ರಾಯಚೂರು: ಸಿಂಧನೂರು ನಗರದಲ್ಲಿ ಪುನೀತ್ ಪುತ್ಥಳಿ (Puneet statue row) ಮೆರವಣಿಗೆ ವೇಳೆ ನಡೆದ ಗಲಾಟೆಯ ಬಣ್ಣ ಬಣ್ಣದ ಚಿತ್ರಗಳು ಬೆಳಕಿಗೆ ಬರುತ್ತಿವೆ. ಕೆಲವೊಂದು ಆಕ್ಷೇಪಗಳ ನಡುವೆಯೇ ಜೆಡಿಎಸ್ ಕಾರ್ಯಕರ್ತರು ಸಿಂಧನೂರು (Sindhanuru) ಪಟ್ಟಣದ ರಂಗಮಂದಿರದಲ್ಲಿ ಪುನೀತ್ ಪುತ್ಥಳಿ ಇಡಲು ನಿರ್ಧರಿಸಿದ್ದರು. ಅನುಮತಿ ಇಲ್ಲದೆ ನಡೆದ ಮೆರವಣಿಗೆಯನ್ನು ತಡೆಯಲು ಪೊಲೀಸರು ಮುಂದಾದಾಗ ಪಿಎಸ್‌ಐ ಮಣಿಕಂಠ ಮತ್ತು ಸಿಂಧನೂರಿನ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರ ಅವರ ಪುತ್ರ ಅಭಿಷೇಕ್ ನಾಡಗೌಡ ನಡುವೆ ಭಾರಿ ಜಗಳ ಆಗಿತ್ತು. ಆಗ ಅಭಿಷೇಕ್ ನಾಡಗೌಡರ ಅವರು ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದರು. ಇದು ಇಲ್ಲಿಗೇ ನಿಂತಿಲ್ಲ. ಅಭಿಷೇಕ್ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರೆ ಅಲ್ಲೂ ಆವಾಜ್ ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಮಂಗಳವಾರ ಏನಾಗಿತ್ತು?
ಸಿಂಧನೂರಿನ ರಂಗಮಂದಿರದಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಜೆಡಿಎಸ್ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದು ಅಭಿಷೇಕ್ ಗೌಡರ ಅವರ ಏಕಪಕ್ಷೀಯ ನಿರ್ಧಾರ ಎಂದು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದದ್ದರು. ಹಲವು ವರ್ಷಗಳಿಂದ ಈ ರಂಗಮಂದಿರ ಪಾಳು ಬಿದ್ದಿತ್ತು. ಈ ರಂಗಮಂದಿರಕ್ಕೆ ಸ್ಥಳೀಯ ಕಲಾವಿದರ ಹೆಸರಿಡಲು ಸ್ಥಳೀಯರು ಒತ್ತಾಯ ಮಾಡಿಕೊಂಡು ಬಂದಿದ್ದರು. ಆದರೆ, ಚುನಾವಣೆಯ ಸಂದರ್ಭದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಶಾಸಕರ ಪುತ್ರ ಮುಂದಾಗಿದ್ದರು.
ವಿರೋಧದ ನಡುವೆಯೂ ಅಭಿಷೇಕ್ ಅವರು ಪುನೀತ್ ಪುತ್ಥಳಿಯನ್ನು ಮೆರವಣಿಗೆ ಹೊರಡಿಸಲು ಅನುವಾಗಿದ್ದೇ ಗಲಾಟೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿತ್ತು. ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಹಾಕಲಾಗಿದ್ದರೂ ಟ್ರ್ಯಾಕ್ಟರ್ ಮೂಲಕ ಮೆರವಣಿಗೆಗೆ ಮುಂದಾಗಿತ್ತು ಜೆಡಿಎಸ್ ಪಡೆ. ಪೊಲೀಸರು ಅವರನ್ನು ತಡೆಯಲು ಮುಂದಾದಾಗ ಅಭಿಷೇಕ್ ಪಿಎಸ್‌ಐ ಮಣಿಕಂಠ ಅವರ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರು ಅಭಿಷೇಕ್ ಸೇರಿದಂತೆ 24 ಮಂದಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.
ಪೊಲೀಸ್ ಠಾಣೆಯಲ್ಲೂ ಶಾಸಕ ಪುತ್ರನ ಹೈಡ್ರಾಮಾ
ಈ ನಡುವೆ, ಅಭಿಷೇಕ್ ಗೌಡರ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಅಲ್ಲೂ ಆತ ಪಿಎಸ್‌ಐ ಮಣಿಕಂಠ ಅವರ ಮೇಲೆ ಆವಾಜ್ ಹಾಕಿದ್ದರ ವಿಡಿಯೊ ಹರಿದಾಡುತ್ತಿದೆ.
ಠಾಣೆಯಲ್ಲಿ ದರ್ಪದಿಂದ ಮಾತನಾಡಿದ ಅಭಿಷೇಕ್, “ನೀನು ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ಹೊರಗಡೆ ಬಾ. 5 ನಿಮಿಷ ಯೂನಿಫಾರ್ಮ್ ಬಿಚ್ಚಿ ಬಾʼʼ ಎಂದು ಆವಾಜ್ ಹಾಕಿದ್ದಾರೆ.
ʻʻನಾವು ರಾಜಕೀಯನೇ ಮಾಡಿದ್ದು, ಕೈಗೆ ಬಳೆ ತೊಟ್ಟಿಲ್ಲʼʼ ಎಂದು ಹಲ್ಲೆಗೊಳಗಾದ ಪಿಎಸ್‌ಐ ಮಣಿಕಂಠ ಅವರಿಗೆ ಅವಾಜ್ ಹಾಕಲಾಗಿದೆ. ಇಲ್ಲಿ ಕೂಡಾ ಪಿಎಸ್‌ಐ ಮೇಲೆ ಏರಿಹೋಗುವ ಚಿತ್ರಗಳನ್ನು ಕಾಣಬಹುದು.
ಒಟ್ಟು 24 ಜನರ ಮೇಲೆ ಎಫ್‌ಐಆರ್ ದಾಖಲು
ಸಿಂಧನೂರು ಗಲಾಟೆಗೆ ಸಂಬಂಧಿಸಿ ಪೊಲೀಸರು ಒಟ್ಟು 24 ಮಂದಿಯ ಮೇಲೆ ಕೇಸು ದಾಖಲಿಸಲಾಗಿದೆ. ಅಭಿಷೇಕ್ ನಾಡಗೌಡರ ಅವರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಐಪಿಸಿ ಸೆಕ್ಷನ್ 353 ಅಡಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿದ್ದ ಪಿಎಸ್ ಐ ಮಣಿಕಂಠ ನೀಡಿದ ದೂರಿನ ಅನ್ವಯ ಕೇಸ್ ಅಗಿದೆ.
ಇದನ್ನೂ ಓದಿ : Puneeth Rajkumar: ಸಿಂಧನೂರಲ್ಲಿ ಪುನೀತ್ ಪುತ್ಥಳಿ ಗಲಾಟೆ; ತಡೆಯಲು ಹೋದ ಪಿಎಸ್‌ಐಗೆ ಹೊಡೆದರೇ ಅಭಿಷೇಕ್ ನಾಡಗೌಡ?