ಬೆಂಗಳೂರು: ಮಾಂಸ ಸಾಗಾಟಕ್ಕೆ ಅಡಚಣೆ ಪ್ರಕರಣದಲ್ಲಿ ಬಂಧನವಾಗಿದ್ದ ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿಗೆ (Puneeth Kerehalli) ನಗರದ 5ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪರಿಶೀಲನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಅರೆಸ್ಟ್ ಅಗಿದ್ದ ಪುನೀತ್ ಕೆರೆಹಳ್ಳಿಗೆ ಜುಲೈ 27ರಂದು ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಇದರ ಬೆನ್ನಲ್ಲೇ ಷರತ್ತುಬದ್ಧ ಜಾಮೀನು ಮಂಜೂರು ಆಗಿದೆ.
ಪ್ರತಿ ತಿಂಗಳ ಮೊದಲ ಭಾನುವಾರ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ದೇಶಬಿಟ್ಟು ಹೋಗಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಮತ್ತೆ ಇಂತಹದ್ದೆ ಅಪರಾಧ ಕೃತ್ಯದಲ್ಲಿ ಭಾಗಿ ಆಗಬಾರದು ಎಂದು ಕೋರ್ಟ್ ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸವನ್ನು ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿ, ಮಾಂಸವನ್ನು ವಶಪಡಿಸಿಕೊಂಡಿದ್ದರು. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿದ್ದವು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ | Actor Darshan: ದರ್ಶನ್ ಸೆಲ್ ಭದ್ರತೆಗೆ 7 ಜನ ಸಿಬ್ಬಂದಿ ನಿಯೋಜನೆ! ಕಾರಣ ಇದು
ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಎಂಬುವವರಿಂದ ನಾಯಿ ಮಾಂಸ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಮತ್ತು ತಂಡ ದಾಳಿ ಮಾಡಿತ್ತು. ಆದರೆ, ಆಹಾರ ಸುರಕ್ಷತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಾಂಸದ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ಕಳುಹಿಸಿದ್ದರು. ಆದರೆ, ಅದು ಮೇಕೆ ಮಾಂಸ ಎಂದು ವರದಿಯಲ್ಲಿ ಬಂದಿರುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದರು.
ಇನ್‌ಸ್ಟಾಗ್ರಾಮ್ ಗೆಳೆಯನಿಗಾಗಿ ಗಂಡನನ್ನೇ ಕೊಲೆ ಮಾಡಿಸಿದ ಐನಾತಿ ಹೆಂಡತಿ
ತುಮಕೂರು: ಪರಪುರುಷನ ಮೋಹಕ್ಕೆ ಸಿಲುಕಿದಾಕೆ ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನೇ ಕೊಂದು (Murder case) ಮುಗಿಸಿದ್ದಾಳೆ. ಇನ್‌ಸ್ಟಾಗ್ರಾಮ್ ಪ್ರಿಯತಮನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ್ದಾಳೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ಘಟನೆ ನಡೆದಿದೆ.
ಪ್ರಕಾಶ್ (30) ಮೃತ ದುರ್ದೈವಿ. ಹರ್ಷಿತಾ (28) ಪತಿಯನ್ನು ಕೊಲೆ ಮಾಡಿಸಿದವಳು. ಕಲಬುರಗಿ ಜಿಲ್ಲೆಯ ಚಿಂಚುಲಿ ಮೂಲದ ಪ್ರಕಾಶ್‌ಗೆ ಇದೇ ಇನ್‌ಸ್ಟಾಗ್ರಾಮ್‌ನಿಂದ ಮೂರು ವರ್ಷದ ಹಿಂದೆ ಈ ಹರ್ಷಿತಾಳ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು.
ಮದುವೆಯಾದ್ಮೇಲೆ ಪ್ರಕಾಶ್ ಪತ್ನಿಯ ತವರಿನಲ್ಲೇ ವಾಸವಿದ್ದ. ಈ ದಂಪತಿಗೆ ಒಂದೂವರೆ ವರ್ಷದ ಮಗುವೂ ಇತ್ತು. ಆದರೆ ಇತ್ತೀಚೆಗೆ ಹರ್ಷಿತಾಳಿಗೆ ಇನ್‌ಸ್ಟಾಗ್ರಾಂನಲ್ಲಿ ಮಾಜಿ ಪ್ರಿಯತಮ ಗುಂಡ ಎಂಬಾತ ಸಂಪರ್ಕಕ್ಕೆ ಸಿಕ್ಕಿದ್ದ. ಗುಂಡನ ಮೋಹಕ್ಕೆ ಸಿಲುಕಿದ ಹರ್ಷಿತಾ, ಪ್ರಕಾಶ್‌ನನ್ನು ಕಡೆಗಣಿಸಿದ್ದಳು. ಹರ್ಷಿತಾ ಮತ್ತು ಗುಂಡ ಇಬ್ಬರಿಗೂ ಮರುಪ್ರೇಮಾಂಕುರವಾಗಿತ್ತು.
ಮಾತ್ರವಲ್ಲ, ಮಗು- ಗಂಡನನ್ನು ಬಿಟ್ಟು ಕಳೆದ 2 ತಿಂಗಳ ಹಿಂದೆ ಪ್ರಿಯತಮ ಗುಂಡನ ಜತೆಗೆ ಮನೆ ಬಿಟ್ಟು ಪರಾರಿಯಾಗಿದ್ದಳು. ಈ ವೇಳೆ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಹರ್ಷಿತಾ ಮನೆಗೆ ವಾಪಾಸ್ಸಾಗಿದ್ದಳಿ. ಆದರೆ ಒಳಗೊಳಗೆ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳು. ಪತಿಯ ಕೊಲೆಗಾಗಿ ಸಹೋದರ ಸೋಮಶೇಖರ್ ಹಾಗೂ ಪ್ರಿಯತಮ ಗುಂಡನಿಗೆ ಸುಪಾರಿ ನೀಡಿದ್ದಳು.
ಪ್ರಕಾಶ್‌ನನ್ನು ಏನೇನೋ ಹೇಳಿ ಪುಸಲಾಯಿಸಿ ಸೋಮಶೇಖರ್ ಕರೆಸಿಕೊಂಡಿದ್ದ. ಗುಂಡ ಮತ್ತು ಆತನ ಸ್ನೇಹಿತ ರಂಗಸ್ವಾಮಯ್ಯ, ಪ್ರಕಾಶ್ ಬರುತ್ತಿದ್ದಂತೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಡ್ರ್ಯಾಗರ್‌ನಿಂದ ಎದೆಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದರು. ಬಳಿಕ ಅಪಘಾತದ ರೀತಿಯಲ್ಲಿ ಬಿಂಬಿಸಲು ಹೊರಟಿದ್ದರು. ಆದರೆ ಎದೆಭಾಗಕ್ಕೆ ಚುಚ್ಚಿದ ಗಾಯದ ಗುರುತು ಪತ್ತೆ ಮಾಡಿದ ಪೊಲೀಸರು ಇದು ಅಪಘಾತವಲ್ಲ ಬದಲಿಗೆ ಕೊಲೆ ಎಂದು ಖಚಿತ ಪಡಿಸಿಕೊಂಡಿದ್ದರು.
ವಿಚಾರಣೆ ವೇಳೆ ಪತ್ನಿ ಹರ್ಷಿತಾಳ ಮಾಸ್ಟ್‌ರ್ ಪ್ಲ್ಯಾನ್‌ಗೆ ಪೊಲೀಸರೇ ದಂಗಾಗಿದ್ದಾರೆ. ಸದ್ಯ ಕೊರಟಗೆರೆ ಪೊಲೀಸರಿಂದ ಹರ್ಷಿತಾ, ಸೋಮಶೇಖರ್, ರಂಗಸ್ವಾಮಯ್ಯನನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಗುಂಡನಿಗಾಗಿ ಬಲೆ ಬೀಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.