೆಯನ್ನು ಹೊಂದಿದ್ದರೂ ಮಲ್ಲಿಕಾರ್ಜುನ ಖರ್ಗೆ ಹೋಲಿಕೆಯಲ್ಲಿ ಅರವಿಂದ ಕೇಜ್ರಿವಾಲ್ ಜನಪ್ರಿಯತೆಯೇ ಹೆಚ್ಚಿರುವುದು ಕಂಡುಬರುತ್ತಿದೆ.
ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?
ಬಿಜೆಪಿ ಪರವಾಗಿರುವ ಮತದಾರರು ಸಹಜವಾಗಿ ಬಿಜೆಪಿ ಅಧಿಕಾರದಲ್ಲಿರಬೇಕು ಎಂದು ಬಯಸುತ್ತಿರುವುದು ಕಾಣುತ್ತಿದೆ. ಜೆಡಿಎಸ್ನೊಂದಿಗೆ ಈ ಹಿಂದೆ ಬಿಜೆಪಿ ಮೈತ್ರಿ ಸರ್ಕಾರ ನಡೆಸಿದ ಅನುಭವವಿದೆ, ಆಗ ಉತ್ತಮ ಆಡಳಿತ ಸಿಕ್ಕಿತು ಎಂಬ ವಿಚಾರವೂ ಮತದಾರರಿಗೆ ನೆನಪಿರುವಂತಿದೆ – ಜೆಡಿಎಸ್ಗೆ ಅಧಿಕಾರ ಸಿಕ್ಕರೂ ಸರಿ, ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಮನಃಸ್ಥಿತಿ ಹೆಚ್ಚಾಗಿ ಕಾಣುತ್ತಿದೆ. ಇದರ ನಡುವೆಯೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತೀರಾ ಕಡಿಮೆ ಬೆಂಬಲವೇನೂ ಇಲ್ಲ ಎನ್ನುವುದು ಈ ರಿಪೋರ್ಟ್ ನಲ್ಲಿ ಕಾಣಬಹುದಾಗಿದೆ.
ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?
ಹಿಂದುತ್ವದ ಪ್ರಯೋಗಶಾಲೆಯ ಜಿಲ್ಲೆಗಳೇ ಆದ್ದರಿಂದ ಶೇ.40 ಮತದಾರರು, ಬಿಜೆಪಿಯು ಹಿಂದುತ್ವ ಅಜೆಂಡಾವನ್ನೇ ನೆಚ್ಚಿಕೊಂಡಿದೆ ಎಂದಿದ್ದಾರೆ. ಹಿಂದುತ್ವದ ನಂತರ ನರೇಂದ್ರ ಮೋದಿ ಜನಪ್ರಿಯತೆ, ಆ ನಂತರದಲ್ಲಿ ಅಭಿವೃದ್ಧಿ ರಾಜಕಾರಣವನ್ನು ಬಿಜೆಪಿ ಅನುಸರಿಸುತ್ತದೆ ಎನ್ನುವುದು ಜನರ ಮನದಾಳ. ಪ್ರತಿಪಕ್ಷಗಳು ಹೇಳುವುದಕ್ಕೆ ಅನುಗುಣವಾಗಿ, ರಾಜ್ಯ ನಾಯಕತ್ವಕ್ಕೆ ಬೆಲೆ ನೀಡುವುದಿಲ್ಲ ಎನ್ನುವ ಅಭಿಪ್ರಾಯವನ್ನೇ ಮತದಾರರೂ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?
ಬಿಜೆಪಿ ಭದ್ರಕೋಟೆಯಲ್ಲೇ 40 ಪರ್ಸೆಂಟ್ ಕಮಿಷನ್ ವಿಚಾರ ಗಂಭೀರವಾಗಿ ಪರಿಗಣಿತವಾಗಿರುವುದು ಆ ಪಕ್ಷಕ್ಕೆ ಎಚ್ಚರಿಕೆ ಗಂಟೆ ಎನ್ನಬಹುದು. ಮುಖ್ಯವಾಗಿ ಕರಾವಳಿ, ಕೊಡಗು, ಶಿವಮೊಗ್ಗ ಭಾಗದಲ್ಲಿ ಭ್ರಷ್ಟಾಚಾರ ವಿಚಾರವನ್ನು ಮತದಾರರು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ. ಅರ್ಧಕ್ಕಿಂತಲೂ ಹೆಚ್ಚು ಮತದಾರರು, ಬಿಜೆಪಿಗೆ ಹಿನ್ನೆಡೆ ತರುತ್ತದೆ ಎಂದು ಹೇಳಿರುವುದು ಕಾಂಗ್ರೆಸ್ ಪ್ರಚಾರ ಅಭಿಯಾನ ಸಾಕಷ್ಟು ಸಫಲವಾಗಿದೆ ಎನ್ನುವುದನ್ನು ಸೂಚಿಸುತ್ತಿದೆ. 40 ಪರ್ಸೆಂಟ್ ಭ್ರಷ್ಟಾಚಾರ ಆರೋಪವನ್ನು ನಿರಾಕರಿಸಲು ಬಿಜೆಪಿ ಸರ್ಕಾರವು ಪರಿಣಾಮಕಾರಿ ಹೆಜ್ಜೆಗಳನ್ನು ಇಡಲಿಲ್ಲವೇ ಎಂಬ ಅನುಮಾನಗಳನ್ನು ಇದು ಹುಟ್ಟುಹಾಕಿದೆ. ಬಿಜೆಪಿಯು ನಡೆಸಿದ ಬೂತ್ ವಿಜಯ ಅಭಿಯಾನವು ಈ ಭಾಗದಲ್ಲಿ ಪಕ್ಷದ ಪರ ಅಭಿಪ್ರಾಯ ನಿರ್ಮಾಣ ಮಾಡಲು ಎಷ್ಟು ಸಫಲವಾಗಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರೂ ಈ ಭಾಗದವರಲ್ಲ, ಆದರೆ ಕಾಂಗ್ರೆಸ್ನಲ್ಲಿ ಇಬ್ಬರು ನಾಯಕರೂ ಬೆಂಬಲಿಗರನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುತ್ತಿರುವುದು ಮತದಾರರಲ್ಲಿ ನಕಾರಾತ್ಮಕ ಭಾವನೆ ಮೂಡಿಸಿರುವುದು ಕಂಡುಬರುತ್ತಿದೆ. ಈ ವಿಚಾರವು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತದೆ ಹಾಗೂ ಆಗಬಹುದು ಎಂಬ ಎರಡು ಉತ್ತರವನ್ನು ಸೇರಿಸಿದರೆ ಶೇ.55 ಆಗುತ್ತದೆ. ನಾಯಕತ್ವದಲ್ಲಿನ ಗೊಂದಲವು ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗೊಂದಲವನ್ನು ನಿರ್ಮಿಸಿರುವುದನ್ನು ಈ ರಿಪೋರ್ಟ್ ತೋರಿಸುತ್ತಿದೆ.
ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?
ಕಾಂಗ್ರೆಸ್ ಈಗಾಗಲೇ ಮೂರು ಉಚಿತ ಘೋಷಣೆಗಳನ್ನು ಮಾಡಿದೆ, ಬಿಜೆಪಿ ಸರ್ಕಾರವೂ ಬಜೆಟ್ನಲ್ಲಿ ಕೆಲವು ಯೋಜನೆ ಘೋಷಣೆ ಮಾಡಿದೆ. ಆದರೆ ಸ್ವತಃ ಪ್ರಧಾನಿ ಮೋದಿ ಮಾತನಾಡುತ್ತ, ಉಚಿತ ಘೋಷಣೆಗಳು ಆರ್ಥಿಕತೆಗೆ ಒಳ್ಳೆಯದಲ್ಲ ಎಂದು ಹೇಳಿದ್ದರು. ಇಷ್ಟರ ನಂತರವೂ ಉಚಿತ ಘೋಷಣೆಗಳು ಜನರ ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂಬ ಸೂಚನೆಯನ್ನು ಈ ರಿಪೋರ್ಟ್ ನೀಡುತ್ತಿದೆ.
ಪ್ರಶ್ನೆ 13 – ಹಿಂದು-ಮುಸ್ಲಿಂ ಕಾರ್ಯಕರ್ತರ ಹತ್ಯೆ ಘಟನೆಗಳು ನಿಮಗೆ ಮತ ಚಲಾಯಿಸಲು ನಿರ್ಣಾಯಕ ವಿಚಾರಗಳಾಗುತ್ತವೆಯೇ?
ಈ ಹಿಂದಿನ ಪ್ರಶ್ನೆಗಳಿಗೆ ಉತ್ತರಿಸಿದಂತೆಯೇ, ಮತದಾರರು ಹೆಚ್ಚು ಅಭಿವೃದ್ಧಿ, ಉತ್ತಮ ಜೀವನದ ಪರವಾಗಿದ್ದಾರೆ. ಹಿಂದುವಾಗಲಿ ಮುಸ್ಲಿಂ ಆಗಲಿ ಯಾವುದೇ ಕಾರ್ಯಕರ್ತರು ನಿಧನರಾಗುವುದು ಹೆಚ್ಚಿನ ಮತದಾರರಿಗೆ ಇಷ್ಟವಿಲ್ಲದ ವಿಚಾರ ಎನ್ನುವುದು ಕಾಣುತ್ತದೆ. ಹಿಂದುತ್ವವಾಗಲಿ ಮುಸ್ಲಿಂ ತುಷ್ಟೀಕರಣವೇ ಆಗಲಿ ಎರಡಕ್ಕಿಂತಲೂ ಅಭಿವೃದ್ಧಿ ವಿಚಾರವೇ ಮುಖ್ಯ ಎಂಬ ವಿಚಾರವನ್ನು ಮುಂದಿಟ್ಟಿರುವುದು ತಿಳಿಯುತ್ತಿದೆ. ಇದು ಎಲ್ಲ ಪಕ್ಷಗಳಿಗೂ ಚುನಾವಣೆಯ ದಿಕ್ಸೂಚಿ ಎಂದು ಹೇಳಬಹುದು.
ಇದನ್ನೂ ಓದಿ: Pulse of Karnataka: ಹಳೆ ಮೈಸೂರು: ವಿಸ್ತಾರ-ಅಖಾಡಾ ಸಮೀಕ್ಷೆ: ಮೂವರು ಸಿಎಂ ಅಭ್ಯರ್ಥಿಗಳ ತವರು ಜನರ ಮನದಲ್ಲೇನಿದೆ?