ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ, ಇಂದು ರಾಮನಗರದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ಹಾಗೂ ನಾಳೆ ರಾಮನಗರ, ಹೊನ್ನಾಳಿ, ಹರಿಹರ, ಹಾವೇರಿ ಜಿಲ್ಲೆಯ ರಾಣೆಬೆನ್ನೂರುಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸಿದ್ದರಾಮಯಯ್ಯ, ಡಿಕೆ ಶಿವಕುಮಾರ್ ಮುಂತಾದ ಮುಖಂಡರು ಪಾಲ್ಗೊಳ್ಳಲಿದ್ದರು. ಧ್ರುವನಾರಾಯಣ ಅವರ ಸಂತಾಪ ಸೂಚಕವಾಗಿ ಇವುಗಳನ್ನು ಹಾಗೂ ಕಾಂಗ್ರೆಸ್‌ನ ಇತರ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ʼʼಒಬ್ಬ ಪ್ರಗತಿಪರ ರಾಜಕಾರಣಿ, ಅಭಿವೃದ್ಧಿ ಪರ ರಾಜಕಾರಣಿ, ನನ್ನ ಅತ್ಯುತ್ತಮ ಸ್ನೇಹಿತರಾಗಿದ್ದ ಧ್ರುವನಾರಾಯಣ ಅವರ ಸಾವಿನ ಸುದ್ದಿ ನಂಬಲು ಆಗ್ತಿಲ್ಲ. ಸಂಸತ್ತಿನಲ್ಲಿ ಕರ್ನಾಟಕದ ಪರ ವಿಶೇಷ ಕಾಳಜಿ ಇರುವ ರಾಜಕಾರಣಿಯಾಗಿದ್ದರು. ಚಾಮರಾಜನಗರದ ಅಭಿವೃದ್ಧಿ ಬಗ್ಗೆ ಸದಾ ಚಿಂತೆ ಮಾಡುತ್ತಿದ್ದರು. ಅವರ ಅಗಲಿಕೆ ಕೇವಲ ಚಾಮರಾಜನಗರ ಜಿಲ್ಲೆಗಲ್ಲ, ರಾಜ್ಯಕ್ಕೆ ಆದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಸಂತಾಪ
ʼʼನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆʼʼ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: R Dhruvanarayan: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೃದಯಾಘಾತದಿಂದ ನಿಧನ