Site icon Vistara News

Gandhada Gudi | ಡಾ. ರಾಜ್‌ ಗಂಧದ ಗುಡಿಗಿಂತಲೂ ಪುನೀತ್‌ ಸಿನಿಮಾ ಯಶಸ್ಸು ಕಾಣಲಿ: ಸೋದರತ್ತೆ ನಾಗಮ್ಮ ಹಾರೈಕೆ

nagamma puneeth

ಚಾಮರಾಜನಗರ: ಅಕ್ಟೋಬರ್‌ ೨೮ರಂದು ಜಗತ್ತಿನ ಬಹುತೇಕ ಕಡೆ ಬಿಡುಗಡೆಗೊಳ್ಳಲು ಸಿದ್ಧವಾಗಿರುವ “ಗಂಧದ ಗುಡಿ” (Gandhada Gudi) ಸಿನಿಮಾಗೆ ಅತ್ಯುತ್ತಮ ಪ್ರದರ್ಶನ ಕಾಣಲಿ, ಅವರಪ್ಪನ ಗಂಧದ ಗುಡಿಯಂತೆ ಅಪ್ಪುವಿನ ಗಂಧದ ಗುಡಿಯೂ ಯಶಸ್ವಿಯಾಗಲಿ ಎಂದು ಪುನೀತ್‌ ರಾಜಕುಮಾರ್‌ ಅವರ ಸೋದರತ್ತೆ ನಾಗಮ್ಮ ಹಾರೈಸಿದ್ದಾರೆ.

ಗಾಜನೂರಿನಲ್ಲಿರುವ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರಾಜಕುಮಾರ್‌ ಸಹೋದರಿ ನಾಗಮ್ಮ, ಗಂಧದಗುಡಿ ಸಿನಿಮಾಗೆ ಹೃದಯ ತುಂಬಿ ಹಾರೈಸಿದರು. ಗಂಧದಗುಡಿ ಸಿನಿಮಾವನ್ನು ಅವರಪ್ಪ ಮಾಡಿದ್ದ, ಅವರಣ್ಣ ಮಾಡಿದ್ದ, ಈಗ ಅಪ್ಪು ಮಾಡಿದ್ದಾನೆ. ಅವರಪ್ಪನ ಗಂಧದಗುಡಿಯಂತೆ ಅಪ್ಪುವಿನ ಗಂಧದಗುಡಿ ಯಶಸ್ವಿಯಾಗಲಿ ಎಂದು ಹೇಳಿದ ನಾಗಮ್ಮ, ದೇವರಿಗೆ ಕೈಮುಗಿದು ಹಾರೈಸಿದರು.

ನಾನು ಡಾ. ರಾಜಕುಮಾರ್‌ ಅವರು ಅಭಿನಯಿಸಿದ ಹಾಗೂ ಶಿವರಾಜಕುಮಾರ್‌ ಅಭಿನಯಿಸಿದ ಎರಡೂ ಗಂಧದ ಗುಡಿ ಚಿತ್ರವನ್ನು ನೋಡಿದ್ದೇನೆ. ಅಪ್ಪುವಿನ ಗಂಧದಗುಡಿ ಸಿನಿಮಾ ಕ್ಯಾಸೆಟ್‌ ಅನ್ನು ಇಲ್ಲಿಗೆ ಕಳುಹಿಸಿ ಕೊಡುವುದಾಗಿ ಹೇಳಿದ್ದಾರೆ. ಅದನ್ನೂ ನೋಡುತ್ತೇನೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ | Gandhada Gudi | ‘ಪುನೀತ್ ಪರ್ವ’ಕ್ಕೆ ಬಾಲಯ್ಯ, ಸೂರ್ಯ, ಕಮಲ್ ಹಾಸನ್ ಆಗಮನ!

ಅಪ್ಪು ಸಾವಿನ ವಿಷಯ ಇನ್ನೂ ಗೊತ್ತಿಲ್ಲ
ಪುನೀತ್‌ ಅವರನ್ನು ಚಿಕ್ಕಂದಿನಲ್ಲಿ ಪ್ರೀತಿಯಿಂದ ಸಾಕಿ ಸಲುಹಿದ ಸೋದರತ್ತೆ ನಾಗಮ್ಮ ಅವರಿಗೆ ಈವರೆಗೆ ಅಪ್ಪುವಿನ ನಿಧನದ ಬಗ್ಗೆ ಮಾಹಿತಿ ನೀಡಿಲ್ಲ. ಮೊದಲೇ ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಈ ಆಘಾತವನ್ನು ತೆಡೆದುಕೊಳ್ಳುವ ಶಕ್ತಿ ಇಲ್ಲವೆಂಬ ಕಾರಣಕ್ಕೆ ಕುಟುಂಬದವರು ನಾಗಮ್ಮ ಅವರಿಗೆ ವಿಷಯ ಗೊತ್ತಾಗದಂತೆ ನಿಗಾವಹಿಸಿದ್ದಾರೆ.

ಡಾ. ರಾಜ್‌ ಸಂಬಂಧಿ ಪ್ರೇಮಾ

ತುಂಬಾ ಖುಷಿ ಆಗ್ತಾ ಇದೆ ಪ್ರೇಮಾ
ಗಂಧದ ಗುಡಿ ಸಿನಿಮಾ ಬಿಡುಗಡೆ ಆಗುತ್ತಿರುವುದು ನಂಗೆ ತುಂಬಾ ಖುಷಿಯಾಗುತ್ತಿದೆ. ಇದು ಅವರ ಕಡೆಯ ಸಿನಿಮಾವಾಗಿದೆ. ಈ ಚಿತ್ರ ಶೂಟಿಂಗ್ ವೇಳೆ ಪುನೀತ್‌ ಗಾಜನೂರುನಲ್ಲಿಯೇ ಇದ್ದ. ಬೆಳಗ್ಗೆ 6 ಗಂಟೆಗೆ ಶೂಟಿಂಗ್‌ಗೆ ಹೋಗುತ್ತಿದ್ದ, ಮತ್ತೆ ಸಂಜೆ 6ಕ್ಕೆ ಬರುತ್ತಿದ್ದ. ನಮ್ಮ ಜತೆಯಲ್ಲೂ ತುಂಬಾ ಚೆನ್ನಾಗಿ ಇದ್ದ. ಮನೆಯಲ್ಲಿ, ಅಡುಗೆ ಮನೆಯಲ್ಲಿ ಎಲ್ಲ ಕಡೆ ಓಡಾಡುತ್ತಿದ್ದ. ಊಟ ಮಾಡಿ ನಮ್ಮ ಜತೆ ತಮಾಷೆ ಮಾಡುತ್ತಿದ್ದ. ಗಂಧದ ಗುಡಿ ಸಿನಿಮಾದ ವಿಶೇಷವೆಂದರೆ ಅಪ್ಪ ರಾಜಕುಮಾರ, ಅಣ್ಣ ಶಿವರಾಜಕುಮಾರ ಮತ್ತು ಅಪ್ಪು ಮೂವರೂ ನಟಿಸಿದ್ದಾರೆ. ಇದು ನಮಗೂ ಸಂತೋಷ. ನಾವು ಅಪ್ಪು ನಮ್ಮ ಜತೆಯಲ್ಲೇ ಇದ್ದಾನೆ ಎಂದೇ ತಿಳಿದುಕೊಂಡಿದ್ದೇವೆ. ಇವಾಗ ಶೂಟಿಂಗ್ ನಡೆಯುತ್ತಿದೆ. ಸ್ವಲ್ಪ ದಿನದ ಹಿಂದಷ್ಟೇ ಬಂದಿದ್ದ ಎಂದೇ ಅನ್ನಿಸುತ್ತಿದೆ. ಈ ಸಿನಿಮಾ ಚೆನ್ನಾಗಿ ಓಡಲಿ, ಶತಮಾನೋತ್ಸವ ಪೂರೈಸಲಿ ಎಂದು ಸಂಬಂಧಿ ಪ್ರೇಮಾ ಶುಭ ಕೋರಿದ್ದಾರೆ.

ಏನಿದು ಪುನೀತ ಪರ್ವ?
ಅಗಲಿದ ನಾಯಕ ನಟ, ಕನ್ನಡಿಗರ ಕಣ್ಮಣಿ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ʼಪುನೀತ ಪರ್ವʼ ಕಾರ್ಯಕ್ರಮವು ಅಕ್ಟೋಬರ್‌ ೨೧ರಂದು ಸಂಜೆ ೬ ಗಂಟೆಗೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಪುನೀತ್ ನಟನೆಯ ಕೊನೆಯ ಸಿನಿಮಾ ʼಗಂಧದ ಗುಡಿʼ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಪುನೀತ್‌ ಕುಟುಂಬ ಹಾಗೂ ಸಿನಿಮಾ ತಂಡ ನಿರ್ಧರಿಸಿದೆ. ಇವೆಂಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತನಾಮರು ಆಗಮಿಸಲಿದ್ದಾರೆ.

ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್​ನಿಂದಲೂ ನಟ – ನಟಿಯರು ಆಗಮಿಸುತ್ತಿದ್ದಾರೆ. ಟಾಲಿವುಡ್‌ನಿಂದ ಬಾಲಯ್ಯ, ಕಾಲಿವುಡ್​ ನಾಯಕ ಕಮಲ್ ಹಾಸನ್, ಸೂರ್ಯ, ಬಹುಭಾಷಾ ನಟ ಪ್ರಭುದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುನೀತ ಪರ್ವಕ್ಕೆ ಚಂದನವನದ ಖ್ಯಾತನಾಮರು ಸಹ ಸಾಕ್ಷಿಯಾಗಲಿದ್ದಾರೆ. ಕಿಚ್ಚ ಸುದೀಪ್, ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ರಮ್ಯಾ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ತಾರೆಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇರಲಿದೆ. ನಟ ಶಿವರಾಜ್​ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದು, ಅಕ್ಟೋಬರ್ 28ಕ್ಕೆ ಬಿಡುಗಡೆ ಆಗಲಿದೆ.

ಕಾರ್ಯಕ್ರಮಕ್ಕೆ ಬಂದೋಬಸ್ತ್‌
ಕಾರ್ಯಕ್ರಮಕ್ಕೆ ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. 3 ಡಿಸಿಪಿ, 14 ಎಸಿಪಿ, 60 ಇನ್ಸ್‌ಪೆಕ್ಟರ್‌, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 KSRP ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ತಿಳಿಸಲಾಗಿದೆ. ಪಾಸ್‌ ಇದ್ದವರಿಗೆ ಮಾತ್ರ ಅವಕಾಶ. ಪ್ರತ್ಯೇಕವಾದ ಪಾರ್ಕಿಂಗ್ ನೀಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಇದನ್ನೂ ಓದಿ | ಇಂದು ಪುನೀತ ಪರ್ವ ಕಾರ್ಯಕ್ರಮ, ಸ್ಟಾರ್‌ ನಟ ನಟಿಯರಿಂದ ಮೆಗಾ ಶೋ

Exit mobile version