ಬೆಂಗಳೂರು: ಕನ್ನಡ ಚಿತ್ರರಂಗದ ಸರಳ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಜೀವನ ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುನೀತ್ ಅವರ ಜೀವನ ಸಾಧನೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂಬ ಬಗ್ಗೆ ಅವರ ಅಭಿಮಾನಿಯಾಗಿ ನಾನು ಹೇಳುತ್ತೇನೆ. ಆದರೆ, ಇದನ್ನು ಪಠ್ಯದಲ್ಲಿ ಸೇರಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಠ್ಯಪುಸ್ತಕಕ್ಕೆ ಕೆಲವರ ಜೀವನ ಸಾಧನೆಯನ್ನು ಸೇರಿಸಬೇಕು ಎಂದು ಹೊರಟಾಗ ನೂರಾರು ವಿಘ್ನಗಳು ಬರುತ್ತವೆ. ಆದರೆ, ಪುನೀತ್ ರಾಜಕುಮಾರ್ ಅವರಂಥವರಿಗೆ ಆ ರೀತಿ ಯಾವುದೇ ಅಡ್ಡಿಗಳು ಬರುವುದಿಲ್ಲ. ಹೀಗಾಗಿ ಅವರ ಜೀವನ ಸಾಧನೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂಬುದು ನನ್ನ ಅಭಿಪ್ರಾಯವೂ ಹೌದು ಎಂದು ಆರ್. ಅಶೋಕ್ ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ತೀರ್ಮಾನ
ಪುನೀತ್ ಜೀವನ ಸಾಧನೆಯನ್ನು ಪಠ್ಯದಲ್ಲಿ ಸೇರಿಸುವ ವಿಚಾರವಾಗಿ ಈ ವರ್ಷ ಏನನ್ನೂ ಮಾಡಲು ಆಗುವುದಿಲ್ಲ. ಕಾರಣ ಈಗಾಗಲೇ ಮಕ್ಕಳ ಕೈಗೆ ಪಠ್ಯಪುಸ್ತಕಗಳು ಸೇರಿಯಾಗಿವೆ. ಆದರೆ, ಮುಂದಿನ ವರ್ಷ ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಿ ಸೂಕ್ತ ನಿರ್ಣಯ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ | Puneeth Rajkumar | ನೆನಪಿನ ಸಾಗರದಲ್ಲಿ ಅಪ್ಪು ಸದಾ ಜೀವಂತ: ಅಶ್ವಿನಿ ಪುನೀತ್ ರಾಜಕುಮಾರ್ ಭಾವುಕ ಪೋಸ್ಟ್!
ಪಠ್ಯಪುಸ್ತಕಕ್ಕೆ ಸೇರಿಸಲು ಮನವಿ
ಪುನೀತ್ ರಾಜಕುಮಾರ್ ಅವರ ಸಾಧನೆಯನ್ನು ಪಠ್ಯದಲ್ಲಿ ಸೇರಿಸಬೇಕು. ಮಕ್ಕಳಿಗೆ ಅವರ ಸಾಧನೆ ಬಗ್ಗೆ ತಿಳಿಸಬೇಕು ಎಂದು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುಡುಕುತೊರೆ ಗ್ರಾಮದ ಪುನೀತ್ ರಾಜಕುಮಾರ್ ಅಭಿಮಾನಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ಆರ್.ಟಿ. ನಗರದ ಸಿಎಂ ನಿವಾಸಕ್ಕೆ ಶನಿವಾರ (ಅ. ೨೯) ಭೇಟಿ ನೀಡಿದ ಪುನೀತ್ ಅಭಿಮಾನಿಗಳು, ಈಗಾಗಲೇ 6ನೇ ತರಗತಿ ಪಠ್ಯದಲ್ಲಿ ಡಾ. ರಾಜಕುಮಾರ್ ಜೀವನ ಸಾಧನೆಯನ್ನು ಸೇರಿಸಲಾಗಿದೆ. ಅದೆ ರೀತಿ ನಟ ಪುನೀತ್ ಅವರ ಜೀವನ ಸಾಧನೆಯನ್ನೂ ಪಠ್ಯದ ರೂಪದಲ್ಲಿ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದ ಇವರು, ಸಿದ್ದರಾಮಯ್ಯ ಅವರಿಂದ ಶಿಫಾರಸು ಪತ್ರವನ್ನೂ ತಂದಿದ್ದಾರೆ. ಈ ವೇಳೆ ಸಿಎಂಗೆ ಸಿದ್ದರಾಮಯ್ಯ ಅವರ ಶಿಫಾರಸು ಪತ್ರ ಹಾಗೂ ಇವರು ತಂದಿರುವ ಮನವಿ ಪತ್ರವನ್ನು ನೀಡಿದರು.
ಇದನ್ನೂ ಓದಿ | Karnataka Ratna | ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಜನಿಕಾಂತ್, ಜ್ಯೂ. ಎನ್‌ಟಿಆರ್ ಆಗಮನ