ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಡಾ. ಪುನೀತ್ ರಾಜಕುಮಾರ್ ಅವರಿಗೆ ನವೆಂಬರ್ ೧ರಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಶೇಷ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ “ಫಲಪುಷ್ಪ ಪ್ರದರ್ಶನ”ವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನವನ್ನು ಪ್ರದಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಈ ಪ್ರಶಸ್ತಿ ಪ್ರದಾನ ಮಾಡುವ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಇದರಲ್ಲಿ ಡಾ. ರಾಜಕುಮಾರ್ ಅವರ ಕುಟುಂಬ ಸದಸ್ಯರೂ ಇರಲಿದ್ದಾರೆ. ಪುನೀತ್ ಅವರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ನಮಗೆ ಸಂಭ್ರಮದ ವಿಷಯವಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ
1922ರಿಂದ ಫಲಪುಷ್ಪ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷ ಅತಿ ಹೆಚ್ವು ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಅಂಗವಾಗಿ ಸಂಭ್ರಮ ತುಂಬಿದೆ. ಫಲಪುಷ್ಪ ಪ್ರದರ್ಶನಕ್ಕೆ ವಿಶೇಷ ಕಳೆ ಬಂದಿದೆ. ಮುಂದಿನ 10 ದಿನಗಳ ಕಾಲ ಪ್ರತಿ ದಿನ ಲಕ್ಷಾಂತರ ಜನ ಬರುವ ನಿರೀಕ್ಷೆ ಇದೆ. ಈ ಬಾರಿ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ವಿಶೇಷವಾದ ಪ್ರದರ್ಶನ ಏರ್ಪಟ್ಟಿದೆ. ಹಾಗಾಗಿ ಇನ್ನಷ್ಟು ಜನರನ್ನು ಪ್ರದರ್ಶನ ಆಕರ್ಷಿಸುವ ನಿರೀಕ್ಷೆ ಇದೆ. ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಆನಂದಿಸಬೇಕೆಂದು ಸಿಎಂ ತಿಳಿಸಿದರು.
ಇದನ್ನೂ ಓದಿ | Lalbagh | ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ನಟ ಶಿವರಾಜ್‌ಕುಮಾರ್ ಜತೆ ಶಕ್ತಿಧಾಮ ಮಕ್ಕಳ
ನಮ್ಮ ಜತೆ ಅಪ್ಪು ಸದಾ ಇರುತ್ತಾರೆ- ಶಿವರಾಜಕುಮಾರ್
ಫಲಪುಷ್ಪ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಪುನೀತ್ ರಾಜಕುಮಾರ್ ಸಹೋದರ, ನಟ ಶಿವರಾಜಕುಮಾರ್, ಅಪ್ಪು ಯಶಸ್ಸಿನ ಬಗ್ಗೆ ಹೇಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಅದು ಹೇಳಿಕೆಗಳಿಗೆ ನಿಲುಕದ್ದಾಗಿದೆ. ಈಗ ನನ್ನ ತಮ್ಮನ ಬಗ್ಗೆ ತುಂಬಾ ನೋವಿನಿಂದ ಮಾತನಾಡುತ್ತಿದ್ದೇನೆ. ಆದರೆ, ನಮ್ಮೊಂದಿಗೆ ಅಪ್ಪು ಸದಾ ಇರಲಿದ್ದಾರೆ. ಅವನು ಈ ಹೂವಿನಂತೆ ಸದಾ ಫ್ರೆಶ್. ಹೂವಿನ ರೂಪದಲ್ಲಿ ಅಪ್ಪು ಅತ್ಯುತ್ತಮವಾಗಿ ಮೂಡಿಬಂದಿದ್ದಾನೆ ಎಂದು ಅಭಿಪ್ರಾಯಪಟ್ಟರು.