ತುಮಕೂರು: ಇಲ್ಲಿನ ಚಿಕ್ಕನಾಯಕನ ಹಳ್ಳಿಯ ಅಂಗನವಾಡಿಯಲ್ಲಿ ಮೂರು ವರ್ಷದ ಬಾಲಕನೊಬ್ಬ ಚಡ್ಡಿಯಲ್ಲಿಯೇ ಪದೇಪದೆ ಮೂತ್ರ ಮಾಡಿಕೊಳ್ಳುತ್ತಿದ್ದ ಎಂಬ ಕಾರಣಕ್ಕೆ, ಆತನನ್ನು ಗದರಿಸಲು ಹೋಗಿ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ವಿಚಿತ್ರ ಶಿಕ್ಷೆ (punishment) ಕೊಟ್ಟಿದ್ದಾರೆ. ಗುಪ್ತಾಂಗಕ್ಕೇ ಬೆಂಕಿ ಹಚ್ಚಿದ್ದು, ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಬಾಲಕ ಚಡ್ಡಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದ್ದು, ಈ ಅಭ್ಯಾಸ ಬಿಡುವಂತೆ ಸಾಕಷ್ಟು ಬಾರಿ ಹೇಳಿದ್ದಾರೆ ಎನ್ನಲಾಗಿದೆ. ಆದರೂ ಅರಿಯದ ಬಾಲಕ ಪುನಃ ಪುನಃ ಚಡ್ಡಿಯಲ್ಲಿಯೇ ಮೂತ್ರ ವಿಸರ್ಜನೆಯನ್ನು ಮಾಡಿಕೊಂಡಿದ್ದರಿಂದ ಈ ಅಭ್ಯಾಸವನ್ನು ಬಿಡಿಸುವ ಆತುರದಲ್ಲಿ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗಕ್ಕೆ ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇದರಿಂದಾಗಿ ಬಾಲಕನ ಗುಪ್ತಾಂಗ ಮತ್ತು ತೊಡೆ ಮೇಲೆ ಸುಟ್ಟ ಗಾಯಗಳಾಗಿವೆ. ಈ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶಿಕ್ಷಕಿ, ಸಹಾಯಕಿ ಮತ್ತು ಬಾಲಕನ ಪೋಷಕರ ಬಳಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯ ನಡೆಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ | Court Verdict | ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ 65ರ ಮುದುಕನಿಗೆ ಜೀವಾವಧಿ ಶಿಕ್ಷೆ