ಯಾದಗಿರಿ: ತಾಲೂಕಿನ ಜಿನಕೇರ ಗ್ರಾಮದಲ್ಲಿ ಜಮೀನು ಸಾಗುವಳಿ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಸಾಗುವಳಿ ಮಾಡುವ ಹಾಗೂ ವಿರೋಧಿಸುವವರ ನಡುವೆ ಬಡಿದಾಟ ನಡೆದಿದ್ದು, ಕೈಯಲ್ಲಿ ಪೊರಕೆ ಹಾಗೂ ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಜಮೀನು ಸಾಗುವಳಿಗೆ ತಂದಿದ್ದ ಜೆಸಿಬಿ ತಡೆದು ಗಲಾಟೆ ಮಾಡಲಾಗಿದೆ. ಗ್ರಾಮದ ಸರ್ವೇ ನಂ 436ರ ಜಮೀನಿನ 11 ಎಕರೆ ವಿವಾದದಲ್ಲಿತ್ತು. ಈಗ ಈ ಜಮೀನಿನ ವಿಷಯಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಭೀಮರಾಯ ಸೇರಿ 8 ಜನ ಪಟ್ಟೆದಾರರ ಹೆಸರಿನಲ್ಲಿ ಈ ಜಮೀನು ಇದೆ. ಜಮೀನು ನಮಗೆ ಸೇರಿದ್ದು ಎಂದು ಪಾರ್ವತಿ, ದೊಡ್ಡ ಹಣಮಂತ ಎಂಬುವವರು ಕೋರ್ಟ್ ಮೊರೆ ಹೋಗಿದ್ದರು. ಆದರೆ, ಭೀಮರಾಯ ಸೇರಿ 8 ಜಂಟಿ ಪಟ್ಟೇದಾರರ ಪರವಾಗಿ ಯಾದಗಿರಿ ಕೋರ್ಟ್ ತೀರ್ಪು ನೀಡಿತ್ತು.
ಕೋರ್ಟ್ ತೀರ್ಪಿನ ನಂತರ ಪೊಲೀಸರ ಗಮನಕ್ಕೆ ತಂದು ಸಾಗುವಳಿ ಮಾಡಲು ಮುಂದಾಗಲಾಗುತ್ತಿದೆ ಎಂದು ಹೇಳಲಾಗಿದೆ. ಈ ಸಂಬಂಧ ಜೆಸಿಬಿ, ಕುಂಟೆ ಮೂಲಕ ಸಾಗುವಳಿ ಮಾಡಲು ಮುಂದಾಗಿದ್ದಾಗ ಪಾರ್ವತಿ, ದೊಡ್ಡ ಹಣಮಂತ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾತಿಗೆ ಮಾತು ಬೆಳೆದಿದೆ. ಕೊನೆಗೆ ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಗ್ರಾಮೀಣ ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.