ಬೆಂಗಳೂರು: ಎದುರಾಳಿ ಪಕ್ಷದ ನಾಯಕರನ್ನು ಕಟ್ಟಿಹಾಕಲು ಪ್ರಬಲ ಸ್ಪರ್ಧಿಗಳನ್ನು ಕಣಕ್ಕಿಳಿಸುವ ಸಂಪ್ರದಾಯವನ್ನು ಬಿಜೆಪಿ ಈ ಬಾರಿಯೂ ಮುಂದುವರಿಸಿದ್ದು, ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕುರಿತು ಸದಾಶಿವನಗರ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಚರ್ಚೆ ನಡೆಸಿದರು.
ಆರ್. ಅಶೋಕ್ ಅವರಿಗೆ ಕನಕಪುರದ ಜತೆಗೆ ಪದ್ಮನಾಭನಗರದಲ್ಲೂ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಪದ್ಮನಾಭನಗರಕ್ಕೆ ರಘುನಾಥ ರೆಡ್ಡಿ ಹೆಸರನ್ನು ಘೋಷಣೆ ಮಾಡಲಾಗಿದೆ. ಪದ್ಮನಾಭನಗರದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಂಪರ್ಕ ಮಾಡಿದ ಡಿ.ಕೆ. ಸಹೋದರರು, ಆರ್. ಆಶೋಕ್ ಅವರನ್ನು ಕಟ್ಟಿ ಹಾಕಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್ ಅವರು ರಾಜ್ಯ ಪ್ರವಾಸ ಮಾಡಬೇಕಿರುವ ಹಿನ್ನೆಲೆಯಲ್ಲಿ ಅದಕ್ಕೆ ತೊಂದರೆ ಆಗದಂತೆ ಕನಕಪುರದಲ್ಲಿ ವ್ಯವಸ್ಥೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆದಿದೆ. ಎಂದಿನಂತೆ ಈ ಬಾರಿಯೂ ಕನಕಪುರ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಸಂಸದ ಡಿ.ಕೆ. ಸುರೇಶ್ ವಹಿಸಿಕೊಂಡಿದ್ದಾರೆ.
ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜಕಾರಣ ಎಂದರೆ ಫುಟ್‌ಬಾಲ್ ಅಲ್ಲ ಚೆಸ್ ಎಂದು ನಾನು ತಿಳಿದಿದ್ದೇನೆ. ಅವರು ಚೆಸ್ ಆಡ್ತಿದಾರೆ ಆಡಲಿ. ನನಗೇನೂ ಹೋರಾಟ ಹೊಸದಲ್ಲ. ಇಡೀ ಜೀವನ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ಯಾರತ್ರೂ ಹೊಂದಾಣಿಕೆ ಮಾಡಿಕೊಳ್ಳೋ ಅವಶ್ಯಕತೆ ಇಲ್ಲ.
ಪದ್ಮನಾಭನಗರ ಕ್ಯಾಂಡಿಡೇಟ್ ಘೋಷಣೆ ಮಾಡಿದ್ದೇವೆ. ರಘುನಾಥ ನಾಯ್ಡು ನಮ್ಮ ಕ್ಯಾಂಡಿಡೇಟ್. ಅಭ್ಯರ್ಥಿ ಬದಲಾವಣೆ ಇಲ್ಲ. ಡಿ.ಕೆ. ಸುರೇಶ್ ಅವರನ್ನು ಅಲ್ಲಿ ಕಣಕ್ಕಿಳಿಸಬೇಕೆಂಬ ಒತ್ತಡ ಇದೆ, ಆದರೆ ಅಲ್ಲಿ ನಮ್ಮ ಕಾರ್ಯಕರ್ತನಿಗೆ ನೀಡಿದ್ದೇವೆ.
ಸದ್ಯಕ್ಕೆ ರಘುನಾಥ ನಾಯ್ಡು ನಮ್ಮ ಕ್ಯಾಂಡಿಡೇಟ್. ಅಲ್ಲಿ ಲೆಕ್ಕಾಚಾರ ಕೆಲಸ ಮಾಡುತ್ತದೆ. ಹಿಂದೆ ಒಕ್ಕಲಿಗ ಅಭ್ಯರ್ಥಿ ಹಾಕಿದ್ದೆವು ಅಲ್ಲಿ ಸೋತೆವು. ಪದ್ಮನಾಭ ನಗರದಲ್ಲಿ ನಾಯ್ಡುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಅಶೋಕ್ ಪದ್ಮನಾಭ ನಗರದಲ್ಲೂ ಸೋಲ್ತಾರೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಮಾತನಾಡಿ, ವಿನಯ್ ಕುಲಕರ್ಣಿ ಹೈಲಿ ಪಾಸಿಬಲ್ ಕ್ಯಾಂಡಿಡೇಟ್. ಆದ್ರೆ ನಮಗಿಂತ ಜಾಸ್ತಿ ನಿಮ್ಮ ಇದೆ. ಅದು ಧಾರವಾಡ ಹೊರಿ, ಎಮ್ಮೆ, ಹಸು. ಧಾರವಾಡದಲ್ಲಿ ಅವರಿಗೆ ಈಗಾಗಲೇ ಟಿಕೆಟ್ ಕೊಟ್ಟಿದ್ದೇವೆ. ಪ್ರಬಲ ಅಭ್ಯರ್ಥಿ ಬಗ್ಗೆ ಚಿಂತನೆ ಮಾಡ್ತೇವೆ ಎಂದರು.