| ನಾರಾಯಣ ಯಾಜಿ, ಖ್ಯಾತ ಲೇಖಕರು, ಅಂಕಣಕಾರರು
ಕರಾವಳಿಯವರಾದ ನಮಗೆ ಸಿನಿಮಾ ಎನ್ನುವುದು ಬದುಕಿನಲ್ಲಿ ಅಷ್ಟೇನೂ ಮುಖ್ಯ ಅಂತ ಅನಿಸ್ತಿರಲಿಲ್ಲ. ನಾವೆಲ್ಲರೂ ಯಕ್ಷಗಾನಕ್ಕೆ ಆತುಕೊಂಡವರು. ಬೆಳತನಕ ಯಕ್ಷಗಾನವನ್ನು ನೋದುವ ಸಲುವಾಗಿ ಆಟ ಪ್ರಾರಂಭವಾಗುವಾಗ ನೆಲದ ಮೇಲೆ ಕುಳಿತು ನಂತರ ಮಧ್ಯರಾತ್ರಿ ಆಗುತ್ತಿದ್ದಂತೆ ಪುಸಕ್ಕನೆಂದು ಗೇಟ್ ಕೀಪರನ ಕಣ್ಣು ತಪ್ಪಿಸಿ ಆರಾಂ ಖುರ್ಚಿಯ ಮೇಲೆ ಕುಳಿತು ರಾಕ್ಷಸ ವೇಷವನ್ನೋ, ಶಂಭುಹೆಗಡೆಯವರ ಕರ್ಣನನ್ನೋ ನೋಡುತ್ತಾ ಮೈಮರೆಯುತ್ತಿದ್ದೆವು. ಮತ್ತೊಂದು ಕಾರಣವೆಂದರೆ ತಾಲೂಕು ಕೇಂದ್ರದಲ್ಲಿ ಮಾತ್ರ ಸಿನಿಮಾ ಟಾಕೀಸ್ ಇರುವುದು ಹಾಗೂ ಅಲ್ಲಿಗೆ ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆಯಿಲ್ಲದಿರುವುದು. ಆ ಕಾಲದಲ್ಲಿ ಮನರಂಜನೆಯೆಂದರೆ ಯಕ್ಷಗಾನ ಮಾತ್ರ. ಆದರೂ ಆಗ ಡಾ. ರಾಜಕುಮಾರ್ ಸಿನಿಮಾ ಅಂದರೆ ಮಾತ್ರ ಊರಿನ ಎಲ್ಲರನ್ನೂ ಬಡಿದೆಬ್ಬಿಸುವುದು ಸಾಮಾನ್ಯವಾಗಿತ್ತು. ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಹೊನ್ನಾವರಕ್ಕೆ ಹೋಗಿ ಟಿಕೆಟ್ ಪಡೆವ ಗಲಾಟೆಯಲ್ಲಿ ಸಿನಿಮಾ ನೋಡಿ ನಂತರ ರಾತ್ರಿಹೊತ್ತು ಅವರ ಅಭಿನಯವನ್ನು ವಿಮರ್ಶೆ ಮಾಡುತ್ತಾ ಊರಿಗೆ ಬರುವುದಿತ್ತು.
ಈಗ ನಮಗನಿಸುವುದು ರಾಜಕುಮಾರ್ ಅವರ ಸಿನಿಮಾ ಮಾತ್ರ ನಮ್ಮನ್ನು ಸೆಳೆಯುತ್ತಿರುವುದು ಏಕೆಂದರೆ ಅವರ ಅಭಿನಯದಲ್ಲಿನ ವೈವಿಧ್ಯತೆ. ಮೂಲತಃ ನಾಟಕರಂಗದಿಂದ ಬಂದ ಅವರ ಅಭಿನಯದಲ್ಲಿ ನಾಟಕೀಯತೆಯ ಅಂಶ ಪ್ರಧಾನವಾಗಿರುತ್ತಿತ್ತು. ಈಗೇನಾದರೂ ಪೂನಾದ Film Institute ನವರ ಹತ್ತಿರ ಹೀಗೆ ಅಭಿನಯಿಸಬಹುದೋ ಎಂದು ಕೇಳಿದರೆ ಖಂಡಿತವಾಗಿ ಒಪ್ಪಲಿಕ್ಕಿಲ್ಲ. ಡಾ. ರಾಜ್ ಅವರು ಅಮ್ಮಾS ಅಮ್ಮಾS .. ಎನುತ್ತ ತುಂಬುತೋಳಿನ ಅಂಗಿಯನ್ನು ಹಾಕಿ ಬಿಳಿ ಬಣ್ನದ ಪ್ಯಾಂಟಿನಲ್ಲಿ ಹೊರಗಿನಿಂದ ಬರುವ ದೃಶ್ಯವನ್ನು ಮರೆಯಲಾರೆವು. ಅವೆಲ್ಲವೂ ಆದರ್ಶಮಯ ಪಾತ್ರಗಳು. ಅವರು ಯಾವತ್ತಿಗೂ ದೃಶ್ಯ ಮಾಧ್ಯಮದಲ್ಲಿ ಕುಡಿಯುವ ಅಥವಾ ಸಿಗರೇಟ್ ಸೇದುವ ದೃಶ್ಯಕ್ಕೆ ವಿರೋಧವಾಗಿದ್ದರು. ಅವರ ಒಂದು ಚಿತ್ರದ ಹೆಸರು ನೆನಪಾಗುತ್ತಿಲ್ಲ. ಅದರಲ್ಲಿ ಖಳನಾಯಕನಾಗಿ ತೂಗುದೀಪ ಇದ್ದರು ಎನ್ನುವ ನೆನಪು. ಅವರ ಮನೆಯಲ್ಲಿ ನಡೆಯುತಿರುವ ಪಾರ್ಟಿಯಲ್ಲಿ ವೇಟರ್ ಗ್ಲಾಸಿನಲ್ಲಿ ವಿಸ್ಕಿ ತಂದು ಎಲ್ಲರಿಗೂ ಕೊಡುತ್ತಿರುವಂತೆ ರಾಜ ಅವರ ಹತ್ತಿರವೂ ಬರುತ್ತಾನೆ. ಆಗ ತಮ್ಮ ಬಲಗಡೆ ತಿರುಗಿ ಆ ಉದ್ದ ಮೂಗು ಮತ್ತು ಚೂಪು ಮೀಸೆಯ ಕೆಳಗಡೆ ತುಂಟ ನಗುವಿನೊಂದಿಗೆ ತಲೆಯಲ್ಲಾಡಿಸಿ ಮತ್ತೊಬ್ಬ ವೇಟರನನ್ನು ಕರೆದು ಅವನಲ್ಲಿರುವ ತಂಪುಪಾನೀಯದ ಬಾಟಳನ್ನು ತೆಗೆದುಕೊಳ್ಳುತ್ತಾರೆ. ಆಗ ಖಳನಾಯಕಾನ ಹೆಂದತಿ Good, Keep it up ಎನ್ನುವ ಸೀನ್ ಒಂದಿದೆ. ಇದು ಅವರು ಪರದೆಯಮೇಲೂ ಕಾಣಿಸುವ ಇಮೇಜ್ ಆಗಿತ್ತು. ಇಂತಹ ಅನೇಕ ಸಂಗತಿಗಳು ಅವರನ್ನು ನಟಸಾರ್ವಭೌಮರನ್ನಾಗಿಸಿತ್ತು. ಇಂತಹ ಹೊತ್ತಿನಲ್ಲಿ ಬಂದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಆರತಿಯ ಸಂಗಡ ಆರುತಿಂಗಳ ಮಗುವೊಂದು ಕಂಡು ಬಂದಾಗ ಅದು ರಾಜಕುಮಾರ ಅವರ ಮಗನಂತೆ ಎನ್ನುವುದು ದೊಡ್ಡ ಸುದ್ಧಿಯಾಗಿತ್ತು. ಮುದ್ದಾಗಿರುವ ಆತನನ್ನು ನೋಡಲು ನನ್ನ ಆಯಿಯ ಸಮೇತ ನಮ್ಮೂರಿನಲ್ಲಿ ಎಲ್ಲರೂ ಓಡೋಡಿ ಹೋಗಿ ಚಿತ್ರವನ್ನು ನೋಡಿ ಚಿತ್ರದ ಕಥೆಯನ್ನು ಅವರ ಮಗನ ವಿಷಯವನ್ನು ಬಣ್ಣಿಸ್ವ್ದುದನ್ನು ಕೇತ್ತಾ ಬೆಳೆದಿದ್ದೆವು. ಅದೇ ಕಾರಣಕ್ಕಾಗಿ ಈ ಚಿತ್ರವನ್ನೊಮ್ಮೆ ಕಾರಣಕ್ಕಾಗಿಯಾದರೂ ನೋಡಬೇಕೆಂದು ಹಂಬಲಿಸಿದುದರ ನೆನಪಾಗುತ್ತದೆ.
ಇದು ಡಾ. ರಾಜಕುಮಾರ್ ಅವರು ಕನ್ನಡಿಗರನ್ನು ಆವರಿಸಿರುವ ರೀತಿ. ಹೀಗೆ ಇರುವಾಗ ನಾವೂ ಬೆಳೆದು ದೊಡ್ದವರಾಗಿ ಹಾಯ್ಸ್ಕೂಲಿನ ಕೊನೆಯ ವರ್ಷದಲ್ಲಿಯೋ ಕಾಲೇಜಿನ ಮೊದಲ ವರ್ಷದಲ್ಲಿಯೋ ಇರಬೇಕು ಭಾಗ್ಯವಂತ ಸಿನೇಮಾ ಬಿಡುಗಡೆಯಾಯಿತು. ಇಡೀ ಕನ್ನಡನಾಡನ್ನು ಸೆರೆಹಿಡಿದ ಸಿನೇಮಾ ಅಂದರೆ ಇದು. “ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ” ಎನ್ನುವ ಈ ಒಂದು ಹಾಡಿನ ಕುರಿತು ಎಷ್ಟು ಹೇಳಿದರೂ ಕಡಿಮೆಯೇ. ಈ ಹಾಡಿನಲ್ಲಿ ಪುನೀತ ತನ್ನ ತಾತನನ್ನು ಮಲಗಿಸುವ ರೀತಿ ನಮ್ಮ ಮಕ್ಕಳು ಚಿಕ್ಕರವರಿರುವಾಗ ನಮ್ಮನ್ನು ತನ್ನ ಮಡಿಲಲ್ಲಿ ಮಲಗಿಸಿ ಆಟಾವಾಡುವ ಪರಿಯಲ್ಲಿದೆ. ಸರಿಯಾಗಿ ಹಲ್ಲು ಬಾರದ ಪುನೀತ ಅಶ್ವತ್ಥರನ್ನು ಮಲಗಿಸುವಾಗ ಥಟ್ಟಂತ ಹಾರಿ ಹಾಸಿಗೆಯಮೇಲೆ ಅಜ್ಜನ ಪಕ್ಕದಲ್ಲಿ ಕುಳಿತು ಅವನ ಎದೆಯಮೇಲೆ ಪುಟ್ಟ ಕೈ ಇಡುವರೀತಿ ಇದೆಯಲ್ಲಾ, ಅದು ನಿರ್ದೇಶಕರು ಹೇಳಿ ಬರುವಂತಹದ್ದಲ್ಲ. ತಕ್ಷಣವೇ ಹಾಸಿಗೆಯಿಂದ ಹಾರಿ ದೇವರ ಫೋಟೋಕ್ಕೆ ಅಜ್ಜನ ಕ್ಷೇಮಕ್ಕಾಗಿ ಹಾರೈಸುವ ಮತ್ತು ತಿರುಗಿ ಬಂದು ಅಶ್ವತ್ಥರನ್ನು ಲಾಲಿಸುವ ದೃಶ್ಯ ಇನ್ನೂ ನನ್ನ ಭಿತ್ತಿಯಲ್ಲಿ ಹಸಿರಾಗಿ ಇದೆ. ಅಶ್ವತ್ಥ ಅವರು ಅಸಾಮಾನ್ಯ ನಟ.
ಅವರೆದುರು ನಟನೆಯಲ್ಲಿ ಯಾರೂ ನಿಲ್ಲಲಾರರು. ಆ ಗಾಂಭೀರ್ಯ, ದೇಹದ ಭಾಷೆ, ನಾಟಕದ ಹಿನ್ನೆಲೆಯನ್ನು ಮೀರಿ ಸಿನೇಮಾದ ಕ್ಯಾಮರಾಕ್ಕೆ ಬದಲಾಯಿಸುವ ಅವರಂತೆ ನಟನಾ ಸಾಮರ್ಥ್ಯವುಳ್ಳ ನಟ ಭಾರತೀಯ ಇತಿಹಾಸದಲ್ಲಿ ಮತ್ತೊಬ್ಬ ಸಿಗಲಿಕ್ಕಿಲ್ಲ. ಅಂತಹ ಅಶ್ವತ್ಥ ಅವರು ಪುನೀತ ಅಭಿನಯವನ್ನು ನೋಡುತ್ತಾ ಅದನ್ನು ಅನುಭವಿಸಿ ಮೆಚ್ಚುಗೆಯನ್ನು ಸೂಚಿಸುವ ಕಣ್ಣುಗಳು ಈ ಪದ್ಯದ್ದುದ್ದಕ್ಕೂ ಇವೆ. ಅಭಿಜಾತ ಕಲಾವಿದನಾಗಿ ಹುಟ್ಟುವುದೆಂದೆರೆ ಇದೆ ಹೊರತೂ ಬೇರೇನೂ ಅಲ್ಲ. ಭಕ್ತ ಪ್ರಹ್ಲಾದ ಎನ್ನುವ ಸಿನೇಮಾವನ್ನು ಮಾಡುವ ಕನಸು ಡಾ. ರಾಜಕುಮಾರ ಅವರಿಗೆ ಯಾವತ್ತಿಗೂ ಇತ್ತಂತೆ. ಹಿರಣ್ಯ ಕಶಿಪುವನ್ನು ಅವರು ಅಭಿನಯಿಸಿದ ರೀತಿಗೆ ಅವರೇ ಉದಾಹರಣೆಯಾಗಿ ನಿಲ್ಲಬಲ್ಲರು. ಅದಕ್ಕೆ ಸರಿಯಾಗಿ ಸರಿತಾ ಕಯಾದುವಿನ ಪಾತ್ರ. ಲವಲವಿಕೆಯ ನಾರದನಾಗಿ ಅನಂತನಾಗ್ ಈ ಎಲ್ಲದರ ನಡುವೆ ಅವರೆಲ್ಲರನ್ನೂ ಮೀರಿಸಿದ ನಟನೆ ಬಾಲಕ ಪ್ರಹ್ಲಾದನದ್ದು. ಇಂತಹ ಪ್ರಹ್ಲಾದ ಸಿಕ್ಕಿದುದರಿಂದಲೇ ಡಾ. ರಾಜ್ ಈ ಚಿತ್ರವನ್ನು ಮಾಡಿರಬೇಕು. ಬಾಲನತ ಪುನೀಟ ಅಭಿನಯಿಸುತ್ತಿರಲಿಲ್ಲ. ಅದನ್ನು ಅನುಭವಿಸಿ ತನ್ನ ಎಚ್ಚರದಲ್ಲಿಯೇ ತಾನು ವಹಿಸಿದ ಪಾತ್ರವಾಗಿ ಬಿಡುತ್ತಿದ್ದರು.
ಹಾಡಿನ ಅಭಿನಯದ ಸಂಧರ್ಭ ಬಂದಾಗ ಹಾಲುಗಲ್ಲದ ಮುಗ್ಧಮನಸ್ಸಿನ ಅವರ ನಡತೆಯೆನ್ನುವುದು ನಾಟ್ಯಶಾಸ್ತ್ರದ ಯಾವ ಪ್ರಮೇಯಕ್ಕೂ ಸಿಗುವಂತಹದಲ್ಲ. ಪರಕಾಯ ಪ್ರವೇಶವಾಗಿರುತ್ತಿತ್ತು. ನಾಯಕನಟನಾಗಿ ಅವರ ಮಿಲನ ಸಿನೇಮಾ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮಹತ್ವದ ಸಿನೇಮಾವಾಗಿ ನಿಲ್ಲುತ್ತದೆ. ಅರಿವಿಲ್ಲದೇ ಮದುವೆಯಾಗಿ, ಆಕೆ ಮತ್ತೊಬ್ಬನನ್ನು ಪ್ರೀತಿಸುವ ಸಂಗತಿ ತಿಳಿದು ಬೇಸರಿಸದೇ ಆಕೆಯ ಹಿತವನ್ನು ಬಯಸುವ ತನ್ನೊಳಗೆ ಆಕೆಯ ಮೇಲೆ ಪ್ರೀತಿಯಿದ್ದೂ ಅದನ್ನು ತೋರ್ಪಡಿಸದ ನಟನಾ ಸಾಮರ್ಥ್ಯವನ್ನು ಅವರು ಇಲ್ಲಿ ತೋರಿದ್ದಾರೆ. ಪುನೀತ ಅವರ ಅಭಿನಯ ತನ್ನ ತಂದೆಯಂತೆ ಅಲ್ಲ; ಹೆಬ್ಬೆರಳನ್ನು ಮೇಲಕ್ಕೆತ್ತಿ ಕಿರುಬೆರಳನ್ನು ಹೊರಚಾಚಿ ಏನು ಎಂದು ಕೇಳುವ ಅವರ ಭಾವವೇ ಚಂದ. ಪಾಶ್ಚಾತ್ಯ ಪ್ರಭಾವದಿಂದ ಅಭಿನಯದಲ್ಲಿ ಸಹಜತೆ ಎಂದು ಮುಖಭಾವವನ್ನಷ್ಟೇ ಅಭಿವ್ಯಕ್ತಿಸುವ ಪರಂಪರೆಯನ್ನು ಹಿಂದೀ ಚಿತ್ರರಂಗದಲ್ಲಿ ಕಾಣಬಹುದು. ದಕ್ಷಿಣಭಾರತೀಯ ಚಿತ್ರಗಳಲ್ಲಿ ಮಲೆಯಾಳಂ ಭಾಷೆಯನ್ನುಳಿದು ಚಿತ್ರಗಳಲ್ಲಿ ನಟನೆಯಲ್ಲಿ ಓವರ ಆಕ್ಟಿಂಗ್ ಇದೆ. ಕರ್ನಾಟದ ನಾಟಕ ಕಂಪನಿಗಳಂತೆ. ಆದರೆ ಪುನೀತರ ಅಭಿನಯದಲ್ಲಿ ಯಾರ ಹೋಲಿಕೆಯೂ ಇಲ್ಲ. ತಾನೇ ಹುತ್ತದಿಂದ ಉದ್ಭವಗೊಂಡ ವಾಲ್ಮೀಕಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ.
ಈ ನಡುವೆ ಪುನೀತ ನಡುವೆ ಅಭಿನಯದಿಂದ ಕೆಲಕಾಲ ಹೊರ ಉಳಿದುಬಿಟ್ಟಿದ್ದರು. ಆಗ ಶಿವರಾಜ ಕುಮಾರ, ರಾಘವೇಂದ್ರ ರಾಜಕುಮಾರ ತಮ್ಮ ತಮ್ಮ ಸಹಜಾಭಿನಯದಿಂದ ಕನ್ನಡದ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಡಾ. ರಾಜ ಮತ್ತು ಕನ್ನಡನಾಡಿನ ನಡುವೆ ಒಂದು ಅಸ್ಮಿತತೆಯಿದೆ. ಅದನ್ನು ನಾವು ಗೋಕಾಕ ಚಳುವಳಿಯ ಕಾಲದಲ್ಲಿ ನೋಡಿದ್ದೇವೆ. ಕಾರ್ಯ ಆದಮೇಲೆ ಎಂತಹ ಒತ್ತಡವಿದ್ದರೂ ಅದನ್ನು ನಿರಾಕರಿಸಿ ರಾಜಕೀಯದೆಡೆ ತಲೆ ಹಾಕಿಯೂ ಮಲಗಲಿಲ್ಲ. ಈ ಗುಣ ಪುನೀತರಲ್ಲಿತ್ತು. ಇದನ್ನು ಗುರುತಿಸಿದ್ದು ಕರುನಾಡ ಸಹೃದಯ ಮನಸ್ಸುಗಳು. ಸಹಜವಾಗಿ ಇದು ಅವರನ್ನು ಎಲ್ಲ ಕಲಾವಿದರನ್ನು ಮೀರಿಸಿ ಡಾ. ರಾಜಕುಮಾರ ಅವರ ಜಾಗದಲ್ಲಿ ನೋಡಲು ಪ್ರಾರಂಭಿಸಿತೇ ಹೊರತು ಆ ಮಹಾನ್ ನಟನ ಮಗ ಎನ್ನುವ ಒಂದೇ ಕಾರಣದಿಂದ ಅಲ್ಲ.
ಈ ಗುಣವೇ ಅವರು ನಿರೂಪಕರಾಗಿ ನಡೆಸಿಕೊಟ್ಟ ಕನ್ನಡದ ಕೋಟ್ಯಧಿಪತಿಯ ಯಶಸ್ಸಿಗೆ ಕಾರಣ. ನಾನೊಮ್ಮೆ ನನ್ನ ಓರ್ವ ಸ್ನೇಹಿತರಿಗೆ ಈ ಕಾರ್ಯಕ್ರಮಕ್ಕೆ ಫೋನ್ ಫ್ರೆಂಡ್ ಆಗಿ ಭಾಗವಹಿದ್ದೆ. 1972ರಲ್ಲಿ ಇಳಾಬೆನ್ ಭಟ್ಟ್ ಅವರು ಸ್ಥಾಪಿಸಿದ ಸೇವಾ ಸಂಸ್ಥೆಯ ಕುರಿತಾದ ಪ್ರಶ್ನೆ ಅದಾಗಿತ್ತು. ತುಂಬಾ ಕ್ಲಿಷ್ಟಕರ ಪ್ರಶ್ನೆ. ನಾನು ತಕ್ಷಣವೇ ಉತ್ತರಿಸಿವುದನ್ನು ಗಮನಿಸಿ ನನ್ನೊಟ್ಟಿಗೆ ಮತ್ತೂ ಮಾತಾಡಿ ನನ್ನಿಂದಲೇ ಆ ವಿಷಯದ ವಿವರಣೆಯನ್ನು ಹೇಳಿಸಿರುವುದನ್ನು ಈಗ ನೆನಪಿಗೆ ಬರುತ್ತದೆ. ಅದನ್ನು ಟೀವಿ ಕಾರ್ಯಕ್ರಮದ ತಂತ್ರಗಾರಿಕೆ ಎನ್ನಬಹುದೇನೋ, ಆದರೆ ಆ ದಿವಸ ಕಾರ್ಯಕ್ರ್ಮ ಮುಗಿದ ತಕ್ಷಣ ಮತ್ತೆ ನನಗೆ ಫೋನ್ ಮಾಡಿ ಅವರ ವಯಕ್ತಿಕ ಅಭಿನಂದನೆಗಳನ್ನು ತಿಳಿಸಿ “ನೀವೇಕೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದಿಲ್ಲ” ಎಂದು ಕೇಳಿದ್ದರು. ನಾನು ಏನೋ ತೇಲಿಸಿ ಉತ್ತರ ಕೊಟ್ಟಿದ್ದೆ. ಆಗ ನನಗೆ ಡಾ. ರಾಜ ಕುಮಾರ ಕುಟುಂಬದವರು ಎತ್ತರದಲ್ಲಿದ್ದವರಾದರೂ, ಹತ್ತಿರದಲ್ಲಿಯೂ ಇರುತ್ತಾರೆ ಎನ್ನುವ ಅನುಭವವಾಯಿತು.
ಪುನೀತರನ್ನು ಕಳೆಕೊಂಡಾಗ ಎದೆಯೊಳಗೆ ಈ ನೋವು ತುಂಬಿಕೊಂಡಿತ್ತು. ವಿಸ್ತಾರ ನ್ಯೂಸ್ ನಲ್ಲಿ ಇದನ್ನು ಬರೆದು ಇದೀಗ ಆ ನೋವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೇನೆ.
ಇದನ್ನೂ ಓದಿ: Kabzaa Movie: ಕಬ್ಜ ಸೆಟ್‌ನಲ್ಲಿ ಪುನೀತ್ ರಾಜ್‌ಕುಮಾರ್: ಸಿನಿಮಾದಲ್ಲಿದ್ದಾರ ನಟ? ವಿಡಿಯೊ ವೈರಲ್!