ರಾಮನಗರ: ಜಾನುವಾರು ಸಾಗಾಟಗಾರ ಇದ್ರಿಷ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ (Murder Case) ಆರೋಪಿಗಳಾದ ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ವಿಚಾರಣೆಗಾಗಿ 7 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ಕನಕಪುರ ಜೆಎಂಎಫ್‌ಸಿ ನ್ಯಾಯಾಧೀಶರು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನಿರ್ದೇಶನ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ವಕೀಲರರಾದ ನಿಶಾಂತ್ ಕುಶಾಲಪ್ಪ, ಉಮಾಶಂಕರ್ ಅವರು ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ತಂಡದ ಪರ ವಕಾಲತ್ತು ವಹಿಸಿದ್ದರು. ಮಾರ್ಚ್ 31ರಂದು ರಾತ್ರಿ 11.30ರ ಹೊತ್ತಿಗೆ ಸಾತನೂರು ಪೊಲೀಸ್ ಠಾಣೆ ಎದುರು ನಡೆದ ಜಾನುವಾರು ಸಾಗಾಟಗಾರ ಇದ್ರಿಷ್ ಪಾಷಾ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ಸಾತನೂರು ಪೊಲೀಸರು ರಾಜಸ್ಥಾನದಲ್ಲಿ ಏ.5ರಂದು ಬಂಧಿಸಿದ್ದರು.
ಇದನ್ನೂ ಓದಿ | Theft Case: ಎಂಎಲ್‌ಸಿ ಬೋಜೇಗೌಡರ ಕಾರ್ ನಂಬರ್ ನಕಲಿ ಮಾಡಿದ್ದವರು ಅರೆಸ್ಟ್; ವಿಜಯಪುರದಲ್ಲಿ ಕಿಟಕಿ ಸರಳು ಕಟ್ ಮಾಡಿ ಮನೆ ಕಳ್ಳತನ
ಕೊಲೆ ಪ್ರಕರಣ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಮಧ್ಯದಲ್ಲಿ ಫೇಸ್‌ಬುಕ್ ಲೈವ್ ಮೂಲಕ ಪ್ರತ್ಯಕ್ಷನಾಗಿದ್ದ. ಇದರಿಂದ ಆತನ ಚಲನವಲನವನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ರಾಜಸ್ಥಾನದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ ಅಂಬಿಗಾರ್ ಮತ್ತು ರಾಯಚೂರಿನ ಸುರೇಶ್ ಕುಮಾರ್ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಮಾರ್ಚ್ 31ರಂದು ರಾತ್ರಿ 11.30ರ ಸುಮಾರಿಗೆ ಮಂಡ್ಯದಿಂದ ಕೇರಳ ಮತ್ತು ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದ ಸುಮಾರು 16 ಜಾನುವಾರುಗಳನ್ನು ಗೋರಕ್ಷಕರು ಸಾತನೂರಿನಲ್ಲಿ ವಶಕ್ಕೆ ಪಡೆದಿದ್ದರು. ವಾಹನವನ್ನು ತಡೆದಾಗ ಅದರಲ್ಲಿದ್ದ ಮೂವರ ಪೈಕಿ ಇಬ್ಬರು ಓಡಿ ಪರಾರಿಯಾಗಿದ್ದರು. ಮತ್ತೊಬ್ಬ ಕೂಡಲೇ ಪೊಲೀಸ್ ಠಾಣೆ ಸೇರಿಕೊಂಡಿದ್ದ. ಓಡಿಹೋದವರಲ್ಲಿ ಒಬ್ಬನಾದ ಇದ್ರಿಸ್ ಪಾಷಾನ ಶವ ಮರುದಿನ ಮುಂಜಾನೆ ಘಟನಾ ಸ್ಥಳದ ಸಮೀಪವೇ ಪತ್ತೆಯಾಗಿತ್ತು. ವಾಹನವನ್ನು ತಡೆದು ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ ಪುನೀತ್ ಕೆರೆಹಳ್ಳಿ ತಂಡವು ಇದ್ರಿಷ್ ಪಾಷಾನನ್ನು ಕೊಲೆ ಮಾಡಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ತಂಡವನ್ನು ಪೊಲೀಸರು ಬಂಧಿಸಿದ್ದರು.
ಇದ್ರಿಷ್ ಪಾಷಾ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ಸಾತನೂರು ಪೊಲೀಸರು ಮೂರು ಎಫ್‌ಐಆರ್ ದಾಖಲಿಸಿದ್ದರು. ಅಕ್ರಮ ಹಸು ಸಾಗಣೆ ಬಗ್ಗೆ ಪುನೀತ್ ಕೆರೆಹಳ್ಳಿ ಕೊಟ್ಟ ದೂರಿನ ಮೇಲೆ ಒಂದು ಎಫ್ಐಆರ್ ದಾಖಲಾಗಿದ್ದರೆ, ಕ್ಯಾಂಟರ್ ಡ್ರೈವರ್ ಹಾಗೂ ಮೃತ ವ್ಯಕ್ತಿ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಎರಡು ಎಫ್ಐಆರ್ ದಾಖಲಾಗಿದ್ದವು.
ಇದನ್ನೂ ಓದಿ | Road accident : ಹೆದ್ದಾರಿ ಬದಿಯಲ್ಲಿ ಹೆಣವಾಗಿ ಬಿದ್ದ ಆ ಯುವಕನ ಸಾವಿನ ಹಿಂದಿದೆಯಾ ಕೊಲೆಯ ಕರಿನೆರಳು?
ಪ್ರಕರಣದ ನಡೆದ ನಾಲ್ಕು ದಿನಗಳ ಬಳಿಕ ಮಾರ್ಚ್ 4ರಂದು ಫೇಸ್‌ಬುಕ್ ಲೈವ್‌ನಲ್ಲಿ ಕಾಣಿಸಿಕೊಂಡ ಪುನೀತ್ ಕೆರೆಹಳ್ಳಿ ಅನುಮಾನಾಸ್ಪದ ಸಾವಿಗೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದ. ನಾನು ಅಂದು ಸಾತನೂರು ಪೊಲೀಸ್ ಠಾಣೆಯ ಎದುರೇ ಕಾರ್ಯಾಚರಣೆ ಮಾಡಿದ್ದೆ. ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದೇನೆ. ಘಟನೆ ನಡೆದ ಬಳಿಕ ಕೂಡಲೇ ಠಾಣೆಗೆ ಹೋಗಿದ್ದೇನೆ. ಹೀಗಾಗಿ ಇದ್ರಿಷ್ ಪಾಷಾನ ಕೊಲೆ ಮಾಡಿರುವ ಆಪಾದನೆ ಸುಳ್ಳು ಎಂದಿದ್ದ. ಇಷ್ಟೆಲ್ಲ ಹೇಳಿದ ಪುನೀತ್ ಕೆರೆಹಳ್ಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿರುವುದು ಖಚಿತವಾಗಿತ್ತು. ಆದರೆ, ಪೊಲೀಸರು ಮಾತ್ರ ಆತ ಹಾಗೂ ಸಹಚರರನ್ನು ಬೆನ್ನಟ್ಟಿ ಹಿಡಿದು ರಾಜಸ್ಥಾನದಿಂದ ಮರಳಿ ಕರೆತಂದಿದ್ದರು.