ಬೆಂಗಳೂರು: ಮನೋಜ್ಞ ನಟನೆ, ಮನಸೂರೆಗೊಳ್ಳುವ ನೃತ್ಯ, ಅದ್ಭುತ ನಿರೂಪಣೆ ಹಾಗೂ ಸರಳ ವ್ಯಕ್ತಿತ್ವದಿಂದಲೇ ರಾಜ್ಯದ ಮನೆಮಾತಾಗಿದ್ದ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಭಾನುವಾರಕ್ಕೆ (ಅಕ್ಟೋಬರ್ 29) ಎರಡು ವರ್ಷ ತುಂಬಿದೆ. ಹಾಗಾಗಿ, ಕರ್ನಾಟಕದಾದ್ಯಂತ ಅಭಿಮಾನಿಗಳು ಅಪ್ಪು ನೆನಪಿನಲ್ಲಿ ಮಿಂದೇಳುತ್ತಿದ್ದಾರೆ. ಅಲ್ಲದೆ, ಸೇವಾ ಕಾರ್ಯಕ್ರಮಗಳ ಮೂಲಕವೂ ನೆಚ್ಚಿನ ನಟನ ಸ್ಮರಣೆಯಲ್ಲಿ ತೊಡಗಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ
ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ ಕುಟುಂಬಸ್ಥರು ಸಮಾಧಿ ನಿರ್ಮಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಬಿಳಿ ಮಾರ್ಬಲ್ಸ್ ನಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್‌ಕುಮಾರ್ ಅವರ ಸ್ಮಾರಕದ ಬಳಿಯೇ ಅಪ್ಪು ಸಮಾಧಿ ಇದ್ದು, ಬೆಳಗ್ಗೆಯಿಂದಲೇ ಅಭಿಮಾನಿಗಳು ದಂಡುದಂಡಾಗಿ ಆಗಮಿಸುತ್ತಿದ್ದಾರೆ. ಸಾಲು ಸಾಲಾಗಿ ಆಗಮಿಸಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಪೂಜೆ ಸಲ್ಲಿಸಲಿರುವ ಅಶ್ವಿನಿ
ಭಾನುವಾರ ಬೆಳಗ್ಗೆ 9 ಗಂಟೆಗೆ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ಬರಲಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಲಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿ ಹಲವು ಕುಟಂಬಸ್ಥರು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಕನಕಪುರದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಂದಲೇ ನೇರವಾಗಿ ಕಂಠೀರವ ಸ್ಟುಡಿಯೋಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ನೆನಪಿರಲಿ ಪ್ರೇಮ್ ಕುಟುಂಬಸ್ಥರು ಸೇರಿ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಕೂಡ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Puneeth Rajkumar: ಪುನೀತ್ ಸ್ಮಾರಕ ಪುನರಾಭಿವೃದ್ಧಿಗೆ ಕ್ರಮ: ಸಿಎಂ ಸಿದ್ದರಾಮಯ್ಯ
ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಶಿಬಿರ ಆಯೋಜನೆ ಸೇರಿ ಹಲವು ಸೇವಾ ಕಾರ್ಯಕ್ರಮಗಳ ಮೂಲಕ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಗಲ್ಲಿ ಗಲ್ಲಿಗಳಲ್ಲಿ ಅಪ್ಪು ಪುಣ್ಯಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪುನೀತ್ ರಾಜ್‌ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು.