ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆ (Anna Bhagya scheme) ಜಾರಿಗೆ ದಾರಿ ಕಾಣದೆ ಕೂತಿದೆ. ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ಪಡಿತರ ವ್ಯವಸ್ಥೆಯ ಮೂಲಕ ನೀಡುವ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ (Central Government) ಈಗಾಗಲೇ ಐದು ಕೆಜಿ ಅಕ್ಕಿ ಬರುತ್ತಿದೆ. ಆದರೆ, ಹೆಚ್ಚುವರಿ ಐದು ಕೆಜಿ ನೀಡುವ ಭರವಸೆಯನ್ನು ಈಡೇರಿಸಲು ಹೆಣಗಾಡಬೇಕಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲಾಗುವುದಿಲ್ಲ ಎಂದು ಕೈ ಎತ್ತಿರುವುದರಿಂದ ಬೇರೆ ಮೂಲಗಳಿಂದ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಭರವಸೆ ಇಟ್ಟಿದ್ದ ತೆಲಂಗಾಣದಲ್ಲೂ ಅಕ್ಕಿ ಇಲ್ಲ (Rice Politics) ಎಂದು ತಿಳಿಸಲಾಗಿದೆ. ಛತ್ತೀಸ್‌ಗಢವೊಂದೇ ಸದ್ಯಕ್ಕಿರುವ ಆಸರೆ. ಹೀಗಾಗಿ ಅನ್ನ ಭಾಗ್ಯದ ಅಕ್ಕಿಯ ಪ್ರಮಾಣವನ್ನೇ 7-8 ಕೆಜಿಗೆ ಇಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅನ್ನ ಭಾಗ್ಯದ ಅಕ್ಕಿ ವಿಚಾರಕ್ಕೆ ಸಂಬಂಧಿಸಿ ಎರಡು ಸುತ್ತಿನ ಸಭೆ ನಡೆಸಿದರು. ಬೆಳಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದರು.
ಸಭೆಯ ಬಳಿಕ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಹೊರರಾಜ್ಯಗಳಿಂದ ಅಕ್ಕಿ ಖರೀದಿ ವಿಚಾರ ಚರ್ಚೆಯಲ್ಲಿದೆ. ತೆಲಂಗಾಣದ ಸಿಎಂ ಜತೆ ನಾನೇ ಮಾತಾಡಿದೀನಿ. ಆದರೆ, ಅಲ್ಲಿಯೇ ಅಕ್ಕಿ ಸಿಕ್ತಾ ಇಲ್ವಂತೆ. ನಮ್ಮ ಸಿಎಸ್ ಅವರಿಗೂ ಮಾತಾಡೋಕ್ಕೆ ಹೇಳಿದೀನಿ. ಛತ್ತೀಸ್‌ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದಾರೆ. ಆದರೆ ದರ ಜಾಸ್ತಿ ಹೇಳ್ತಿದ್ದಾರೆ. ಛತ್ತೀಸ್‌ಗಢ ಅಕ್ಕಿಗೆ ಸ್ವಲ್ಪ ದರ ಜಾಸ್ತಿ. ಸಾಗಣೆ ವೆಚ್ಚವೂ ಜಾಸ್ತಿ. ಇದರ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದರು.
ಈ ವೇಳೆ ಮಾತನಾಡಿದ್ದ ಸಚಿವ ಕೆ.ಎಚ್. ಮುನಿಯಪ್ಪ ಅವರು, ʻʻಅಕ್ಕಿಯನ್ನ ಕೊಡಬೇಕು ಅಂತ ಸಿಎಂ, ಡಿಸಿಎಂ ನಿರ್ಧಾರ ಮಾಡಿದ್ದಾರೆ. ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಮಾಡಿದೆ. ನಮ್ಮದೇ ರೀತಿಯಲ್ಲಿ ಅಕ್ಕಿಯ ವ್ಯವಸ್ಥೆ ಮಾಡುತ್ತಿದ್ದೇವೆ. ಅಕ್ಕಿ ಕೊಡುವುದಂತೂ ನಿಶ್ಚಿತ ಎಂದರು.
ಉನ್ನತ ಅಧಿಕಾರಿಗಳ ಸಭೆ
ಈ ನಡುವೆ ಶನಿವಾರ ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಕೆ.ಎಚ್. ಮುನಿಯಪ್ಪ ಅವರು, ತೆಲಂಗಾಣ, ಛತ್ತೀಸ್‌ಗಢ ರಾಜ್ಯದಿಂದ ಅಕ್ಕಿ ಖರೀದಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಛತ್ತೀಸ್‌ಗಢದಿಂದ ಅಕ್ಕಿ ಖರೀದಿಸುವ ಬಗ್ಗೆ ಪತ್ರ ವ್ಯವಹಾರ ಮಾಡುವಂತೆ ಸಿಎಸ್ ಗೆ ಸೂಚನೆ ಕೊಟ್ಟಿದ್ದೇವೆ. ಛತ್ತೀಸ್ ಗಢ ಸರಕಾರ ಎಷ್ಟು ಕೊಡಬಹುದು ಎಂದು ನಿರ್ಣಯ ಮಾಡಬೇಕಾಗುತ್ತದೆ. ಕೇಂದ್ರದ ಸ್ವಾಮ್ಯದ NCCF, ಕೇಂದ್ರ ಭಂಢಾರದ ಜೊತೆಗೂ ಮಾತಾಡ್ತಿದ್ದೇವೆ. ಎರಡು ಮಾರ್ಗಗಳ ಮೂಲಕ ಅಕ್ಕಿ ಖರೀದಿ ಮಾಡುವ ಕೆಲಸ ಮಾಡ್ತಿದ್ದೇವೆʼʼ ಎಂದು ತಿಳಿಸಿದರು.
ʻʻನಾನು ಬೇರೆ ರಾಜ್ಯದ ಪ್ರವಾಸ ಕೈಗೊಳ್ಳುವ ಅಗತ್ಯತೆ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಛತ್ತೀಸ್‌ಗಢದಿಂದ ಅಕ್ಕಿ ಖರೀದಿಸುವ ಕೆಲಸ ಮಾಡಲಿದ್ದಾರೆ. ಅಕ್ಕಿಗೆ ಅಗತ್ಯ ಹಣಕಾಸನ್ನು ಸಿಎಂ ಮೀಸಲಿಟ್ಟಿದ್ದಾರೆ. ಓಪನ್ ಮಾರ್ಕೆಟ್ ನಲ್ಲಿ ಖರೀದಿ ಮಾಡೋಕೆ ಹೋಗಲ್ಲ. ಅಕ್ಕಿ ವಿತರಣೆ ದಿನಾಂಕವನ್ನು ಆದಷ್ಟು ಬೇಗ ತಿಳಿಸುತ್ತೇವೆ ಎಂದು ಹೇಳಿದರು.
ಈ ನಡುವೆ, ಒಂದು ವೇಳೆ ಹೊರ ರಾಜ್ಯಗಳಿಂದ ಸಿಗುವ ಅಕ್ಕಿಯ ಪ್ರಮಾಣ ಕಡಿಮೆಯಾದರೆ ಅಕ್ಕಿ ಪ್ರಮಾಣವನ್ನು 7 ಅಥವಾ 8 ಕೆಜಿಗೆ ಸೀಮಿತಗೊಳಿಸಿ, ಉಳಿದ ಎರಡು ಕೆಜಿ ಬೇರೆ ಧಾನ್ಯ ನೀಡುವ ಚಿಂತನೆಯೂ ಇರುವ ಸೂಚನೆಯನ್ನು ಸಚಿವ ಕೆ.ಎಚ್. ಮುನಿಯಪ್ಪ ನೀಡಿದ್ದಾರೆ.
ಇದನ್ನೂ ಓದಿ : Congress Politics : ವಿನಯ ಗುರೂಜಿ ಆಶ್ರಮದಲ್ಲಿ ಡಿಕೆಶಿ ಸಿಎಂ ಕೂಗು, ಸಿದ್ದರಾಮಯ್ಯ ಆಪ್ತರಿಂದಲೂ ಕಹಳೆ