ಬೆಂಗಳೂರು: ಅಪ್ಪು ಈಗ ಎರಡು ವರ್ಷದ ಮಗು. ಜನ ಅಪ್ಪುವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಬೆಳೆಸಿ ಆಟ ಆಡಿಸ್ತಿದ್ದಾರೆ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಹೇಳಿದರು. ಇಂದು ಪುನೀತ್ ರಾಜ್‌ಕುಮಾರ್ ಜನ್ಮದಿನದ ಹಿನ್ನೆಲೆಯಲ್ಲಿ ಅಪಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮಿಸಿದ ಬಳಿಕ ಅವರು ಮಾತನಾಡಿದರು.
ಇದು ಅಪ್ಪು ಇಲ್ಲದೇ ನಡೆಯುತ್ತಿರುವ ಎರಡನೇ ಹುಟ್ಟುಹಬ್ಬ. ಅಪ್ಪು ಎರಡು ವರ್ಷದ ಮಗುವೇ. ಇವತ್ತು ಬಂದಿರುವ ಅಭಿಮಾನಿಗಳು ಅವನು ಇನ್ನೂ ಬದುಕಿದ್ದಾನೆ ಅನ್ನೋದನ್ನು ತೋರಿಸಿದ್ದಾರೆ. ಜನ ಇನ್ನೂ ಅಪ್ಪುವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಜನ ಬೆಳೆಸಿ ಆಟ ಆಡಿಸ್ತಿದ್ದಾರೆ. ಜನರ ಪ್ರೀತಿ ವಿಶ್ವಾಸಕ್ಕೆ ಸಾಷ್ಟಾಂಗ ನಮಸ್ಕಾರ ಹಾಕೋದೊಂದು ಬಿಟ್ರೆ ಇನ್ನೇನೂ ಹೇಳಲಾರೆ. ಅಪ್ಪು ಆದರ್ಶಗಳನ್ನು ಜೊತೆಯಲ್ಲಿ ಮುನ್ನಡೆಸಿಕೊಂಡು ಸಾಗೋಣ ಎಂದು ರಾಘವೇಂದ್ರ ರಾಜಕುಮಾರ್ ನುಡಿದರು.
ಗುರುವಾರ ಮಧ್ಯರಾತ್ರಿ ಕಂಠೀರವ ಸ್ಟೇಡಿಯಂನಲ್ಲಿರುವ ಸಮಾಧಿ ಸ್ಥಳಕ್ಕೆ ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಗುರು ರಾಜ್‌ಕುಮಾರ್ ಹಾಗೂ ಪುನೀತ್ ಪುತ್ರಿ ದ್ರಿತಿ ಆಗಮಿಸಿ ನಮನ ಸಲ್ಲಿಸಿದರು. ಮಧ್ಯೆ ಮಳೆ ತುಸು ಅಡಚಣೆ ಉಂಟುಮಾಡಿತಾದರೂ ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಲ್ಲದೆ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸ್ಟುಡಿಯೋ ಬಳಿ ಇಂದು ಪುನೀತ್ ಹುಟ್ಟು ಹಬ್ಬ ಆಚರಣೆಗೆ ಸಕಲ ಸಿದ್ಧತೆ ನಡೆದಿದ್ದು ಸಮಾಧಿ ಸ್ಥಳವನ್ನು ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಕೇಕ್ ಕತ್ತರಿಸಿ ಪವರ್ ಸ್ಟಾರ್ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಆಚರಿಸಲಿದ್ದಾರೆ.
ಇದನ್ನೂ ಓದಿ: Puneeth Rajkumar: ಇಂದು ಯುವರತ್ನ ಅಪ್ಪು ಜನ್ಮದಿನ, ಕಂಠೀರವ ಸ್ಟೇಡಿಯಂನಲ್ಲಿ ಭಾವುಕ ನಮನಕ್ಕೆ ಸಜ್ಜು