Site icon Vistara News

R. Ashok: ಮಂಡ್ಯ ಜನರಿಗೆ ಸಾಷ್ಟಾಂಗ ನಮಸ್ಕಾರ: ಅಡ್ಜಸ್ಟ್‌ಮೆಂಟ್‌ ಆರೋಪಕ್ಕೆ ಉಸ್ತುವಾರಿಯಿಂದ ಹಿಂದೆ ಸರಿದ ಆರ್.‌ ಅಶೋಕ್‌

R Ashok writes to chief minister to relieve as mandya incharge minister

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಮಂಡ್ಯ ಜಿಲ್ಲಾ ರಾಜಕಾರಣವನ್ನು ನಿರ್ವಹಣೆ ಮಾಡಲು ನೇಮಕ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕಂದಾಯ ಸಚಿವ ಆರ್‌. ಅಶೋಕ್‌ ಪತ್ರ ಬರೆದಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅಂಗೀಕರಿಸಿದ್ದಾರೆ.

ಕೇವಲ 15 ದಿನದ ಹಿಂದೆ ಅಂದರೆ ಜನವರಿ 26ರಂದು ಜಿಲ್ಲಾ ಕೇಂದ್ರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಆರ್.‌ ಅಶೋಕ್‌ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಹಾಸನ ಜಿಲ್ಲಾ ಉಸ್ತುವಾರಿಯಾಗಿ, ಜತೆಗೆ ಮಂಡ್ಯ ಜಿಲ್ಲೆಯನ್ನೂ ನಿಭಾಯಿಸುತ್ತಿದ್ದ ಸಚಿವ ಕೆ. ಗೋಪಾಲಯ್ಯ ಅವರ ಸ್ಥಾನಕ್ಕೆ ಅಶೋಕ್‌ ಅವರ ನೇಮಕವಾಗಿತ್ತು.

ಆದರೆ ಅಶೋಕ್‌ ಹೆಸರು ಘೋಷಣೆ ಆಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗತೊಡಗಿತು. ಅಶೋಕ್‌ ಅವರು ಜೆಡಿಎಸ್‌ ಜತೆಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡುತ್ತಾರೆ, ಪಕ್ಷವನ್ನು ಬೆಳೆಯರಲು ಅವಕಾಶ ನೀಡುವುದಿಲ್ಲ ಎಂದು ಆರೋಪಿಸಲಾಗಿತ್ತು. ಇದೀಗ ಈ ಕುರಿತು ಸಿಎಂ ಬಸವರಾಜ ಬೊಮ್ಮಾಯೊ ಅವರಿಗೆ ಅಶೊಕ್‌ ಪತ್ರ ಬರೆದಿದ್ದಾರೆ.

ತಮ್ಮನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದ್ದಕ್ಕೆ ಮೊದಲಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. “26ನೇ ಜನವರಿ 2023ರ ಗಣರಾಜ್ಯೋತ್ಸವ ದಿನಾಚರಣೆಯಂದು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ನನ್ನನ್ನು ನೇಮಿಸಿದ್ದು, ಅದೇ ಸಂದರ್ಭದಲ್ಲಿ ನನ್ನನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿರುತ್ತದೆ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನನಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡದಂತೆ ತಮ್ಮಲ್ಲಿ ಮನವಿ ಮಾಡಿದ್ದೆ. ಆದಾಗ್ಯೂ ತಾವು ನನ್ನ ಮೇಲೆ ವಿಶ್ವಾಸವಿಟ್ಟು ಗಣರಾಜ್ಯೋತ್ಸವ ದಿನಾಚರಣೆ ದಿನದಂದು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ನೇಮಿಸಿರುವುದಕ್ಕೆ ನಾನು ಆಭಾರಿಯಾಗಿರುತ್ತೇನೆ” ಎಂದಿದ್ದಾರೆ.

“ತಮಗೆ ತಿಳಿದಿರುವಂತೆ ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್‌ ಮತ್ತು ವಿಜಯಪುರ ಜಿಲ್ಲೆಗಳ ಲಂಬಾಣಿ ತಾಂಡಾ, ಹಟ್ಟಿ, ಇತ್ಯಾದಿ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಸುಮಾರು 53,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ವಿತರಿಸಿದ್ದು, ಇದೇ ಮಾದರಿಯಲ್ಲಿ ಮುಂದಿನ 30 ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿರುತ್ತದೆ”

“ಬಡವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ 94ಸಿ ಮತ್ತು 94ಸಿಸಿ ರಡಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಸುಮಾರು 10,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಬೆಂಗಳೂರು ನಗರದಲ್ಲಿ ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.”

“ಕಂದಾಯ ಇಲಾಖೆ ಪ್ರಾರಂಭಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಸರ್ಕಾರದ ಜನಪ್ರಿಯ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು, ಪಕ್ಷದ ಶಾಸಕರು ಅವರ ಕ್ಷೇತ್ರದಲ್ಲಿ ನಾನು ವಾಸ್ತವ್ಯ ಹೂಡಬೇಕೆಂದು ಒತ್ತಡ ಹೇರುತ್ತಿದ್ದು, ಇನ್ನೂ ಕನಿಷ್ಠ 2-3 ಜಿಲ್ಲೆಗಳಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡಬೇಕಿರುತ್ತದೆ.

ಮುಂದುವರಿದು, ವಿಧಾನಸೌಧದ ಹೊರ ಆವರಣದ ಪೂರ್ವದಿಕ್ಕಿನ ಜಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡರ ಮತ್ಥಳಿಯನ್ನು ಸ್ಥಾಪಿಸುವ ಸಲುವಾಗಿ ರಚಿಸಿರುವ ಉಸ್ತುವಾರಿ ಸಮಿತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಗಿದ್ದು, ಸದರಿ ಕಾರ್ಯವನ್ನು 30 ದಿನಗಳಲ್ಲಿ ಪೂರ್ಣಗೊಳಿಸಿ ಪುತ್ಥಳಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿರುತ್ತದೆ”

“14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಿದ್ದು, ಮಾರ್ಚ್ 23 ರಿಂದ ಮಾರ್ಚ್ 30 ರವರೆಗೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಬೇಕಾಗಿರುತ್ತದೆ.‌

ಇದನ್ನೂ ಓದಿ: Go Back Ashok: ಮಂಡ್ಯದಲ್ಲಿ ಹೆಚ್ಚಾದ ಅಶೋಕ್‌ ಗೋ ಬ್ಯಾಕ್‌ ಅಭಿಯಾನ; ಬೇಡ ಹೊಂದಾಣಿಕೆ ರಾಜಕಾರಣವೆಂದ ಬಿಜೆಪಿ ಕಾರ್ಯಕರ್ತರು

ನಾನು ಇವೆಲ್ಲವೂ ಸರ್ಕಾರದ ಪ್ರಮುಖ ಜನಪ್ರಿಯ ಕಾರ್ಯಕ್ರಮಗಳಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಾಗಿರುವುದರಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿರ್ವಹಿಸಲು ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರ ಜವಾಬ್ದಾರಿಯಿಂದ ನನ್ನನ್ನು ವಿಮುಕ್ತಿಗೊಳಿಸಬೇಕೆಂದು ಕೋರುತ್ತೇನೆ.

ಜನವರಿ 25ರಂದು ನಾನು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬೈಕ್ ರಾಲಿ ಮೂಲಕ ನನ್ನನ್ನು ಸ್ವಾಗತಿಸಿ, ಮಂಡ್ಯ ಜಿಲ್ಲೆಯ ಜನತೆ ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಮಂಡ್ಯ ಜಿಲ್ಲೆಯ ಎಲ್ಲಾ ನಾಗರಿಕ ಬಂಧುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು” ಎಂದಿದ್ದಾರೆ.

ಅಶೊಕ್‌ ಅವರು ತಮಗೆ ಕಾರ್ಯಭಾರ ಹೆಚ್ಚಾಗಿದೆ ಎನ್ನುವುದನ್ನಷ್ಟೆ ಉಲ್ಲೇಖಿಸಿದ್ದು, ತಮ್ಮ ವಿರುದ್ಧ ವ್ಯಕ್ತವಾದ ವಿರಧವನ್ನು ಪತ್ರದಲ್ಲಿ ಎಲ್ಲಿಯೂ ನಮೂದಿಸಿಲ್ಲ. ಅಶೋಕ್‌ ಅವರ ಮನವಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.

Exit mobile version