Site icon Vistara News

Deputy Speaker: ವರ್ಷದ ಬಳಿಕ ಸಚಿವನಾಗುವೆ; ಈಗ ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿರುವೆನೆಂದ ಪುಟ್ಟರಂಗಶೆಟ್ಟಿ

Puttaranga Shetty accepted deputy speaker post

ಚಾಮರಾಜನಗರ: ಉಪ ಸಭಾಪತಿ (Deputy Speaker) ಆಗಲು ಶಾಸಕ ಪುಟ್ಟರಂಗ ಶೆಟ್ಟಿ (Puttaranga Shetty) ಕೊನೆಗೂ ಒಪ್ಪಿಗೆ ನೀಡಿದ್ದಾರೆ. ತಾವು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ವರಿಷ್ಠರು ಹೇಳಿದ್ದನ್ನು ಒಪ್ಪಲೇಬೇಕು. ಹಾಗಾಗಿ ನಾನು ಈಗ ಉಪ ಸಭಾಪತಿ ಹುದ್ದೆಯನ್ನು ಸ್ವೀಕರಿಸುತ್ತೇನೆ ಎಂದು ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ನಂತರ ಸಚಿವ ಸ್ಥಾನ ಕೊಡುವುದಾಗಿ ಕಾಂಗ್ರೆಸ್ ವರಿಷ್ಠರು ಮಾತು ಕೊಟ್ಟಿದ್ದಾರೆ. ಹಾಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BDA: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐಎಎಸ್‌ ಅಧಿಕಾರಿ ನೇಮಕ; ಆಕಾಂಕ್ಷಿ ಶಾಸಕರಿಗೆ ಕಾಂಗ್ರೆಸ್‌ ಬಿಗ್‌ ಶಾಕ್!

ಸಚಿವ ಸ್ಥಾನ ತಪ್ಪಿದ್ದರಿಂದ ಬೇಸರವಾದರೂ ಹೇಳಿಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಒಂದು ವರ್ಷ ಕೆಲಸ ಮಾಡು, ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಶಾಸಕ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

ಅಸಮಾಧಾನ ಹೊರಹಾಕಿದ್ದ ಪುಟ್ಟರಂಗ ಶೆಟ್ಟಿ

ಮೇ 27ರಂದು ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿ ಪಟ್ಟಿ ಪ್ರಕಟ ಮಾಡುತ್ತಿದ್ದಂತೆ ಶಾಸಕ ಪುಟ್ಟರಂಗ ಶೆಟ್ಟಿ ಕೆಂಡವಾಗಿದ್ದರು. “ಹೈಕಮಾಂಡ್ ಈಗ ನಿರ್ಧಾರ ಮಾಡಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೆ. ಕೊನೆಯ ಕ್ಷಣದವರೆಗೂ ನನ್ನ ಹೆಸರು ಇತ್ತು. ಯಾರ ಕೈವಾಡ ಇದೆಯೋ ಗೊತ್ತಿಲ್ಲ. ನನಗೆ ಡೆಪ್ಯುಟಿ ಸ್ಪೀಕರ್ ಸ್ಥಾನ ಇಷ್ಟವಿಲ್ಲ. ಏಕೆ? ಏನಾಯಿತು? ಅಂತ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿರ್ಧಾರ ಮಾಡುತ್ತೇನೆ. ನಿನಗೆ ಸ್ಥಾನ ಫೈನಲ್ ಆಗಿದೆ. ವಾಪಸ್‌ ಹೋಗು ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಯಾವ ಕಾರಣಕ್ಕೆ ನನಗೆ ಸ್ಥಾನ ತಪ್ಪಿತು ಅನ್ನೋದು ಗೊತ್ತಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದ್ದರು.

ಇದನ್ನೂ ಓದಿ: WhatsApp New Feature: ಶೀಘ್ರದಲ್ಲೇ ಸಿಗಲಿದೆ ವಾಟ್ಸ್ಆ್ಯಪ್ ಸ್ಕ್ರೀನ್‌ ಶೇರಿಂಗ್‌ ಸೌಲಭ್ಯ, ಏನೇನು ಉಪಯೋಗ?

ಅಲ್ಲದೆ, ಬಳಿಕ ಸ್ವಲ್ಪ ಅಂತರವನ್ನೂ ಕಾಯ್ದುಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರು ಪುಟ್ಟರಂಗ ಶೆಟ್ಟಿ ಅವರನ್ನು ಕರೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಒಂದು ವರ್ಷದವರೆಗೆ ಉಪ ಸಭಾಪತಿ ಹುದ್ದೆಯನ್ನು ಅತ್ಯುತ್ತಮವಾಗಿ ನಿಭಾಯಿಸಿ, ಬಳಿಕ ಸಚಿವ ಸ್ಥಾನವನ್ನು ನೀಡುತ್ತೇನೆ ಎಂದು ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಪುಟ್ಟರಂಗ ಶೆಟ್ಟಿ ಸಹ ಹೇಳಿಕೆ ನೀಡಿದ್ದಾರೆ.

Exit mobile version