ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲುವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.
ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.
ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ಹಳೆ ಮೈಸೂರು ಭಾಗದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನ ತೆಗೆದುಕೊಳ್ಳಲಾಗಿದೆ.
ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ.?
ಚುನಾವಣೆಗೆ ಇನ್ನೂ 2 ತಿಂಗಳು ಬಾಕಿ ಇರುವಾಗ ಜನರ ಮೂಡ್ ಏನಿದೆ ಅನ್ನೋದು ಸರ್ವೇನಲ್ಲಿ ಬಹಿರಂಗವಾಗಿದೆ. ಇನ್ನೂ ಅಭ್ಯರ್ಥಿಗಳ ಘೋಷಣೆಗೂ ಮುನ್ನ ಮತದಾರರ ಮನದಲ್ಲಿರುವ ಭಾವನೆ ಇದು. ಇಲ್ಲಿ ಪಕ್ಷವೇ ಮುಖ್ಯವಾದಾಗ ಸಿಗಬಹುದಾದ ರಿಜಲ್ಟ್ ಇದಾಗಿದೆ. ಅಭ್ಯರ್ಥಿ ಘೋಷಣೆ ನಂತರ ಈ ಫಲಿತಾಂಶ ಬದಲಾವಣೆ ಸಾಧ್ಯತೆ ಹೆಚ್ಚಿರುತ್ತದೆ. ಇದು ಕೇವಲ ಪಕ್ಷಗಳಿಗೆ ದಿಕ್ಸೂಚಿಯಂತಿದ್ದು, ಇದರ ಆಧಾರದ ಚುನಾವಣಾ ತಂತ್ರಗಾರಿಕೆ ಮಾಡಿಕೊಳ್ಳಬಹುದು. ಹಳೆ ಮೈಸೂರು ಭಾಗ ಬೆಂಗಳೂರಿಗೆ ಸಮೀಪವಿದ್ರೂ ಎಎಪಿ ಗೆ ಜನ ಒಲವು ತೋರಿದಂತೆ ಕಾಣ್ತಿಲ್ಲ.
ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?
ಇಲ್ಲಿ ನಮಗೆ ಜನ ಕ್ಷೇತ್ರದ ಅಭ್ಯರ್ಥಿ ಯಾರು ಅನ್ನೋದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡ್ತಿರೋದು ಕಾಣುತ್ತಿದೆ. ಪ್ರತಿನಿತ್ಯ ಜನಸಾಮಾನ್ಯರ ಸಮಸ್ಯೆಗಳನ್ನ ಕೇಳುವ ಸ್ಥಳೀಯ ನಾಯಕನೇ ಮುಖ್ಯ ಎನ್ನುತ್ತಿದ್ದಾರೆ. ಅಭ್ಯರ್ಥಿಯ ನಂತರವೇ ಪಕ್ಷವನ್ನ ಪರಿಗಣಿಸ್ತಿದ್ದಾರೆ. ರಾಜಕೀಯ ಪಕ್ಷಗಳು ಅಭ್ಯರ್ಥಿಯ ಆಯ್ಕೆ ವೇಳೆ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಲ್ಲಿನ ಜನರಿಗೆ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದಕ್ಕಿಂತ ಸ್ಥಳೀಯ ನಾಯಕರೇ ಮುಖ್ಯ. ಈ ಭಾಗದಿಂದಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸೆಣಸಾಡುತ್ತಿದ್ದಾರೆ. ಆದ್ರೆ ಸರ್ವೇಯಲ್ಲಿ ಜನರಿಗೆ ಮುಖ್ಯಮಂತ್ರಿ ಅಭ್ಯರ್ಥಿಗಿಂತ ಕ್ಷೇತ್ರದ ಅಭ್ಯರ್ಥಿಯೇ ಮತ ಹಾಕಲು ನಿರ್ಣಾಯಕ.
ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?
ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಜನ ತಮಗೆ ಅಭಿವೃದ್ಧಿಯೇ ಮುಖ್ಯ ಎಂದಿದ್ದಾರೆ. ಧಾರ್ಮಿಕ ಮತ್ತು ಜಾತಿ ಆಧಾರಿತ ವಿಷಯಗಳ ಮೇಲೆ ಚುನಾವಣೆ ಮಾಡುವವರು ಇದನ್ನ ಗಮನಿಸಬೇಕು. ಅಭಿವೃದ್ಧಿ ಮಾಡುವವರಿಗೆ ಮಾತ್ರ ತಮ್ಮ ಮತ ಎನ್ನುತ್ತಿದ್ದಾರೆ ಈ ಭಾಗದ ಮತದಾರರು. ನಂತರದ ಸ್ಥಾನದಲ್ಲಿ ನಾಯಕತ್ವವನ್ನ ಪರಿಗಣಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ನಾಯಕತ್ವ ಎರಡೂ ಕಾಂಬಿನೇಶನ್ ಹೊಂದಿದ ಪಕ್ಷಕ್ಕೆ ಗೆಲುವಿನ ಸಾಧ್ಯತೆ ಹೆಚ್ಚು.
ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ
ಹಾಲಿ ಬಿಜೆಪಿ ಸರ್ಕಾರದ ಬಗ್ಗೆ ಈ ಭಾಗದ ಜನ ಅಸಮಧಾನ ಹೊಂದಿದ್ದಾರೆ ಎನ್ನೋದು ಸ್ಪಷ್ಟವಾಗಿ ಕಾಣ್ತಿದೆ. ಅರ್ಧದಷ್ಟು ಜನ ಇದನ್ನ ಇದೊಂದು ಕಳಪೆ ಸರ್ಕಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 25 ಪರ್ಸೆಂಟ್ ನಷ್ಟು ಜನ ಇದೊಂದು ಸಾಮಾನ್ಯ ಆಡಳಿತ ಎಂದಿದ್ದಾರೆ. ಉತ್ತಮ, ಅತ್ಯುತ್ತಮ ಅನ್ನೋವ್ರ ಸಂಖ್ಯೆಗಿಂತ ಸಾಮಾನ್ಯ, ಕಳಪೆ ಅನ್ನೋವ್ರೇ ಹೆಚ್ಚಾಗಿದ್ದಾರೆ. ಹಳೆ ಮೈಸೂರು ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಇರೋ ಪ್ರಾಂತ್ಯ.. ಇದು ಕೂಡ ಈ ಅಭಿಪ್ರಾಯಕ್ಕೆ ಮೂಡಲು ಕಾರಣ ಆಗಿರಬಹುದು. ಕಳೆದ ಮೂರೂವರೆ ವರ್ಷದಲ್ಲಿ ಈ ಭಾಗದ ಜನರ ಮನ ಗೆಲ್ಲುವಲ್ಲಿ ಸರ್ಕಾರ ನಿರೀಕ್ಷಿತ ಯಶಸ್ಸು ಗಳಿಸಿಲ್ಲ.
ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?
ಹಳೆ ಮೈಸೂರು ಭಾಗದ 7 ಜಿಲ್ಲೆಗಳಲ್ಲಿ ಶಾಸಕರ ಕಾರ್ಯ ತೃಪ್ತಿಕರ ಎನ್ನುತ್ತಿದ್ದಾರೆ ಮತದಾರರು. ಈ ಭಾಗದಲ್ಲಿ ಹಾಲಿ ಜಿಜೆಪಿಯ 05, ಕಾಂಗ್ರೆಸ್ನ 15, ಜೆಡಿಎಸ್ ನ 22 ಹಾಗೂ ಇಬ್ಬರು ಪಕ್ಷೇತರರಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರೇ ಹೆಚ್ಚಿರುವ ಈ ಭಾಗದಲ್ಲಿ ಅವರ ಕಾರ್ಯನಿರ್ವಹಣೆ ತೃಪ್ತಿ ಅನ್ನೋವ್ರ ಸಂಖ್ಯೆ ಶೇ.39.7 ರಷ್ಟಿರೋದು ಸಮಾಧಾನಕರ ಸಂಗತಿ.
ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?
ಈ ಸಮೀಕ್ಷೆಯಲ್ಲಿ ಮೊದಲ ಮೂರು ಸ್ಥಾನದಲ್ಲಿರುವವರು ಇದೇ ಭಾಗದ ನಾಯಕರು ಅನ್ನೋದು ಪ್ರಮುಖಾಂಶ. ಈ ಭಾಗದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ನಿಂದ ಈ ಭಾಗದಲ್ಲಿ ಇಬ್ಬರು ನಾಯಕರಿದ್ದು ಶೇ.49.1 ರಷ್ಟು ಪಾಲು ಹೊಂದಿದ್ದಾರೆ. ಇದು ಕಾಂಗ್ರೆಸ್ ಈ ಭಾಗದಲ್ಲಿ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯನ್ನ ತೋರಿಸುತ್ತಿದೆ. ಈ ಭಾಗದಲ್ಲಿ ಹಾಲಿ ಸಿಎಂ ಗೆ ಮತದಾರರು ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲ. ಬೊಮ್ಮಾಯಿ ಅವರಿಗಿಂತ ಬಿ.ವೈ.ವಿಜಯೇಂದ್ರ ಅವರಿಗೆ ಹೆಚ್ಚಿನ ಒಲವು ಕಾಣಿಸುತ್ತಿದೆ.
ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?
ಹಳೆ ಮೈಸೂರು ಭಾಗದಲ್ಲಿ ಮೋದಿ ಅಲೆ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಬಿಜೆಪಿಯ ನಿರೀಕ್ಷೆಯಂತೆ ಮೋದಿ ಪ್ರಭಾವ ಹೆಚ್ಚಾಗಿದ್ದು, ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ. ಭಾರತ್ ಜೋಡೋ ಈ ಭಾಗದಲ್ಲೇ ಆರಂಭಿಸಿದ ಕಾರಣ ರಾಹುಲ್ ಗಾಂಧಿಗೆ ಉತ್ತಮ ಸ್ಪಂದನೆ ಸಿಕ್ಕಂತೆ ಕಾಣುತ್ತಿದೆ. ದಲಿತ ಮತಗಳನ್ನ ಸೆಳೆಯುವಲ್ಲಿ ಖರ್ಗೆ ಸಹ ಪಾತ್ರ ವಹಿಸುವ ಸಾಧ್ಯತೆಯನ್ನ ಈ ರಿಪೋರ್ಟ್ ತೋರುತ್ತಿದೆ. ಎಎಪಿ ಗೆ ಜನ ಒಲವು ತೋರದಿದ್ರೂ, ಅರವಿಂದ್ ಕೇಜ್ರಿವಾಲ್ ಬಗ್ಗೆ ಒಂದಿಷ್ಟು ಒಲವು ತೋರುತ್ತಿರೋದು ಅಚ್ಚರಿ ಅಂಶ.
ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?
ಈಗಾಗಲೇ ಎರಡು ಬಾರಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಒಂದು ಬಾರಿ ಜೆಡಿಎಸ್- ಬಿಜೆಪಿ ಮೈತ್ರಿಕೂಟವೂ ಅಧಿಕಾರಕ್ಕೇರಿತ್ತು. ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಜನ ಕಾಂಗ್ರೆಸ್ – ಜೆಡಿಎಸ್ ಮೈತ್ರಿಗೆ ಹೆಚ್ಚಿನ ಒಲವು ತೋರಿದಂತೆ ಕಾಣ್ತಿದೆ. ಇದು ಆಯಾ ಪಕ್ಷಗಳಲ್ಲಿರುವ ನಾಯಕರ ಕಾರಣಕ್ಕೂ ಇರಬಹುದಾಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಈ ಮೂವರಲ್ಲಿ ಒಬ್ಬರು ಸಿಎಂ ಆಗ್ತಾರೆ ಅನ್ನೋ ಕಾರಣವೂ ಇರಬಹುದು. ಬಿಜೆಪಿ – ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಈ ಹಿಂದೆ ಆದ ಕಹಿ ಘಟನೆ ಸಹ ಈ ಮೈತ್ರಿಗೆ ಕಡಿಮೆ ಜನ ಒಲವು ತೋರಲು ಕಾರಣವಾಗಿರಬಹುದು.
ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?
ಬಿಜೆಪಿ ನೆಚ್ಚಿಕೊಂಡಿರುವ ಹಿಂದುತ್ವ ಅಜೆಂಡಾ ವನ್ನ ಜನ ಗುರುತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಸಹ ಬಿಜೆಪಿ ಪ್ಲಸ್ ಆಗಬಹುದು ಎನ್ನುತ್ತಿದೆ ಸಮೀಕ್ಷೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಅಭಿವೃದ್ಧಿಗಿಂತ ಹಿಂದುತ್ವ, ಮೋದಿ ಮುಖ್ಯ ಅನ್ನೋದು ಜನರ ಅಭಿಪ್ರಾಯ. ಬಿಜೆಪಿ ಮಾಡುತ್ತಿರುವ ಅಭಿವೃದ್ಧಿ ಜಪ ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದಂತೆ ಕಾಣುತ್ತಿಲ್ಲ. ಪ್ರತಿಪಕ್ಷಗಳ ಆರೋಪವಾದ ರಾಜ್ಯ ನಾಯಕತ್ವ ಕಡೆಗಣನೆ ವಿಚಾರಕ್ಕೆ ಜನ ಸಮ್ಮತಿ ಸೂಚಿಸಿದಂತೆ ಕಾಣುತ್ತಿದೆ.
ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?
ಭ್ರಷ್ಟಾಚಾರ ವಿಚಾರವನ್ನ ಮತದಾರರು ಅತ್ಯಂತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಶೇ. 40 ಪರ್ಸೆಂಟ್ ಕಮೀಷನ್ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾದಂತೆ ಕಾಣ್ತಿದೆ. ಭ್ರಷ್ಟಾಚಾರ ನಡೆದಿಲ್ಲ ಅನ್ನೋ ವಾದಕ್ಕೆ ಜನರು ನಿರೀಕ್ಷಿತ ಬೆಂಬಲ ತೋರಿದಂತಿಲ್ಲ.
ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?
ಹಳೆ ಮೈಸೂರು ಭಾಗದ ಇಬ್ಬರು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಅಭ್ಯರ್ಥಿ ರೇಸ್ನಲ್ಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎರಡು ಬಣಗಳಾಗಿ ಚುನಾವಣೆಗೆ ಎದುರಿಸಿದ್ರೆ ಪಕ್ಷಕ್ಕೆ ಡ್ಯಾಮೇಜ್ ಖಂಡಿತ ಎನ್ನುತ್ತಿದೆ ರಿಪೋರ್ಟ್. ಆಂತರಿಕ ಭಿನ್ನಾಭಿಪ್ರಾಯ ಪಕ್ಷಕ್ಕೆ ಡ್ಯಾಮೇಜ್ ಮಾಡೋದಿಲ್ಲ ಅನ್ನೋವ್ರು ಸಹ ಹೆಚ್ಚಾಗೇ ಕಾಣಿಸ್ತಿದ್ದಾರೆ. ಆದ್ರೆ ಆಗಬಹುದು, ಗೊತ್ತಿಲ್ಲ ಅನ್ನೋವ್ರ ಸಂಖ್ಯೆಯೂ ಮೂರನೇ ಒಂದು ಭಾಗದಷ್ಟಿರೋದು ಅಚ್ಚರಿಯ ಸಂಗತಿ. ಒಟ್ಟಾರೆ ಆಂತರಿಕ ಕಲಹ ಮತದಾರರ ಕುತೂಹಲದ ವಿಷಯವಾಗಿ ಕಂಡುಬರ್ತಿದೆ.
ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?
ಹಿಂದಿನ ಚುನಾವಣೆಗಳಿಗೆ ಹೋಲಿಸಿದ್ರೆ ಈ ಬಾರಿ ಉಚಿತ ಕೊಡುಗೆಗಳ ಮಹಾಪೂರವೇ ಹರಿದುಬರೋ ಸಾಧ್ಯತೆ. ಮತದಾರರ ಅಭಿಪ್ರಾಯದಲ್ಲಿ ಉಚಿತ ಕೊಡುಗೆಗಳು ಪರಿಣಾಮ ಬೀರೋದು ಖಂಡಿತ ಎನ್ನುವಂತೆ ಕಾಣುತ್ತಿದೆ. ಕೇವಲ ಮೂರನೇ ಒಂದರಷ್ಟು ಜನ ಮಾತ ಇದು ಯಾವುದೇ ಪರಿಣಾಮ ಬೀರಲ್ಲ ಎನ್ನುತ್ತಿದ್ದಾರೆ. ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳು, ಹಣ ಹಂಚಿಕೆ ಎಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎನ್ನುತ್ತಿದೆ ಈ ರಿಪೋರ್ಟ್
ಪ್ರಶ್ನೆ 13 – ಕುಟುಂಬ ರಾಜಕಾರಣ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ?
ವಲಯವಾರು ಕೇಳಲಾದ ಈ ಪ್ರಶ್ನೆಗೆ ಅತಿ ಹೆಚ್ಚು ಮತದಾರರು ಕುಟುಂಬ ರಾಜಕಾರಣ ಪರಿಣಾಮ ಬೀರೋದಿಲ್ಲ ಎನ್ನುತ್ತಿದ್ದಾರೆ. ಬಿಜೆಪಿ ಪದೇಪದೇ ಕುಟುಂಬ ರಾಜಕಾರಣ ವಿಚಾರ ಪ್ರಸ್ತಾಪಿಸಿದ್ರೂ, ಅದು ಈ ಭಾಗದ ಜನಕ್ಕೆ ಅಷ್ಟೊಂದು ಪ್ರಾಮುಖ್ಯತೆ ಎನ್ನಿಸಿದಂತೆ ಕಾಣ್ತಿಲ್ಲ. ಕ್ಷೇತ್ರದ ಅಭಿವೃದ್ಧಿ, ಸ್ಥಳೀಯ ಅಭ್ಯರ್ಥಿಯೇ ಮುಖ್ಯ ಹೊರತು ಕುಟುಂಬ ರಾಜಕಾರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿದಂತಿಲ್ಲ.