Site icon Vistara News

Karnataka Election: ನೀತಿ ಸಂಹಿತೆ ಉಲ್ಲಂಘಿಸಿ ನಡೆಸುವ ರಸ್ತೆ ಕಾಮಗಾರಿಗಳಿಗೆ ತಡೆ ನೀಡಿ; ಜೆಡಿಎಸ್‌

Put a stop to road works carried out in violation of the code of conduct, Appeal to Election Commission

ಬೆಂಗಳೂರು: ನಗರದ ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ನೀತಿ ಸಂಹಿತೆ ಉಲ್ಲಂಘಿಸಿ ರಸ್ತೆ ಕಾಮಗಾರಿಗಳನ್ನು ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಚುನಾವಣೆ ಮುಗಿಯುವವರೆಗೆ ತಡೆ ಹಿಡಿಯಬೇಕು ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್‌ ರಾಜ್ಯ ವಕ್ತಾರ ಹಾಗೂ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಎಸ್‌.ಪಿ ಮನವಿ ಮಾಡಿದ್ದಾರೆ.

ಮಹಾಲಕ್ಷ್ಮಿಪುರಂ ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ಮಾರಪ್ಪನ ಪಾಳ್ಯ ವಾರ್ಡ್, ಮಹಾಲಕ್ಷ್ಮಿಪುರ ಹಾಗೂ ನಂದಿನಿ ಲೇಔಟ್ ವಾರ್ಡ್‌ಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ದಿನನಿತ್ಯವೂ ಮತದಾರರನ್ನು ಓಲೈಸಲು ಇಲ್ಲಿನ ವಸತಿ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡದಂತೆ ತಡೆಹಿಡಿಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ರಸ್ತೆ ಕಾಮಗಾರಿ ಒಂದು ಪಕ್ಷದ ಪರವಾದ ಓಲೈಕೆಯ ತಂತ್ರವಾಗಿದೆ. ಇದು ಸ್ಥಳೀಯ ಪಾಲಿಕೆ ಎಂಜಿನಿಯರ್‌ಗಳ ಗಮನಕ್ಕೆ ಬಂದಿದ್ದರೂ ಯಾವುದೇ ಕಾಮಗಾರಿ ಸ್ಥಗಿತ ಮಾಡದೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರೂ ಅದನ್ನು ಉಲ್ಲಂಘಿಸಿ, ಅವರೇ ಮುಂದೆ ನಿಂತು ಕಾಮಗಾರಿಗಳನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Karnataka Elections : ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಹುದು ಎಂದ ಕೋರ್ಟ್‌

ಇನ್ನು ಸ್ಥಳೀಯ ಅಧಿಕಾರಿಗಳು ಬಹಳ ವರ್ಷಗಳಿಂದ ಇದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಜಕಾರಣಿಗಳಿಗೆ ಪರಿಚಿತರಾಗಿರುತ್ತಾರೆ. ಆದ್ದರಿಂದ ಇವರು ಸ್ವಜನ ಪಕ್ಷಪಾತ ಮಾಡುವ ಅವಕಾಶ ಇರುವುದರಿಂದ ಮತದಾರರ ಮೇಲೆ ಪ್ರಭಾವ ಬೀರುವ ಸಂಭವ ಇರುತ್ತದೆ ಹಾಗೂ ಈ ರೀತಿಯ ಕಾಮಗಾರಿಗಳು ಸ್ಥಳೀಯ ಮತದಾರರಲ್ಲಿ ಪರಿಣಾಮ ಬೀರುವಂತದ್ದಾಗಿವೆ. ಆದ್ದರಿಂದ ಚುನಾವಣೆ ಮುಗಿಯುವವರೆಗೂ ಅಗತ್ಯ ತುರ್ತು ಕಾಮಗಾರಿಗಳು ಹೊರತಾಗಿ ಮತದಾರರನ್ನು ಓಲೈಸುವ ಇನ್ಯಾವುದೇ ಕಾಮಗಾರಿಗಳಿಗೆ ತಡೆ ನೀಡಬೇಕು ಎಂದು ಕೋರಿದ್ದಾರೆ.

Exit mobile version