ಬೆಂಗಳೂರು: ಯುವರತ್ನ, ಕನ್ನಡದ ಸಿನಿರಸಿಕರ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರು ಇಲ್ಲದ ಎರಡನೇ ಹುಟ್ಟುಹಬ್ಬ ಇಂದು ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ನೆನಪಿನ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆಗಿದ್ದು, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಹಿಂದಿನ ದಿನದಿಂದಲೇ ಹಾಜರಾಗಿದ್ದಾರೆ.
ʼʼಇದು ಅಪ್ಪು ಇಲ್ಲದೇ ನಡೆಯುತ್ತಿರೊ ಎರಡನೇ ಹುಟ್ಟುಹಬ್ಬ. ಅಪ್ಪು ಎರಡು ವರ್ಷದ ಮಗುನೇ. ಇವತ್ತು ಬಂದಿರೋ ಅಭಿಮಾನಿಗಳು ಅವ್ನು ಇನ್ನು ಬದುಕಿದ್ದಾನೇ ಅನ್ನೋದನ್ನ ತೋರಿಸುತ್ತೆ. ಜನ ಇನ್ನೂ ಅಪ್ಪುವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಜನ ಬೆಳೆಸಿ ಆಟ ಆಡಿಸ್ತಿದ್ದಾರೆ. ಜನರ ಪ್ರೀತಿ ವಿಶ್ವಾಸಕ್ಕೆ ಸಾಷ್ಟಾಂಗ ನಮಸ್ಕಾರ ಹಾಕೋದೊಂದು ಬಿಟ್ರೆ ಇನ್ನೇನೂ ಹೇಳಲಾರೆ. ಅಪ್ಪು ಆದರ್ಶಗಳನ್ನು ಜೊತೆಯಲ್ಲಿ ಮುನ್ನಡೆಸಿಕೊಂಡು ಸಾಗೋಣʼʼ ಎಂದು ಅಪ್ಪು ಬರ್ತಡೇ ಆಚರಣೆ ಬಳಿಕ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.
ಮಧ್ಯಾಹ್ನ ಕೇಕ್ ಕಟ್
ಕಂಠೀರವ ಸ್ಟುಡಿಯೋ ಸಮಾಧಿ ಬಳಿ ಹುಟ್ಟು ಹಬ್ಬ ಆಚರಣೆಗೆ ಸಕಲ ಸಿದ್ಧತೆ ನಡೆದಿದ್ದು ಸಮಾಧಿ ಸ್ಥಳವನ್ನು ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಕೇಕ್ ಕತ್ತರಿಸಿ ಪವರ್ ಸ್ಟಾರ್ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಆಚರಿಸಲಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹಾಗೂ ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಅಡ್ಡಿಯಾದ ಮಳೆ
ಈ ನಡುವೆ, ಗುರುವಾರ ರಾತ್ರಿ ಮಳೆ ಸುರಿದು ಪುನೀತ್ ಜನ್ಮದಿನಾಚರಣೆಗೆ ತುಸು ಅಡ್ಡಿ ಮಾಡಿದೆ. ಕಂಠೀರವ ಸ್ಟುಡಿಯೋ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಮಳೆಯ ನಡುವೆಯೂ ಅಪ್ಪು ಅಭಿಮಾನಿಗಳು ನೆನೆದುಕೊಂಡು ಬಂದರು. ಸಮಾಧಿ ಸ್ಥಳಕ್ಕೆ ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಗುರು ರಾಜ್‌ಕುಮಾರ್ ಹಾಗೂ ಪುನೀತ್ ಪುತ್ರಿ ದ್ರಿತಿ ಆಗಮಿಸಿ ನಮನ ಸಲ್ಲಿಸಿದರು. ʼಅಪ್ಪು ಮಾಲೆʼ ಧರಿಸಿ ಹೊಸಪೇಟೆಯಿಂದ ಅಭಿಮಾನಿಯೊಬ್ಬರು ಆಗಮಿಸಿದ್ದಾರೆ. ತಾವು ತಂದ ಇರುಮುಡಿಯನ್ನು ಅಪ್ಪು ಸಮಾಧಿಗೆ ಅರ್ಪಿಸಿದರು. ಇಂದು ಇನ್ನಷ್ಟು ಅಪ್ಪು ಅಭಿಮಾನಿಗಳು ಮಾಲೆ ಧರಿಸಿ ಆಗಮಿಸಲಿದ್ದಾರೆ.
ಇಂದು ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದ್ದು, ನಾಳೆ ಸಂಜೆ 6ರಿಂದ 10 ಗಂಟೆವರೆಗೂ ಸಂಗೀತ ಸಂಜೆ ನಡೆಯಲಿದೆ. ಅಪ್ಪು ಚಲನಚಿತ್ರಗಳ ಗೀತೆಗಳನ್ನು ಹಾಡಲಾಗುತ್ತದೆ. ಇಂದು ಬೆಳಿಗ್ಗೆ 10 ಘಂಟೆಗೆ ಕಂಠೀರವ ಸ್ಟುಡಿಯೋದ ಪುನೀತ್ ಪುಣ್ಯ ಭೂಮಿ ಬಳಿ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಲಿದ್ದು, ಕಂಠೀರವಕ್ಕೆ ಆಗಮಿಸುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ: Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್